ಚಾಮರಾಜನಗರ: ದೇಹ ಮತ್ತು ಮನಸ್ಸುಗಳ ಕ್ರಿಯಾಶೀಲತೆ, ಉತ್ತಮ ಆರೋಗ್ಯ ಸಂವರ್ಧನೆಗಾಗಿ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗನಿರತ ಸಂಘ ಸಂಸ್ಥೆಗಳು ಹಾಗೂ ಜಿಲ್ಲೆಯ ಎಲ್ಲಾ ಇಲಾಖೆ ವೃಂದದ ಸಹಯೋಗದೊಂದಿಗೆ 'ಮಾನವೀಯತೆಗಾಗಿ ಯೋಗ' ಘೋಷ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗದಲ್ಲಿ ಅಷ್ಟಾಂಗಯೋಗ ಪ್ರಮುಖವಾಗಿದೆ. ಪತಂಜಲಿ ಯೋಗ ಸೂತ್ರದನ್ವಯ ಯಮ, ನಿಯಮ, ಅಸನ, ಪ್ರಾಣಾಯಾಮ, ಪಥ್ಯಾಹಾರ, ಧ್ಯಾನ, ಧಾರಣ ಹಾಗೂ ಸಮಾಧಿಯಂತಹ ಅಷ್ಟಸೂತ್ರಗಳಿದ್ದು, ಪ್ರತಿದಿನ ಬೆಳಗಿನಿಂದ ಯಮ, ನಿಯಮದಿಂದ ಆರಂಭವಾಗಿ ರಾತ್ರಿ ಸಮಯದ ಸಮಾಧಿವರೆಗಿನ ದಿನಚರಿಯಲ್ಲಿ ನಾವೆಲ್ಲರೂ ೮ ಅಸನಗಳನ್ನು ಅನುಸರಣೆ ಮಾಡುತ್ತೇವೆ. ಜೀವನ ಕ್ರಮವನ್ನು ಉತ್ತಮಪಡಿಸಿಕೊಳ್ಳಲು ಯೋಗದ ಅರಿವು ಎಲ್ಲರಿಗೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಆಯುಷ್ ಇಲಾಖೆಯ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಮಾನಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಾಚೀನ ಪರಂಪರೆಯ ಪ್ರತೀಕವಾಗಿರುವ ಯೋಗವನ್ನು ಭಾರತ ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಯೋಗ ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆದ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಸುಜಾತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಗಂಗಾಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಯೋಗ ಶಿಕ್ಷಕರಾದ ನಿಜಗುಣ, ಯೋಗಬಂಧು ದೇವಿಕಾ ಅವರು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಯೋಗ ಪ್ರಾತ್ಯೇಕ್ಷಿಕೆಯಲ್ಲಿ ಎಲ್ಲಾ ಗಣ್ಯರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.