ಗುಂಡ್ಲುಪೇಟೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಜೆಡಿಎಸ್ ವಕ್ತಾರರು ಹಾಗೂ ಯುವ ಮುಖಂಡ ಎನ್.ರಾಜುಗೌಡ ನೇತೃತ್ವದಲ್ಲಿ 90 ಗಿಡ ನೆಡುವ ಜೊತೆಗೆ ತಾಲೂಕಿನ ವಿವಿಧ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಪಟ್ಟಣದ ಊಟಿ ರಸ್ತೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇವು ಸೇರಿದಂತೆ 90 ಗಿಡಗಳನ್ನು ಶಾಲಾ ಮಕ್ಕಳೊಂದಿಗೆ ನೆಟ್ಟು ಶ್ರಮಧಾನ ಮಾಡಲಾಯಿತು. ಜೊತೆಗೆ ಕಬ್ಬಹಳ್ಳಿ, ತೆರಕಣಾಂಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ವಕ್ತಾರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿ ಎನ್.ರಾಜುಗೌಡ ಮಾತನಾಡಿ, ನಮ್ಮ ಮಣ್ಣಿನ ಹೆಮ್ಮೆಯ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ 90ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಬೇಕು ಎಂದು ಉದ್ದೇಶದಿಂದ ಶಾಲಾ ಆವರಣದ ಸ್ವಚ್ಛತೆ ಜೊತೆಗೆ 90 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗಿಡ ಹಾಗು ಪರಿಸರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಗಿಡ ನೆಟ್ಟರೆ ಸಾಲದು ಅದನ್ನು ಉಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ನೆಟ್ಟಿರುವ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಹಿರಿಯ ಮುಖಂಡ ಬಸವರಾಜಸ್ವಾಮಿ ಮಾತನಾಡಿ, ರೈತರ ಪಾಲಿನ ಆಶಾಕಿರಣ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು 90ನೇ ವಸಂತಕ್ಕೆ ಕಾಲಿಟ್ಟಿ ಸುಸಂದರ್ಭವಾಗಿದೆ. ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಲು ಅವರ ಪಾತ್ರ ಮಹತ್ವದ್ದಾಗಿದ್ದು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾಡಿನ ಜನತೆಗೆ ಕೊಟ್ಟ ಕೊಡುಗೆ ಅಪಾರ. ಈ ಕಾರಣದಿಂದ ಹೆಚ್.ಡಿ.ದೇವೇಗೌಡರು ರೈತರು, ಪರಿಸರ, ನೀರಾವರಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರ ಪ್ರತೀಕವಾಗಿ 90 ಗಿಡ ನೆಟ್ಟು ಜನ್ಮ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.

ರೋಟರ್ ಛೇರ್ಮನ್ ರವಿಕುಮಾರ್, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ್, ಜೆಡಿಎಸ್ ಯುವ ಮುಖಂಡ ರಾಜೇಶ್(ರಾಸ), ಪ್ರವೀಣ್ ಕುಮಾರ್, ಮನು, ಮದನ್ ಗೌಡ, ಕಳ್ಳಿಪುರ ಕುಮಾರ್, ರಘು, ಗಿರೀಶ್, ಪ್ರತಾಪ್, ಲೋಕೇಶ್, ಮುತ್ತುರಾಜ್, ಸೋಮಶೇಖರ್, ಅಕ್ಷಯ್, ಆಕಾಶ್, ರಮೇಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

ವರದಿ: ಬಸವರಾಜು ಎಸ್.ಹಂಗಳ