ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ದೌರ್ಜನ್ಯ ಪ್ರಕರಣಗಳ ತಡೆಗಾಗಿ ಕಾನೂನು ಅರಿವು ಸಭೆಗಳು ಹಾಗೂ ಮನ ಪರಿವರ್ತನೆಯಾಗುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕೆರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪರಿಶಿಷ್ಟ ಜನಾಂಗದವರೊಂದಿಗೆ ಮೇಲ್ವರ್ಗದವರನ್ನು ಸೇರಿಸಿಕೊಂಡು ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೌರ್ಜನ್ಯ ನಡೆಯದಂತೆ ಮನವೊಲಿಸುವ ಹಾಗೂ ಮನ ಪರಿವರ್ತನೆಯಾಗುವ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ದೌರ್ಜನ್ಯ ನಡೆದ ವೇಳೆ ಎಫ್.ಐ.ಆರ್ ದಾಖಲಿಸಿ ಸಂತ್ರಸ್ಥರಿಗೆ ಪರಿಹಾರ ನೀಡುವುದೇ ಅಂತಿಮವಲ್ಲ. ದೌರ್ಜನ್ಯ ಪ್ರಕರಣಗಳು ಜನರಲ್ಲಿ ದ್ವೇಷ ಬಿತ್ತಲು ಕಾರಣವಾಗಲಿವೆ. ಈ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಹಕಾರವನ್ನು ಪಡೆಯಬೇಕು. ದೌರ್ಜನ್ಯ ಪ್ರಕರಣಗಳ ಸಂತ್ರಸ್ಥರು ಹಾಗೂ ವಿಚಾರಣೆಗೆ ಹಾಜರಾಗುವ ಸಾಕ್ಷಿದಾರರಿಗೆ ಪ್ರಯಾಣಭತ್ಯೆ, ದಿನಭತ್ಯೆಯನ್ನು ನೀಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಅವರು ಮಾತನಾಡಿ ೨೦೨೨ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನಲ್ಲಿ ೪, ಕೊಳ್ಳೇಗಾಲದಲ್ಲಿ ೧, ಹನೂರಿನಲ್ಲಿ ೮ ಹಾಗೂ ಗುಂಡ್ಲುಪೇಟೆ ತಾಲೂಕಿನ ೧೨ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೨೫ ದೌರ್ಜನ್ಯ ಪ್ರಕರಣಗಳು ಜರುಗಿದ್ದು, ಎಲ್ಲಾ ಪ್ರಕರಣಗಳಿಗೂ ಪರಿಹಾರವನ್ನು ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪಯೋಜನೆಗಳಡಿ ೨೦೨೨ರ ನವೆಂಬರ್ ಅಂತ್ಯದವರೆಗೆ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾಹುಡೇದ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೊಳ್ಳೇಗಾಲ ಸಿದ್ದರಾಜು, ಸೋಮೇಶ್ವರ, ಗುಂಡ್ಲುಪೇಟೆ ಸಿದ್ದರಾಜು, ಆಸಿಫ್ ಉಲ್ಲಾ, ಜಿಲ್ಲಾಮಟ್ಟದ ಅಧಿಕಾರಿಗಳು ಎಲ್ಲಾ ತಾಲೂಕು ಸಮಾಜ ಕಲ್ಯಾಣ ಕಲ್ಯಾಣ ಅಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.
