ಪ್ರಕೃತಿ ಮಾತೆ ಮತ್ತು ಭಕ್ತಿಯ ಸಂಗಮ ಈ ಕ್ಷೇತ್ರ
ಭೂಲೋಕದ ಸ್ವರ್ಗ, ಕರ್ನಾಟಕದ ಕಾಶ್ಮೀರ, ದಕ್ಷಿಣ ಗೋವರ್ಧನ ಗಿರಿ, ಕರ್ನಾಟಕದ ಊಟಿ, ನಿಸರ್ಗ ಪ್ರೇಮಿಗಳ ಸ್ವರ್ಗ ಹೀಗೆ ಅನೇಕ ಹೆಸರುಗಳಿಂದ ಜನಮಾನಸದಲ್ಲಿ ನೆಲೆಸಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1500 ಮೀಟರ್ ಎತ್ತರದಲ್ಲಿದ್ದು ಪ್ರಕೃತಿಯ ರಮಣೀಯ ಸೌಂದರ್ಯವನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ಲಕ್ಷಾಂತರ ಪ್ರವಾಸಿಗರನ್ನು ಬೆರಗುಗೊಳಿಸುವಂತೆ ಮಾಡುತ್ತಿದೆ. ಈ ಬೆಟ್ಟದ ವಿಶೇಷವೆಂದರೆ ಯಾವಾಗಲೂ ಮಂಜಿನಿಂದ ಆವರಿಸಿದ್ದು ಮಂಜಿನೊಳಗೆ ಬೆಟ್ಟವೋ ಬೆಟ್ಟದೊಳಗೆ ಮಂಜೋ ಎನ್ನುವಂತಿದೆ. ಈ ಬೆಟ್ಟವು ರಾಜ್ಯದಲ್ಲಿ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಭಕ್ತಿ ಮತ್ತು ಪ್ರಕೃತಿ ಸೌಂದರ್ಯದ ಸಂಗಮದಲ್ಲಿ ಶ್ರೀ ಗೋಪಾಲಸ್ವಾಮಿ ವಿರಾಜಮಾನವಾಗಿ ನೆಲೆಸಿದ್ದಾನೆ. 14ನೇ ಶತಮಾನದ ಚೋಳರ ಕಾಲದ ಪುರಾತನ ದೇವಾಲಯವಾಗಿದೆ.
ಹಿಮವದ್ ಶ್ರೀ ಗೋಪಾಲಸ್ವಾಮಿ ಬೆಟ್ಟದ ಐತಿಹ್ಯ.
ದ್ವಾಪರ ಯುಗದಲ್ಲಿ ಹಿಮವಂತ ಪರ್ವತನ ಮಗಳಾದ ಗಿರಿಜೆಯ ಕಲ್ಯಾಣಮಹೋತ್ಸವಕ್ಕೆ ಉತ್ತರ ದೇಶದ ಕಾಶಿಪಟ್ಟಣಕ್ಕೆ ಮೂವತ್ತ ಮೂರು ಕೋಟಿ ದೇವತೆಗಳು, ಬ್ರಹ್ಮ ರುದ್ರಾದಿಗಳು, ವ್ಯಾಸ ಪರಾಶರಾದಿ ಮುಖ್ಯವಾದ ಮಹಾಯಷಿಗಳು ಆಗಮಿಸಿದ್ದರು. ಸಕಲ ದೇವಾನುದೇವತೆಗಳೆಲ್ಲರ ಆಗಮನದ ಕಾರಣ ಭೂದೇವಿಯ ಭಾರ ಹೆಚ್ಚಾಗಿ ಸಹಿಸಲಾಗದೆ ಭೂಮಿಯು ಪಾತಾಳಕ್ಕೆ ಇಳಿದುದನ್ನು ಬ್ರಹ್ಮ ರುದ್ರಾದಿ ಸಕಲದೇವತೆಗಳು ಕಂಡು ಆಲೋಚನೆ ಮಾಡಿ, ಈ ಭಾರಕ್ಕೆ ಸಮವಾದ ಮಹಾಪುರುಷನನ್ನು ದಕ್ಷಿಣ ದೇಶಕ್ಕೆ ಕಳುಹಿಸಿ ಭೂಮಿಯನ್ನು ಸಮತೂಕಕ್ಕೆ ತರಲು ನಿರ್ಧರಿಸಿ ಅದಕ್ಕೆ ಅಗಸ್ತ್ಯ ಮಹರ್ಷಿಯೇ ಅರ್ಹರು ಎಂದು ನಂಬಿ ಅಗಸ್ತ್ಯ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ, ನೀವು ದಕ್ಷಿಣ ದೇಶಕ್ಕೆ ಹೋಗಿ ಅಲ್ಲಿ ವಾಸಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾರೆ. ಆ ಕೋರಿಕೆಯನ್ನು ಮನ್ನಿಸಿ ಅಗಸ್ತ್ಯ ಮಹರ್ಷಿಯು ದೇವಾನುದೇವತೆಗಳ ಅನುಮತಿ ಪಡೆದು ಗಂಗಾದಿ ಸರ್ವ ತೀರ್ಥಗಳನ್ನು ಕಮಂಡಲದಲ್ಲಿ ಸಂಗ್ರಹಿಸಿಕೊಂಡು ಹೊರಡಲು ಅನುವಾದಾಗ, ದೇವಾನುದೇವತೆಗಳು ಅಗಸ್ತ್ಯರಲ್ಲಿ ಮತ್ತೊಂದು ಪ್ರಾರ್ಥನೆಯನ್ನು ಮುಂದಿಟ್ಟರು. ಅದೇನೆಂದರೆ, “ವಿಂಧ್ಯನಿಗೂ ಮತ್ತು ಮಹಾಮೇರು ಪರ್ವತರಾಜನಿಗೂ ನಾನೇ ಹೆಚ್ಚು, ತಾನೇ ಹೆಚ್ಚು ಎಂಬ ವಿವಾದ ಉಂಟಾಗಿದ್ದು ಇದರಿಂದ ಕುಪಿತನಾಗಿರುವ ವಿಂಧ್ಯನು ಆಕಾಶಕ್ಕೆ ಬೆಳೆದು ಸೂರ್ಯ ಮತ್ತು ಚಂದ್ರನ ಬೆಳಕನ್ನು ತಡೆದಿರುವ ಕಾರಣ ಉದಯಾಸ್ತಮಗಳು ಕಾಣದೆ ಅಂಧಕಾರವಾಗಿದೆ. ಈ ನಿಮ್ಮ ಶಿಷ್ಯನಾದ ವಿಂಧ್ಯನ ದೆಸೆಯಿಂದ ಬಂದಿರುವ ಉಪದ್ರವವನ್ನು ಪರಿಹರಿಸಿ ನಮ್ಮನ್ನು ರಕ್ಷಿಸಬೇಕು” ಎಂಬುದಾಗಿ ಕೇಳಿಕೊಂಡ ಕಾರಣ ಅಗಸ್ತ್ಯ ಮುನಿಗಳು ಕಾಶಿಪಟ್ಟಣದಿಂದ ಹೊರಟು ದಕ್ಷಿಣ ದೇಶಕ್ಕೆ ಬರುವ ಮಾರ್ಗದಲ್ಲಿ ವಿಂಧ್ಯನ ಬಳಿ ಬಂದರು.
ವಿಂಧ್ಯನು ತನ್ನ ಗುರುಗಳಾದ ಅಗಸ್ತ್ಯ ಮುನಿಗಳು ಬರುವುದನ್ನು ಕಂಡು ನಮಸ್ಕರಿಸಲಾಗಿ, ಋಷಿಗಳು ಹಸನ್ಮುಖರಾಗಿ “ನಾವು ದಕ್ಷಿಣ ದೇಶಕ್ಕೆ ಹೋಗಿಬರುವವರೆಗೂ ಇದೇ ರೀತಿ ಇರಬೇಕು” ಎಂದು ಅಪ್ಪಣೆಕೊಟ್ಟು ವಿಂಧ್ಯನು ಬೆಳೆಯುವುದನ್ನು ನಿಲ್ಲಿಸಿ, ಉತ್ತರ ಗೋವರ್ಧನನ ಪರ್ವತಕ್ಕೆ ಬಂದು ಶ್ರೀ ಕೃಷ್ಣನನ್ನು ಪ್ರಾರ್ಥಿಸಿ, ತಾನು ದಕ್ಷಿಣ ದೇಶಕ್ಕೆ ದೇವತಾಕಾರ್ಯಕ್ಕೆ ಹೋಗುತ್ತಿರುವುನೆಂದು. ಅಲ್ಲಿಗೆ ಶ್ರೀ ಕೃಷ್ಣನು ರುಕ್ಮಿಣಿ ಸತ್ಯಭಾಮ ಸಮೇತರಾಗಿ ಬಿಜಯಂಗಯ್ಯಬೇಕೆಂದು ಪ್ರಾರ್ಥಿಸುತ್ತಾರೆ. ಶ್ರೀ ಕೃಷ್ಣನು ಋಷಿವರ್ಯರ ಕೋರಿಕೆಯನ್ನು ಮನ್ನಿಸಿ “ಹಾಗೆಯೇ ಆಗಲಿ, ನೀವು ಮುಂದೆ ಹೋಗಿರಿ” ಎಂದು ಮಾತು ಕೊಡುತ್ತಾರೆ.

ಅಗಸ್ತ್ಯ ಮುನಿಗಳು ಸ್ವಾಮಿಯ ಅಪ್ಪಣೆ ಪಡೆದು ಸಹ್ಯಾದ್ರಿಪರ್ವತಕ್ಕೆ ಬಂದು ಶ್ರೀ ಕೃಷ್ಣನನ್ನು ಕುರಿತು ತಪಸ್ಸು ಮಾಡುತ್ತಿರಲು ಶ್ರೀ ಕೃಷ್ಣನು ಉತ್ತರ ಗೋವರ್ಧನ ಪರ್ವತದಿಂದ ಸಕಲ ಋಷಿಗಣ ಸಮೇತ ಬಂದು ಅಗಸ್ತ್ಯ ಮುನಿಗಳಿಗೆ ಪ್ರತ್ಯಕ್ಷವಾಗಿ, “ನಿನ್ನ ತಪಸ್ಸು ಸಿದ್ದಿಸಿತು. ನಿನ್ನ ಮನೋಭಿಲಾಷೆಯನ್ನು ಕೋರಿಕೋ” ಎಂದು ಕೇಳಿದಾಗ ಮಹಾವರೇಣ್ಯದು ಧನ್ಯರಾಗಿ “ಈ ಸಹ್ಯಾದ್ರಿಯ ಆಗ್ನೇಯದಲ್ಲಿರುವ ಕಮಲಾಚಲ ಪರ್ವತಕ್ಕೆ, ಅಂದರೆ ದಕ್ಷಿಣ ಗೋವರ್ಧನಗಿರಿಯಲ್ಲಿ ನೆಲೆಸಿ, ಕಲಿಯುಗದಲ್ಲಿ ಸಕಲ ಜನರನ್ನು ಸಂರಕ್ಷಿಸಬೇಕು” ಎಂದು ಪ್ರಾರ್ಥಿಸಲಾಗಿ ಆಗ ಸ್ವಾಮಿಯು ಅಗಸ್ತ್ಯ ಮಹರ್ಷಿಗಳ ಕೋರಿಕೆಯನ್ನು ಒಪ್ಪಿ ಮೂರು ಷರತ್ತುಗಳನ್ನು ಹಾಕುತ್ತಾರೆ.
ಮೊದಲನೆಯದಾಗಿ ಈ ಸ್ಥಳವು ಯಾವಾಗಲೂ ಹಿಮದಿಂದ ಕೂಡಿರಬೇಕು.
ಎರಡನೆಯದಾಗಿ ಸಕುಟುಂಬವಾಗಿ ನೆಲೆಸಲು ಅವಕಾಶವಾಗಬೇಕು.
ಮೂರನೆಯದಾಗಿ ಸಪ್ತರ್ಷಿಗಳಿಂದ ಪೂಜೆಯಾಗಬೇಕು ಎನ್ನುತ್ತಾರೆ. ಈ ಷರತ್ತುಗಳಿಗೆ ಒಪ್ಪಿದ ಅಗಸ್ತ್ಯ ಮಹರ್ಷಿಗಳು ಸ್ವಾಮಿಯನ್ನು ಕಮಲಾದ್ರಿಗೆ ಬರಮಾಡಿಕೊಂಡು ಅಲ್ಲಿ ಪ್ರತಿಷ್ಠಾಪಿಸಿದರು. ಸಕಲವಾದ ತೀರ್ಥ, ಸಕಲವಾದ ಋಷಿಗಳೊಂದಿಗೆ ಸ್ವಾಮಿಯ ಆರಾಧನೆ ಮಾಡಿಕೊಂಡಿದ್ದರು. ಆ ಗಿರಿಪುಣ್ಯಕ್ಷೇತ್ರವೇ ಈಗಿನ ಗುಂಡ್ಲುಪೇಟೆ ತಾಲ್ಲೂಕಿನ ಶ್ರೀ ಹಿಮವದ್ ಗೋಪಾಲಸ್ವಾಮಿಯ ಬೆಟ್ಟವಾಗಿರುತ್ತದೆ.
ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ವಿಶ್ವಾವಸುನಾಮ ಸಂವತ್ಸರ, ಫಾಲ್ಗುಣ ಕೃಷ್ಣಪಕ್ಷದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಏಳು ದಿನಗಳು ಸಂಭ್ರಮ ಸಡಗರ ಅದ್ದೂರಿಯಾಗಿ ಜಾತ್ರೆಯು ನಡೆಯುತ್ತದೆ. ಈ ವರ್ಷ 2026 ಮಾರ್ಚ್ 12 ರಿಂದ 18ರ ವರೆಗೆ ನಡೆಯುತ್ತದೆ. ಬಹಳ ಮುಖ್ಯವಾಗಿ 14-03-2026 ಶನಿವಾರ ಏಕಾದಶಿ ಬೆಳಗ್ಗೆ ಸಂಜೆ 4-00 ಶ್ರೀಯವರ ಉತ್ಸವ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಷ್ಮಿಣೀ ಸತ್ಯಭಾಮ ಸಹಿತ ಶ್ರೀ ಹಿಮವದ್ಯೋಪಾಲಸ್ವಾಮಿಯವರ ‘ದಿವ್ಯಕಲ್ಯಾಣೋತ್ಸವ” ಹಾಗೂ 15-03-2026 ಭಾನುವಾರ ಬೆಳಗ್ಗೆ ಡೋಲಾಯಮಾನಂ ಗೋವಿಂದಂ ಮಂಚಸ್ಥಂ ಮಧುಸೂಧನಂ ರಥಸ್ಥಂ ಕೇಶವಂದೃಷ್ಟಾಪುನರ್ಜನ್ಮ ನವಿದ್ಯತೇ ಎಂಬ ಮರ್ಯಾದೆಯಂತೆ ದಿವ್ಯ ಬ್ರಹ್ಮ ರಥೋತ್ಸವವು ಅದ್ದೂರಿಯಾಗಿ ನಡೆಯುತ್ತದೆ ಎಂದು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣಭಟ್ಟರು ಇತಿಹಾಸ ಮತ್ತು ಜಾತ್ರೆಯ ಕುರಿತು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಭಿನ್ನ, ವಿಶೇಷವಾದ ರಥ.
ಪ್ರತಿವರ್ಷವೂ ಸುಮಾರು 35 ಅಡಿ ತೇರನ್ನು ಗೋಪಾಲಪುರದ ಗ್ರಾಮಸ್ಥರು ತಲತಲಾಂತರಗಳಿಂದ ಇತರ ರಥಗಳಂತೆ ಇರದೆ ವಿಶೇಷವಾಗಿ ಮೂರು ದಿನಗಳ ಪರಿಶ್ರಮದಿಂದ ಪ್ರತಿ ವರ್ಷವೂ ತೇರನ್ನು ಕಟ್ಟುತ್ತಾ ಬರುತ್ತಿದ್ದಾರೆ. ಕಾಡಿನಲ್ಲಿ ಸ್ವಾಭಾವಿಕವಾಗಿ ದೊರೆಯುವ ರಬ್ಬರಿನಂತೆ ಬಾಗುವ ಒತಗದ ಅಂಬು, ನಾರಳಕಡ್ಡಿಗಳು ಪಣತಾರು (ಪನಾಮರದ ತಾರು) ಬಳಸಲಾಗುತ್ತದೆ. ಇದರ ಜೊತೆಗೆ ತೇರಿಗೆ ಬೇಕಾದ ಬಿದಿರಿನ ಬೊಂಬುಗಳನ್ನು ಹೊನ್ನೇಗೌಡನಹಳ್ಳಿಯ ಗ್ರಾಮಸ್ಥರು ತಂದುಕೊಡುತ್ತಾರೆ. ಇವುಗಳನ್ನು ಬಳಸಿ ಶೃಂಗಾರ ಮಾಡಿ ಆಕರ್ಷಣಿಯವಾಗಿರುವಂತೆ ತರಹೇವಾರಿ ಹೂವುಗಳು, ಬಣ್ಣ ಬಣ್ಣದ ವಸ್ತ್ರಗಳು ಹಾಗೂ ಬಾವುಟಗಳಿಂದ ಸಿಂಗರಿಸಿರುವ ರಥದಲ್ಲಿ ಶ್ರೀ ಕೃಷ್ಣನು ರುಕ್ಮಿಣಿ ಸತ್ಯಭಾಮ ಸಮೇತರಾಗಿ ವಿರಾಜಮಾನವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಈ ವೈಭವವನ್ನು ನೋಡಲು ಎರಡು ಕಣ್ಣು ಸಾಲದು. 15.03.2026 ರಂದು ಬೆಳಿಗ್ಗೆ 11:30 ರಿಂದ 12:30 ರವರೆಗೆ ಬ್ರಹ್ಮ ರಥೋತ್ಸವವು ಶ್ರೀ ಕೃಷ್ಣನ ಮುಗಿಲು ಮುಟ್ಟುವ ಹರ್ಷೋದ್ಗಾರದೊಂದಿಗೆ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದಾ ಭಕ್ತಿಯಿಂದ ಜರುಗುತ್ತದೆ.
ಎಳೆನೀರು ದೀಪದ ಮಹಿಮೆ.
ಯುಗಾದಿ ಹಬ್ಬದ ದಿನ ಮಧ್ಯಾಹ್ನದ ನಂತರ ಗೋಪಾಲಪುರದ ದೊಡ್ಮನೆತನದ ಒಕ್ಕಲಿನವರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಕಾಡಿನಲ್ಲಿರುವ ಕಡಿದಾದ ಇಳಿಜಾರಿನ ಬಂಡೆಗಳ ನಡುವೆ ಸಂಜೆ ಶ್ರೀ ಸಿದ್ದ ದೇವರ ಕಾಣೆಗೆ ತೆರಳಿ ಅಲ್ಲಿ ಲಿಂಗ ರೂಪದಲ್ಲಿರುವ ಶಿವಲಿಂಗಕ್ಕೆ ಎಳೆನೀರು ದೀಪ ಹಚ್ಚಿ ಪೂಜೆ ಸಲ್ಲಿಸಿ ಬರುತ್ತಾರೆ. ಮರು ದಿನ ಬೆಳಗಿನ ಜಾವ ಐದು ಗಂಟೆಗೆ ಗೋಪಾಲಪುರದ ಗ್ರಾಮಸ್ಥರು, ಪಟ್ಟದ ಮಠದ ಗಂಗಾಧರ ಸ್ವಾಮಿಗಳು ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಗಳು ಮತ್ತೆ ತೆರಳಿ ಪೂಜೆ ಸಲ್ಲಿಸಿ ಮುಗಿದ ನಂತರ ಶ್ರೀ ಸಿದ್ದ ದೇವರ ಕಾಣೆಯಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಎಲ್ಲಾ ಭಕ್ತಾಧಿಗಳು ಬರುತ್ತಾರೆ. ಮತ್ತೆ ಇವರು ಆ ಸ್ಥಳಕ್ಕೆ ಬೆಳಗಿನ ಜಾವ ಹೋಗುವವರೆಗೆ ಎಳನೀರು ದೀಪುವು ಹಾಗೆ ಪ್ರಕಾಶಮಾನವಾಗಿ ಉರಿಯುತ್ತಿರುತ್ತದೆ. ಇದು ಒಂದು ರೀತಿಯ ಪವಾಡವೇ ಆಗಿದೆ. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಪ್ರಸಾದ ಮುಗಿದ ಮೇಲೆ ತೇರು ಕಟ್ಟಿದ ತಂಡದವರು ತೇರನ್ನು ಅಳಿದು ಹಾಕಿ ತೇರಿನ ಮನೆಗೆ ತಳ್ಳಿ ಗೋಪಾಲಪುರ ಗ್ರಾಮಕ್ಕೆ ಎಲ್ಲರೂ ತೆರಳುತ್ತಾರೆ ಎಂದು ಗೋಪಾಲಪುರ ಗ್ರಾಮದ ಜಿ.ಬಿ ಸಿದ್ದಪ್ಪನವರು ತಮ್ಮ ಅನುಭವವನ್ನು ಹಂಚಿಕೊಂಡಿರುತ್ತಾರೆ. ಜಾತ್ರಾ ಸಂದರ್ಭದಲ್ಲಿ ಬರುವ ಭಕ್ತಾದಿಗಳೆಲ್ಲರಿಗೂ ನಿರಂತರವಾಗಿ ಪ್ರಸಾದದ ವ್ಯವಸ್ಥೆಯನ್ನು ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣಭಟ್ಟರು ಮಾಡುತ್ತಾರೆ. ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಿಮವದ್ ಶ್ರೀ ಗೋಪಾಲಸ್ವಾಮಿ ದರ್ಶನ ಮಾಡಿ ಪುನೀತರಾಗಿರಿ, ತಮ್ಮ ಕಷ್ಟಕಾರ್ಪಣ್ಯಗಳೆಲ್ಲವೂ ಮಂಜಿನಂತೆ ಕರಗಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ.

ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು.
