ಚಾಮರಾಜನಗರ: ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ವೇಳೆ ಮಾತಾನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಉಚಿತ ಮಕ್ಕಳ ಸಹಾಯವಾಣಿ ೧೦೯೮ ಇದೊಂದು ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಉಚಿತ ಮಕ್ಕಳ ಸೇವಾ ಯೋಜನೆಯಾಗಿದ್ದು, ಸಹಾಯವಾಣಿಯು ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ತುರ್ತುಸೇವೆ ಒದಗಿಸಲು ೧೦೯೮ ಸಹಾಯವಾಣಿ ಸಂಖ್ಯೆಗೆ ಉಚಿತವಾಗಿ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ ಎಂದರು.
ಹಿಂಸೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಕಾಣೆಯಾದ ಮಕ್ಕಳು, ಬಾಲ ಕಾರ್ಮಿಕರು, ಬಾಲ್ಯ ವಿವಾಹಕ್ಕೆ ಒಳಪಟ್ಟ ಮಕ್ಕಳು, ಬೀದಿ ಮಕ್ಕಳು, ವಿಶೇಷ ಅಗತ್ಯವುಳ್ಳ ಮಕ್ಕಳು, ಮಾದಕ ವಸ್ತುಗಳ ವ್ಯಸನಿ ಮಕ್ಕಳು ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆಗೆ ಉಚಿತ ಕರೆ ಮಾಡಬಹುದಾಗಿದೆ. ಈ ಯೋಜನೆಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ, ರಕ್ಷಣೆ, ಪೋಷಣೆ, ವಿದ್ಯಾಭ್ಯಾಸ ಮತ್ತು ಪುನರ್ವಸತಿ ಕಲ್ಪಿಸಲು ಸಹಾಯವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದ, ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿ ಶೇಖರ್, ಮಕ್ಕಳ ಸಹಾಯವಾಣಿ ಸಂಯೋಜಕರಾದ ಲತಾ, ಶಾಲಾ ಮಕ್ಕಳು ಇತರರು ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದರು.