2024ರ ಡಿಸೆಂಬರ್ 20ರಿಂದ 22ರ ತನಕ, ಕರ್ನಾಟಕ ರಾಜ್ಯದ ಸಕ್ಕರೆ ನಾಡು ಎಂದೇ ಪ್ರಸಿದ್ಧವಾದ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹೆಮ್ಮೆಯೊಂದಿಗೆ ಆಯೋಜಿಸಲಾಗುತ್ತಿದೆ. ಉಪನ್ಯಾಸಗಳು, ಕವಿಗೋಷ್ಠಿಗಳು, ಪುಸ್ತಕ ಮೇಳಗಳು ಮತ್ತು ಇನ್ನಿತರ ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ವೈಭವವನ್ನು ಮತ್ತೊಮ್ಮೆ ಪ್ರಪಂಚಕ್ಕೆ ತೋರಿಸಲು ಇದು ಅಂತರಾಷ್ಟ್ರೀಯ ವೇದಿಕೆಯಾಗಿ ರೂಪುಗೊಳ್ಳಲಿದೆ. 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ “ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಶೀರ್ಷಿಕೆಯಡಿ ನಾಡು-ನುಡಿಗೆ ಸಂಬಂಧಿಸಿದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಬಾರಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೌರವಲಭಿಸಿದ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಅಥವಾ ಸರಳವಾಗಿ ಗೊ. ರು. ಚನ್ನಬಸಪ್ಪ ಅವರು ಕವಿ, ಬರಹಗಾರ, ವಿದ್ವಾಂಸ ಮತ್ತು ಕನ್ನಡದ ಜಾನಪದ ತಜ್ಞರಾಗಿದ್ದಾರೆ. ಅವರು ಕನ್ನಡ ನಾಡು ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅವರು ವಚನ ಸಾಹಿತ್ಯ ಮತ್ತು ಕನ್ನಡ ಜಾನಪದ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಬಸಪ್ಪ ಅವರು ೧೯೩೦ ರಲ್ಲಿ ಚಿಕ್ಕಮಗಳೂರಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪ ಮತ್ತು ಅಕ್ಕಮ್ಮ ದಂಪತಿಗೆ ಜನಿಸಿದರು.
ಚನ್ನಬಸಪ್ಪ ಅವರು ಕನ್ನಡ ಜಾನಪದ ಮತ್ತು ವಚನ ಸಾಹಿತ್ಯದ ಕುರಿತು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ:
- ಸಾಕ್ಷಿಕಲ್ಲು,
- ಹೊನ್ನ ಬಿಟ್ಟೆವು ಹೊಲಕೆಲ್ಲ
- ಕರ್ನಾಟಕ ಪ್ರಗತಿಪಥ
- ಚೆಲುವಾಂಬಿಕೆ
- ಕುಣಾಲ
- ಬೆಳ್ಳಕ್ಕಿ ಹಿಂದೂ ಬೇಡರ್ಯಾವೋ
- ಬಾಗೂರು ನಾಗಮ್ಮ ಗ್ರಾಮ ಗೀತೆಗಳು
- ಸದಾಶಿವ ಶಿವಾಚಾರ್ಯ
- ವಿಭೂತಿ
- ಕರ್ನಾಟಕ ಜಾನಪದ ಕಲೆಗಳು, ಇತ್ಯಾದಿ.
ಗೊ.ರು.ಚನ್ನಬಸಪ್ಪ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.
- ನಾಡೋಜ ಪ್ರಶಸ್ತಿ
- ರಾಷ್ಟ್ರೀಯ ಬಸವ ಪುರಸ್ಕಾರ
- ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮಂಡ್ಯ ಜಿಲ್ಲೆ
ಮಂಡ್ಯ ಜಿಲ್ಲೆಯನ್ನು ಕರ್ನಾಟಕದ ಸಕ್ಕರೆ ನಾಡು ಎಂದು ಕರೆಯುತ್ತಾರೆ. ಏಕೆಂದರೆ ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆ ಕಬ್ಬು. ಮತ್ತು ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಕೂಡ ಮಂಡ್ಯವೇ ಆಗಿದೆ. ರಾಜ್ಯದ ಮೊದಲ ಸಕ್ಕರೆ ಕಾರ್ಖಾನೆಯು ಮಂಡ್ಯದಲ್ಲಿ ೧೯೩೩ ರಲ್ಲಿ ಪ್ರಾರಂಭವಾಯಿತು. ಮಂಡ್ಯ ಜಿಲ್ಲೆ ಐದು ನದಿಗಳನ್ನು ಹೊಂದಿದೆ ಕಾವೇರಿ ನದಿ ಮತ್ತು ನಾಲ್ಕು ಉಪನದಿಗಳು ಮುಖ್ಯ ಹೇಮಾವತಿ, ಶಿಂಷಾ, ಲೋಕಪಾವನಿ, ವೀರವೈಷ್ಣವಿ.
ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಕಲೆಗೆ ಅಗಾಧ ಕೊಡುಗೆ ನೀಡಿದ ಹಲವು ಪ್ರಮುಖ ವ್ಯಕ್ತಿಗಳು ಇದ್ದಾರೆ. ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಇವರೆಲ್ಲಾ ಕನ್ನಡದ ಸಾಂಸ್ಕೃತಿಕ ಬೆಳವಣಿಗೆಗೆ ಮಾದರಿಯಾಗಿದ್ದಾರೆ.
- ಬಿ.ಎಂ.ಶ್ರೀಕಂಠಯ್ಯ (ಕವಿ)
- ತ್ರಿವೇಣಿ (ಕಾದಂಬರಿಗಾರ್ತಿ)
- ಅಂಬರೀಷ್ (ನಟ, ರಾಜಕಾರಣಿ)
- ಎ.ಎನ್.ಮೂತಿ೯ರಾವ್ (ಸಾಹಿತಿ)
- ಕೆ.ಎಸ್.ನರಸಿಂಹಸ್ವಾಮಿ (ಕವಿ)
- ಎಸ್ ಎಂ ಕೃಷ್ಣ – (ಕರ್ನಾಟಕದ ಮಾಜಿ ಮುಖ್ಯಮಂತ್ರಿ)
- ನಾಗತಿಹಳ್ಳಿ ಚಂದ್ರಶೇಖರ್, (ಚಿತ್ರ ನಿರ್ಮಾಪಕ)
- ಬಿ.ಎಸ್. ಯಡಿಯೂರಪ್ಪ (ಕರ್ನಾಟಕದ ಮಾಜಿ ಮುಖ್ಯಮಂತ್ರಿ)
….
ಕನ್ನಡ ಸಾಹಿತ್ಯ ಪರಿಷತ್ತಿನ ಹಿನ್ನೆಲೆ
ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ರಕ್ಷಿಸುವ ಉದ್ದೇಶದಿಂದ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಎಚ್.ವಿ. ನಂಜುಂಡಯ್ಯ ಅವರು ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಕನ್ನಡ ಭಾಷೆಯ ಸಮಗ್ರ ಬೆಳವಣಿಗೆಗೆ ಮುಂದುವರೆದ ಪ್ರಯತ್ನಗಳನ್ನು ಕೈಗೊಳ್ಳಲು ಕಾರಣರಾದರು. 1938ರಲ್ಲಿ “ಕರ್ನಾಟಕ ಸಾಹಿತ್ಯ ಪರಿಷತ್ತು”ವನ್ನು “ಕನ್ನಡ ಸಾಹಿತ್ಯ ಪರಿಷತ್ತು” ಎಂದು ಪುನಃ ನಾಮಕರಣ ಮಾಡಲಾಗಿತ್ತು, ಇದರ ಮೂಲಕ ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ದೊರೆಯಿತು.
87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೇವಲ ಸಾಹಿತ್ಯ ಹಬ್ಬವಲ್ಲ, ಇದು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಂಗೀತದ ಪ್ರಗತಿಗೆ ಮಹತ್ವಪೂರ್ಣ ವೇದಿಕೆಯಾಗಿದೆ. ಸಮ್ಮೇಳನವು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಹೊಸ ಪ್ರೇರಣೆಯನ್ನು ನೀಡುವುದರೊಂದಿಗೆ, ಕನ್ನಡ ನಾಡಿನ ಹೆಮ್ಮೆಯನ್ನು ದೇಶಾದ್ಯಾಂತ ಹಬ್ಬಿಸುವುದರಲ್ಲಿ ಮಹತ್ವಪೂರ್ಣ ಹಂತವಾಗಲಿದೆ.
ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗೆ, ಚರಿತ್ರೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸ ಮುಂದಾಳತ್ವಗಳನ್ನು ರೂಪಿಸಲು ಈ ಸಮ್ಮೇಳನವು ಸ್ಪೂರ್ತಿಯ ಸ್ಪಷ್ಟ ಸಂಕೇತವಾಗಿದೆ.
- ಚಂದ್ರಶೇಖರ ಆರ್ ಎಸ್ ಮತ್ತು ಮಧುರ ಎಂ