-ಚಿದ್ರೂಪ ಅಂತಃಕರಣ
ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ ಮತ್ತು ಚಲನೆಯಲ್ಲಿ ಇರುತ್ತದೆ. ಶಕ್ತಿ ಕುಂದಿದ ಪ್ರತಿಯೊಂದರಲ್ಲೂ ನ್ಯೂನ್ಯತೆಗಳು ಕಾಣಿಸಿಕೊಳ್ಳುತ್ತದೆ ಅಥವಾ ಶಕ್ತಿ ಕೆಂದ್ರವು ವ್ಯವಸ್ಥೆವೊಂದರಲ್ಲಿ ಸ್ಥಿರವಾಗಿರದೇ ಚದುರಿದ್ದಾಗಿ ಆ ವ್ಯವಸ್ಥೆಯಲ್ಲಿ ನ್ಯೂನ್ಯತೆಗಳು ಹೆಚ್ಚಾಗುತ್ತದೆ.
ಹೀಗೆ ಮಾನವರ ಪ್ರಾಣ ವ್ಯವಸ್ಥೆಯಲ್ಲೂ ಸಹ ಈ ಶಕ್ತಿಯ ಆಯಾಮವಿದ್ದು. ಇದು ಯಾವಾಗ ವಿಚಲನೆಯಲ್ಲಿ ಸಿಲುಕುತ್ತದೋ ಆಗ ಈ ನ್ಯೂನ್ಯತೆಗಳು ಕಂಡುಬರುತ್ತದೆ. ಮಾನವರಲ್ಲಿ ಕಂಡುಬರುವ ಬಲಹೀನತೆಗಳು ಭಿನ್ನ ಭಿನ್ನವಾಗಿರುತ್ತದೆ ಅಥವಾ ಈ ಬಲಹೀನತೆಗಳಲ್ಲಿ ಪ್ರಕಾರಗಳನ್ನು ಗುರುತಿಸಿಕೊಳ್ಳಬಹುದು. ಉದಾಹರಣೆಗೆ ಸಮಾಜದಲ್ಲಿ ಎತೇಚ್ಚವಾಗಿ ಇರುವ ಒಂದೆರೆಡು ಬಲಹೀನತೆಗಳನ್ನು ತಿಳಿಸುವುದಾದರೆ. ಮೊದಲನೆಯದು ಅನುಕೂಲ ವಾತಾವರಣದಲ್ಲೇ(ಕಂಫಟ್೯ ಜೋನ್) ಯಾವಾಗಲೂ ಬದುಕಲು ಯತ್ನಿಸುವುದು. ಅನುಕೂಲ ಪರಿಸ್ಥಿತಿಯ ಕೆಲಸಗಳಿಗೆ ಮಾತ್ರ ತನ್ನ ತನು-ಮನಗಳನ್ನು ಶ್ರಮಿಸಲು ಇಚ್ಛಿಸುವುದು. ಎರಡನೆಯದು ಚಿಕ್ಕ ಚಿಕ್ಕ ವಿಷಯಗಳಿಗೂ ನಕಾರಾತ್ಮಕವಾಗಿ ಅಭಿಪ್ರಾಯಿಸುವುದು ಮತ್ತು ಆಗುವಂತಹ ಸಾಧ್ಯತೆಗಳಿಂದ ದೂರ ಉಳಿಯುವುದು. ಹೀಗಾಗಿ ತನ್ನ ಜೀವನವನ್ನು ಒಂದು ಹಂತಕ್ಕೆ ತೃಪ್ತಿದಾಯಕವಾಗಿ ಪಡೆಯಲಾಗದಷ್ಟು ಬೇಸರಿಕೆಯಲ್ಲಿ, ನಿರಾಸೆಯಲ್ಲಿ ಜೀವನವನ್ನು ಸಾಗಿಸಿ ಅದಕ್ಕೆ ತನ್ನ ಸುತ್ತಮುತ್ತ ಇರುವ ಸನ್ನಿವೇಶಗಳನ್ನು ಅಥವಾ ವ್ಯಕ್ತಿಗಳನ್ನು ದೂರುವುದು ಮತ್ತು ಇನ್ನಿತರದ್ದಾಗಿರುತ್ತದೆ.
ಈ ಬಲಹೀನತೆ ಕಂಡುಬರುವುದು ಒಂದು ವ್ಯಕ್ತಿಯೊಳಗಿನ ಶಕ್ತಿಯ ಪ್ರಮಾಣ ಕಡಿಮೆಗೊಂಡಿರುವುದರಿಂದ ಇನ್ನೊಂದು ಆತನಲ್ಲಿ ಇರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದ ಸುತ್ತಮುತ್ತಲ ಪರಿಸ್ಥಿತಿಗಳಲ್ಲಿ ಸಿಲುಕಿರುವುದರಿಂದ. ಈ ರೀತಿಯದ್ದೇ ಬಲಹೀನತೆಗಳು ಮಾನವರನ್ನು ಹಲವಾರು ಬಗೆಯಾಗಿ ಸುತ್ತುವರೆದಿದೆ. ಉತ್ತಮ ವ್ಯಕ್ತಿತ್ವ ಮತ್ತು ಬದುಕಿನ ವಾಸ್ತವಿಕ ಆದರ್ಶಗಳು ಈ ಬಲಹೀನತೆಗಳನ್ನು ತೊಡೆದಾಕುವಲ್ಲಿ ಸಹಕರಿಸುತ್ತವೆ. ಯಾರಲ್ಲಿ ಬಲಹೀನತೆಗಳನ್ನು ಜಯಿಸಬೇಕು ಎನ್ನುವ ಆಲೋಚನೆ ಮಾರ್ಗತೋರುವುದಿಲ್ಲವೋ ಅವರೆಲ್ಲಾ ಬದುಕಿನ ಅಪಾರ ನಷ್ಟತೆಯಲ್ಲಿ ಸಿಲುಕುತ್ತಾರೆ. ಇನ್ನೂ ಹಲವರಿಗೆ ಇದರಿಂದ ಹೊರಬರಬೇಕೆನ್ನುವ ತುಡಿತ ಹೆಚ್ಚಾಗಿರುತ್ತದೆ ಮಾರ್ಗ ತಿಳಿದಿರುವುದಿಲ್ಲ. ಹಾಗೊಂದು ವೇಳೆ ತಿಳಿದರೂ ಒಂದೆರೆಡು ಪ್ರಯತ್ನದಲ್ಲಿ ನಿರಾಸೆಗೊಳ್ಳುವವರು ಇರುತ್ತಾರೆ. ಇನ್ನೂ ಕೆಲವರು ಹಲವು ಪ್ರಯತ್ನಗಳಲ್ಲಿ ತೊಡಗಿ ಅಭ್ಯಾಸಕ್ಕೆ ಹೊಗ್ಗಿಸಿಕೊಂಡು ಬಲಹೀನತೆಯಿಂದ ಹೊರಬೀಳುತ್ತಾರೆ. ಬಲಹೀನತೆಗಳಿಂದ ಹೊರ ಜಿಗಿದವರ ಬದುಕೆಲ್ಲವೂ ಮುಂದೆ ಯಶಸ್ಸಿನ ಹಲವು ರೂಪಗಳಾಗಿ ಮಾರ್ಪಾಡನ್ನು ಪಡೆದುಕೊಳ್ಳುತ್ತದೆ.
ಬಲಹೀನತೆಗಳನ್ನು ಬಗ್ಗಿಬಡಿಯುವ ಮಾರ್ಗಗಳೆಂದರೆ ಮೊದಲು ಇರುವ ಸಮಸ್ಯೆಗಳ ಸ್ಪಷ್ಟತೆ ಪಡೆಯುವುದು. ಆ ಸಮಸ್ಯೆಗಳಿಗಿರುವ ಪರಿಹಾರಗಳನ್ನು ಕಂಡುಕೊಳ್ಳುವುದು ಮತ್ತು ಈ ದಾಟಿಯಲ್ಲಿ ಈ ಸಮಸ್ಯೆಗಳನ್ನು ಎದುರಿಸಿದವರು ಮೊದಲೇ ಯಾರಾದರೂ ಇದ್ದರೆ ಅವರ ಉಪಾಯ ಮಾರ್ಗವನ್ನು ಎರವಲಾಗಿ ಪಡೆಯುವುದು. ಆ ಸಲಹೆಗಳೊಂದಿಗೆ ಬೆರೆಯುವುದು. ಇಲ್ಲಾ ನೀವೇ ಮೊದಲು ಆ ಸಮಸ್ಯೆಗೆ ಒಳಗಾಗಿದ್ದರೆ ಪರಿಹಾರಗಳನ್ನು ಕಂಡುಕೊಂಡು ಆ ಪರಿಹಾರದ ಮಾರ್ಗದಲ್ಲಿ ಯಶಸ್ಸನ್ನು ಕಾಣುವವರೆಗೂ ಶ್ರಮಿಸುವುದು. ಇದೊಂದೇ ಬದುಕಿನ ಧ್ಯೇಯವಾಗಿಬಿಡಬೇಕು ಆಗ ಮಾತ್ರ ನೀವಂದುಕೊಂಡ ಯಶಸ್ಸು ನಿಮ್ಮ ಕಣ್ಣಮುಂದಿರುತ್ತದೆ. ಒಳ್ಳೆಯದೇ ಆಗಲಿ ಕೆಟ್ಟದ್ದೇ ಆಗಲಿ ನಿರಂತರವಾದ ಬಳಕೆಯಿಂದ ಅದು ಅಭ್ಯಾಸದ ರೂಪವನ್ನು ಪಡೆದುಕೊಳ್ಳುತ್ತದೆ. ಈ ಅಭ್ಯಾಸವು ಅಂದುಕೊಂಡದ್ದನ್ನು ಹತ್ತಿರವಾಗಿಸುವ ವ್ಯವಸ್ಥೆಯಾಗಿದೆ. ಮಾನವರಲ್ಲಿ ಈ ಅಭ್ಯಾಸ ಎನ್ನುವ ಕ್ರಿಯೆಯು ಹೆಚ್ಚಾಗಿ ಕೆಟ್ಟದಕ್ಕೆ ಬಳಕೆಯಾಗುತ್ತದೆ. ಮಾನವರು ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸದೆ ಮನಸ್ಸಿನ ಹುಚ್ಚು ಕುದುರೆಯ ಬೆನ್ನತ್ತಿ ಆಸೆಗಳನ್ನು ಮೋಹಗಳನ್ನು ಪೂರೈಸಿಕೊಳ್ಳುವತ್ತಾ ಸದಾ ತುಡಿಯುತ್ತಿರುವಾಗ ಪರಿಚಯವಾಗುವ ಹವ್ಯಾಸಗಳೆಲ್ಲವೂ ಅನೈತಿಕ ಚಟುವಟಿಕೆಗಳೇ ಆಗಿರುತ್ತದೆ. ಈ ಹವ್ಯಾಸಗಳಿಗೆ ನಿರಂತರವಾಗಿ ಮನಸ್ಸನ್ನು ನೀಡಿ ಕ್ರಿಯೆಗೊಂಡಾಗ ಕೆಟ್ಟ ಅಭ್ಯಾಸ ಏರ್ಪಟ್ಟು ಶಕ್ತಿಯ ಕೇಂದ್ರವು ವಿಚಲಿತಗೊಂಡು ಒಂದಾದರೊಂದಂತೆ ಸಮಸ್ಯೆಗಳಿಗೆ ಅಥವಾ ಬಲಹೀನತೆಗಳಿಗೆ ಬಲಿಯಾಗುತ್ತಿರುತ್ತಾರೆ.

ಈ ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟು ಮನಸ್ಸೆಂಬ ಹುಚ್ಚು ಕುದುರೆಗೆ ಲಗಾಮು ಹಾಕಿ ಹವ್ಯಾಸಗಳಲ್ಲಿ ಶುದ್ದತನ ಕಂಡುಕೊಂಡರೆ ಮತ್ತು ಇಂತಹ ಹವ್ಯಾಸವನ್ನು ನಿರಂತರ ಪ್ರಯತ್ನದ ಮೂಲಕ ಅಭ್ಯಾಸದ ಪ್ರಕ್ರಿಯೆಗೆ ಒಳಪಡಿಸಿದರೆ ಖಂಡಿತವಾಗಿಯೂ ನಮ್ಮ ಶಕ್ತಿ ಕೇಂದ್ರ ಚದುರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಬಳಿ ಬಲಹೀನತೆಗಳ ಸುಳಿವೇ ಇರುವುದಿಲ್ಲ.

ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಶಕ್ತಿಯೊಂದಿಗಿನ ಅಭ್ಯಾಸದ ಬಲವಾದ ಉಪಯೋಗವನ್ನು ಪಾಂಡವರಿಗೆ ಉಪದೇಶಿಸಿದ ಫಲಕೃತವೇ ಪಾಂಡವರ ವಿಜಯ ಕಹಳೆಯಾಯಿತು. ಹಾಗಾದರೆ ಕೌರವರು ಅಭ್ಯಾಸ ಮಾಡಿರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಅವರು ಕೈಗೊಂಡ ಪ್ರಯತ್ನಗಳಲ್ಲಿ ನಿರಂತರತೆ ಇದ್ದರೂ ಅವುಗಳು ಒಳ್ಳೆಯ ಅಭ್ಯಾಸಗಳಾಗಿ ಇರದ ಕಾರಣ ಸೋಲೆಂಬುವುದು ಕೌರವರ ಬೆನ್ನಂಟಿತು. ಕೌರವರ ಶಕ್ತಿಯ ವಿಚಲನೆಯಿಂದಾಗಿ ಬಲಹೀನತೆಗಳು ಆವರಿಸಿಕೊಂಡಿತು. ಹೀಗಾಗಿಯೇ ಅಭ್ಯಾಸಗಳಲ್ಲೂ ಸ್ಪಷ್ಟತೆ ಅಗತ್ಯ. ಏಕಲವ್ಯ ದ್ರೋಣಾಚಾರ್ಯರಿಂದ ಕಾರಣಾಂತರಗಳಿಂದ ದೂಡಲ್ಪಟ್ಟರೂ ಗುರುವಿನ ಆಶೀರ್ವಾದದಿಂದ ವಂಚಿತನಾದರೂ ತನ್ನಲ್ಲಿದ್ದ ಶಕ್ತಿಯನ್ನು ಗ್ರಹಿಕೆ ಮತ್ತು ಬಿಲ್ವಿದ್ಯೆಯ ನಿರಂತರ ಪ್ರಯತ್ನವನ್ನು ಅಭ್ಯಾಸಕ್ಕೆ ಒಳಪಡಿಸಿಕೊಂಡಿದುದರ ಫಲವೇ ಆತನು ಅರ್ಜುನನ್ನೂ ಮೀರಿಸುವ ಶ್ರೇಷ್ಠ ಬಿಲ್ವಿಧ್ಯೆಗಾರನಾಗಿದ್ದು ಮತ್ತು ಶಬ್ಧವೇದಿ ವಿಧ್ಯೆಯನ್ಮು ಕರಗತಗೊಳಿಸಿಕೊಂಡಿದ್ದು. ಈ ಘಟನೆಗಳು ಅಭ್ಯಾಸದ ಮಹತ್ವವನ್ನು ಸಾರಿ ಹೇಳುತ್ತಿದೆ. ಈ ಅಭ್ಯಾಸದ ಮಹಾ ಉಪಕೃತಕ್ಕೆ ನಾವುಗಳು ಶರಣಾಗಿ ನಮ್ಮ ಬಲಹೀನತೆಗಳನ್ನು ಜಯಿಸಲು ತೊಡಗಿದರೆ ಖಂಡಿತ ನಾವು ಉತ್ತಮ ಬದುಕಿಗೆ ಮುಖಮಾಡಬಹುದು. ಶಾಂತಿಯುತ ಜೀವನದಲ್ಲಿ ಸಂತೋಷವನ್ನು ಕಾಣಬಹುದು. ಬುದ್ಧನೂ ಸಹ ಧ್ಯಾನಸ್ಥ ಸ್ಥಿತಿಯಲ್ಲಿ ಶಕ್ತಿಯ ಕೇಂದ್ರವಾಗಿ ಬಹುವರ್ಷಗಳ ಕಾಲ ಒಂದೇ ದೃಷ್ಟಿಕೋನದಲ್ಲಿ ಅಭ್ಯಾಸದ ಹಾದಿಯಲ್ಲಿ ನಡೆದುದರಿಂದ ಆತನ ಬಲಹೀನತೆಗಳನ್ನು ಜಯಿಸಿದನು. ಒಳ್ಳೆಯ ಹವ್ಯಾಸಗಳ ಮೂಲಕ ಅಭ್ಯಾಸಗಳಿಗೆ ತೊಡಗಿದ ಮರುಕ್ಷಣವೇ ನಮ್ಮ ಚದುರಿದ ಶಕ್ತಿಯು ಕೇಂದ್ರಗೊಳ್ಳುತ್ತಾ ಹೋಗುತ್ತದೆ ನಂತರ ಅಗಾಧ ಶಕ್ತಿಯ ಮೂಲಕ ನಾವು ಅಗಾಧತೆಯನ್ನೇ ಸೃಷ್ಟಿಸಬಹುದು. ಬಲಹೀನತೆಗಳನ್ನು ಜಯಿಸಬಹುದು. ಶಕ್ತಿ ಮತ್ತು ಅಭ್ಯಾಸದ ಬೀಜಮಂತ್ರಗಳನ್ಮು ಬದುಕಿನ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಮಾನವ ಸ್ವರೂಪದ ನೆಲೆಯಲ್ಲಿ ತೃಪ್ತಿಯನ್ನು ಪಡೆಯಬಹುದು.

ಚಿಮಬಿಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ವಿಮರ್ಶಕ, ಸಂಶೋಧಕ.
ಎಚ್.ಡಿ. ಕೋಟೆ ಮೈಸೂರು.
*ದೂರವಾಣಿ ಸಂಖ್ಯೆ:- 8884684726