-ಚಿದ್ರೂಪ ಅಂತಃಕರಣ.

ಮನೆ ಮನೆಗೂ ವಿಶ್ವವಿದ್ಯಾಲಯಗಳನ್ನು ಹತ್ತಿರವಾಗಿಸಿ ಶಿಕ್ಷಣ ನೀಡಬೇಕೆಂದು ಸರ್ಕಾರ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿಯ ಯೋಜನೆಯನ್ನು  ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯಗಳು ಅದರದ್ದೇ ಆದ ಮಹತ್ತರವಾದ ಸ್ವರೂಪವನ್ನು ಹೊಂದಿವೆ ಎಂಬುದನ್ನು ಸರ್ಕಾರ ಮೊದಲು ಆಲೋಚಿಸಿ ತದನಂದರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೋ ಬೇಡವೋ ಎಂದು ನಿರ್ಧರಿಸುವುದು ಒಳಿತು. ಎರಡು ಕೋಟಿ ಯೋಜನೆಯಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಅಸಾಧ್ಯ. ಶತಮಾನೋತ್ಸವ ತುಂಬಿದ ಮತ್ತು ‘ಎ’ ಗ್ರೇಡ್ ತಲುಪಿದ ವಿಶ್ವವಿದ್ಯಾಲಯಗಳಲ್ಲೇ ವಿದ್ವತ್ ಬೋಧಕ ಪರಿವಾರದ ಕೊರತೆಯಲ್ಲಿ ಶಿಕ್ಷಣವು ದಿನೇ ದಿನೇ ನೆಲಕಚ್ಚುತ್ತಿದೆ. ಅಲ್ಲಿನ ಬೋಧಕ ಮತ್ತು ಬೋಧಕೇತರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗದೆ ವಿಳಂಬ ಚಟುವಟಿಕೆಗಳು ಹೆಚ್ಚಾಗಿವೆ. ಪೂರ್ಣ ಕಾಲಿಕ ಉದ್ಯೋಗಿಗಳಿಗಿಂತ ಅರೆಕಾಲಿಕ ಉದ್ಯೋಗಿಗಳೇ ಜೇನುನೊಣಗಳಂತೆ ತುಂಬಿದ್ದಾರೆ. 

ವಿಶ್ವವಿದ್ಯಾಲಯಗಳ ಅಧ್ಯಯನ ವಿಭಾಗಗಳಲ್ಲಿ ಮತ್ತು ಅದರ ಜ್ಞಾನ ಶಾಖೆಗಳ ಅಧ್ಯಯನ ವಿಭಾಗಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಗೊಂಡು ಕೆಲವು ಅಧ್ಯಯನ ವಿಭಾಗಗಳು ಕೆಲಸವಿಲ್ಲದೆ ಕಾಲಕಳೆಯುತ್ತಿವೆ. ಇನ್ನು ಈ ಚದುರಿದ ವಿದ್ಯಾರ್ಥಿ ಸಮುದಾಯಗಳನ್ನು ಈಗಿರುವ ವಿಶ್ವವಿದ್ಯಾಲಯಗಳತ್ತ ಸೆಳೆಯುವಲ್ಲಿ ಅರಸಾಹಸವೇ ನಡೆಯುತ್ತಿದೆ. ಹೀಗಿರುವಾಗ ಹೊಸದಾಗಿ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಕೆಲಸವಿಲ್ಲದೆ ಖಾಲಿ ಹರಟೆ ಹೊಡೆಯುವ ಸ್ಥಿತಿಗೆ ಹೋಗುವುದು ಎಷ್ಟು ಸರಿ.

ಈ ಕೊರತೆಗಳಲ್ಲೇ ನಲುಗುತ್ತಿರುವ ಕೆಲವು ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಹಾದಿಹಿಡಿದು ಹಣಕ್ಕಾಗಿ ಸರ್ಟಿಫಿಕೇಟ್ ಗಳನ್ನು ಮಾರಿಕೊಂಡ ಉದಾಹರಣೆಗಳೂ ಬಹಳಷ್ಟಿದೆ. ಈ ನಡುವೆ ‘ರಾಜಕೀಯ’ದ ವೈರಸ್ ವಿಶ್ವ ವಿದ್ಯಾಲಯಗಳನ್ನು ಹೊಕ್ಕಿ ವಿದ್ಯಾರ್ಥಿಗಳ ಮನಸ್ಥಿತಿಗಳನ್ನು ಕೆಡಿಸಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದು ಸದ್ದಿಲ್ಲದೇ ನಡೆಯುತ್ತಿದೆ. ಯಾವಾಗ ರಾಜಕೀಯ ಶಕ್ತಿಗಳು ವಿಶ್ವವಿದ್ಯಾಲಯದ ಆಡಳಿತದಲ್ಲಿ ಕೈ ಹಾಕಿದವೋ ಅಲ್ಲಿಂದ ವಿಶ್ವವಿದ್ಯಾಲಯಗಳ ಪತನ ಆರಂಭವಾಗಿದೆ. ಇನ್ನು ಕುಲಪತಿಗಳ ಸ್ಥಿತಿಯೇ ಹೇಳತೀರದು; ಅವರು ವಕೀಲಿ ಬಾಜಿಯಲ್ಲಿ ಮಂತ್ರಿ ಮಹೋದಯರ ಎದುರಿಗೆ ಹಲ್ಲುಗಿಂಜುತ್ತ, ಅವರು ಹೇಳಿದಕ್ಕೆ ತಲೆ ಹಾಡಿಸುತ್ತ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆನ್ನೆಲುಬಿಲ್ಲದ ಕುಲಪತಿಗಳು, ವಿದ್ವತ್ತಿಲ್ಲದ ಜ್ಞಾನ ಶಾಖೆಗಳು, ದಿಕ್ಕು ದೆಸೆಯಿಲ್ಲದ ವಿದ್ಯಾರ್ಥಿ ಸಮುದಾಯ ಹೇಗೆ ಸಮಾಜಮುಖಿಯಾಗಲು ಸಾಧ್ಯ.‌

ವಿಶ್ವವಿದ್ಯಾಲಯದಲ್ಲಿ  ಸ್ವಾಯತ್ತತೆ ಇಲ್ಲದೇ ಹೋದರೆ ಅದರ ಅಸ್ತಿತ್ವದಲ್ಲಿ ಅರ್ಥವೇ ಇಲ್ಲ. ಈಗ ಆರಂಭವಾಗಿರುವ ವಿಶ್ವವಿದ್ಯಾಲಯಗಳು ವಿದ್ಯೆಯ ಮಹತ್ವವನ್ನು ಇನ್ನಷ್ಟು ತಳಕಾಣಿಸುವ ಕೆಲಸ ಮಾಡಬಹುದೇ ಹೊರತು ವಿದ್ಯೆಯ ಶ್ರೇಷ್ಠತೆಯನ್ನು, ಸಮಾಜಮುಖಿಯನ್ನು, “ಸರ್ವೇಜನಾ ಸುಖಿನಾ ಭವತು” ಎಂಬ ಧ್ಯೇಯವನ್ನು ಎತ್ತಿಹಿಡಿಯುತ್ತವೆ ಎಂಬುದಕ್ಕೆ ಯಾವ ಭರವಸೆಯೂ ಇಲ್ಲ.

ಕೇವಲ ಸರ್ಕಾರಿ ಶಾಲೆಗಳನ್ನೇ ಉಳಿಸಿಕೊಳ್ಳದ ಸರ್ಕಾರ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಸಾರ್ವಜನಿಕರಿಗೆ ಯಾವುದೇ ಭರವಸೆಯಿಲ್ಲ. ಸ್ಥಾಪನೆಯಾಗಲಿರುವ ವಿಶ್ವವಿದ್ಯಾಲಯಗಳು ಮೂಲ ಸೌಕರ್ಯಗಳ ಕೊರತೆಯಿಂದಲೇ ನರಳುತ್ತವೆ‌. ದಿಢೀರನೇ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಹುನ್ನಾರ ಏನಿರಬಹುದೆಂದು ವರ್ತಮಾನದ ಗ್ರಹಿಕೆ ಉಳ್ಳವರಿಗೆ ಸರಿಯಾಗಿ ತಿಳಿದಿದೆ‌. ಸರ್ಕಾರದ ಕೆಲವು ಇಲಾಖೆಗಳ ನೇಮಕಾತಿಯಲ್ಲಾದ ಭ್ರಷ್ಟಾಚಾರ ಸದ್ಯದ ಜ್ವಲಂತ ಉದಾಹರಣೆಯೆಂದರೆ ತಪ್ಪಾಗಲಾರದು. ಈಗ ಈ ಪೈಕಿ ಸ್ಥಾಪಿಸಲೊರಟಿರುವ ವಿಶ್ವವಿದ್ಯಾಲಯಗಳ ಉದ್ಯೋಗಗಳ ಆಯ್ಕೆಯಲ್ಲೂ ಭ್ರಷ್ಟಾಚಾರ ಜರುಗುತ್ತದೆ ಎಂಬುವುದೇ ಸತ್ಯ. ಹಲವು ಒಳಿತಿನ ಯೋಜನೆಗಳು ಸರ್ಕಾರದಿಂದ ಸಾಲು ಸಾಲಾಗಿ ಬರುತ್ತಿವೆಯಾದರೂ ಅದರಲ್ಲಿ ಭಾಗಷಃ ಹೆಚ್ಚಿನ ಋಣಾತ್ಮಕ ಪ್ರತಿಫಲಗಳೇ ಸಿಕ್ಕಿವೆ. ಈ ಮಾದರಿಯಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ಕಾರ್ಯರೂಪಕ್ಕೆ ಬಂದಂತಹ ಕೆಲವೇ ವರ್ಷಗಳಲ್ಲಿ ದಿವಾಳಿತನವನ್ನು ಹೊಂದಿದರೆ ಯಾವುದೇ ಆಶ್ಚರ್ಯವಿಲ್ಲ.

ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು; ರಾಜಕೀಯವಾಗಿ ಬೆಳೆಯಲು ವಿಶ್ವವಿದ್ಯಾಲಯಗಳು ವೇದಿಕೆಗಳಲ್ಲ. ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ, ರಾಜಕೀಯ ತಿಳಿವಳಿಕೆವುಳ್ಳವನಾಗಿ, ವಿಜ್ಞಾನಿಯಾಗಿ, ಸಾಹಿತಿಯಾಗಿ, ಉತ್ತಮ ಬೋಧಕನಾಗಿ ಹಾಗೂ ಯಾವುದೇ ಜ್ಞಾನವನ್ನು ಹೊಂದಿದರೂ ಅದರಲ್ಲಿ ಕೊನೆಯ ಪಕ್ಷ, ಶಿಕ್ಷಣದ ಮೂಲ ಉದ್ದೇಶ ಒಬ್ಬ ಮನುಷ್ಯನಾಗಿ ಬದುಕಲಷ್ಟೇ ಎಂಬುದನ್ನು ಅರಿಯಬೇಕು. ಅದನ್ನು ಬಿಟ್ಟು ಧರ್ಮಾಂಧರಾಗಿ, ಜಾತೀಭೂತಗಳಾಗಿ, ರಾಜಕೀಯ ದಾಳಗಳಾಗಿ ಗುಂಪುಗಳನ್ನು ಕಟ್ಟಿಕೊಂಡು ವಿದ್ಯಾರ್ಥಿ ಸಂಘಗಳ ಹೆಸರಿನಲ್ಲಿ ಸಂಘರ್ಷಗಳಲ್ಲಿ ಮುಖಾಮುಖಿ ಬೀಳುವುದಕ್ಕಲ್ಲ. ವಿಶ್ವವಿದ್ಯಾಲಯಗಳಲ್ಲಿ ಲೇಖನಿ ಮತ್ತು ಪುಸ್ತಕಗಳು ಸದ್ದು ಮಾಡಬೇಕೆ ವಿನಃ ಕತ್ತಿ ಗುರಾಣಿಗಳಲ್ಲ, ಜಾತಿ ಧ್ವಜಗಳಲ್ಲ, ಪಕ್ಷದ ಧ್ವಜಗಳಲ್ಲ, ರಾಜಕೀಯ ಘೋಷಣೆಗಳಲ್ಲ, ನೀವೂ ಏನೇ ಶೈಕ್ಷಣಿಕ ಚಟುವಟಿಕೆಗಳ ಹೊರತಾಗಿ ಪಾಲ್ಗೊಂಡರೂ ಅದು ವಿಶ್ವವಿದ್ಯಾಲಯಗಳಿಂದ ಹೊರಬಂದ ಮೇಲೆ ಎಂಬುದು ತಿಳಿದಿರಬೇಕು.   ಆದರೆ ಈ ತಿಳಿವಳಿಕೆಗಳೇ ಇಲ್ಲದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ತಯಾರಾಗುತ್ತಿದ್ದಾರೆ. ವಿದ್ಯೆ ಕಲಿಯಲಿರುವ ಸ್ಥಳ ಮೋಜು ಮನರಂಜನೆಯ ತಾಣವಾಗಿ ಬದಲಾಗಿದೆ. ನೈತಿಕತೆಯ ಸಮಾಧಿಯ ಮೇಲೆ ಭವಿಷ್ಯ ಕಾಣಲೊರಟಿರುವ ವಿದ್ಯಾರ್ಥಿ ಸಮುದಾಯದ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳ ಸ್ವರೂಪ ರೋಗಗ್ರಸ್ತವಾಗಿದೆ ಎಂಬುದೇ ವಾಸ್ತವಾಂಶ. 

ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮುನ್ನ ಈ ರೋಗಗ್ರಸ್ತ ವಿಶ್ವವಿದ್ಯಾಲಯಗಳ ಸುಧಾರಣೆಗೆ ಸರ್ಕಾರ ಸಹಕಾರವಾಗಲಿ, ಇರುವ ವಿಶ್ವವಿದ್ಯಾಲಯಗಳಿಗೇ ಮೊದಲು ವಿದ್ವತ್ಪೂರ್ಣ ಭೋಧಕರನ್ನು ನೇಮಕಗೊಳಿಸಲು ಯೋಜಿಸಲಿ, ಸೂಕ್ತ ಪರೀಕ್ಷೆಗಳನ್ನು ನಡೆಸುವ ಮೂಲಕ ಅರೆಕಾಲಿಕ ಉದ್ಯೋಗಗಳನ್ನು ಕಡಿಮೆಗೊಳಿಸಿ ಪೂರ್ಣಕಾಲಿಕ ಉದ್ಯೋಗಿಗಳನ್ನು ನೇಮಿಸಲು ಮಾರ್ಗದರ್ಶಿಸಲಿ. ಈಗಿರುವ ಉದ್ಯೋಗಿಗಳಿಗೇ ಸರಿಯಾದ ಸಮಯಕ್ಕೆ ವೇತನ ದೊರಕಿಸಿಕೊಟ್ಟು ಕಾರ್ಯ ಚಟುವಟಿಕೆಗಳೆಲ್ಲವೂ ಕ್ರಿಯಾಶೀಲವಾಗುವಂತೆ ಆರ್ಥಿಕ ಬೆಂಬಲವಾಗಲಿ.  ಅದನ್ನು ಬಿಟ್ಟು ಸದ್ಯದ ವರ್ತಮಾನದ ಸ್ಥಿತಿಗೆ ವಿಶ್ವವಿದ್ಯಾಲಯಗಳ ಸ್ಥಾಪನೆ ಒಳಿತಲ್ಲ. 

ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ಸಂಶೋಧಕ, ವಿಮರ್ಶಕ.

ಎಚ್.ಡಿ ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:- 8884684726

Gmail I’d:- manjunathabr709@gmail.com.