ಚಾಮರಾಜನಗರ: ಯುವಜನರು ಅಡ್ಡದಾರಿ ಹಿಡಿದರೆ ಸಮಾಜಕ್ಕೆ ಕೆಡಕಾಗುತ್ತದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ತಿಳಿಸಿದರು.
ತಾಲೂಕಿನ ಅಮಚವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಚಟ ಯುವಪೀಳಿಗೆ ಅಡ್ಡದಾರಿ ಹಿಡಿಯಲು ಕಾರಣವಾಗುತ್ತದೆ. ಇದರಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಮಾಜದ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಯುವಜನರ ದುಷ್ಚಟಗಳಿಗೆ ಬಲಿಯಾದರೆ ಒತ್ತಡದಿಂದ ಬದುಕಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವುದರಲ್ಲಿ ವಿಶ್ವಸಂಸ್ಥೆಯು ಪ್ರಯತ್ನ ಪಡುತ್ತಿದೆ. ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮಗಳಿಂದ ಯುವಜನರನ್ನು ಒಟ್ಟುಗೂಡಿಸಿ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿವನಂಜಪ್ಪ ಅವರು ಯುವಜನರು ಸ್ವಾಮಿ ವಿವೇಕಾನಂದರ ಹಾದಿಯಲ್ಲಿ ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ಆಶಯದಂತೆ ಮುನ್ನಡೆಯಬೇಕು. ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಬದುಕು ಹಸನಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ಬಂಗಾರು, ನಿರ್ದೇಶಕರಾದ ನಂದಿನಿ, ಜೈ ಭುವನೇಶ್ವರಿ ಕನ್ನಡ ವೇದಿಕೆ ಉಪಾಧ್ಯಕ್ಷರಾದ ರೇವಣ್ಣ, ನೆಹರು ಯುವ ಕೇಂದ್ರದ ಸಿಬ್ಬಂದಿ ಶಂಕರ್, ಉಪನ್ಯಾಸಕರಾದ ಆರ್. ಮೂರ್ತಿ, ಶಿವಸ್ವಾಮಿ, ಶ್ರೀಕಂಠನಾಯಕ, ಶೃತಿ, ಸುನಂದ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.