ಚಾಮರಾಜನಗರ: ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ಹನೂರು ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿನ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಇಂದು ಆಯೋಜಿಸಿದ್ಧ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆಗಳನ್ನು ಅನು?ನಗೊಳಿಸುವ ಸಲುವಾಗಿ ಗಾಣಿಗಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಗಮನಕ್ಕೆ ತಂದಿರುವ ಅಹವಾಲು, ಕುಂದು ಕೊರತೆ, ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು
ಸರ್ಕಾರದ ವತಿಯಿಂದ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ೧ ಕೋಟಿ ಅನುದಾನ ದೊರಕಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ಇನ್ನುಳಿದಂತೆ ಗ್ರಾಮಸ್ಥರ ಬೇಡಿಕೆಯಂತೆ ಸ್ಮಶಾನ, ಮನೆ ವ್ಯವಸ್ಥೆ ಒದಗಿಸುವ ಸಂಬಂಧ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು. ಹಾಗೆಯೇ ಸಭೆಯಲ್ಲಿ ಕೇಳಿ ಬಂದ ದೂರುಗಳಿಗೆ ಸಂಬಂಧಪಟ್ಟ ಆಯಾ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಜತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವಲ್ಲಿ ಜನರಿಗೆ ಯಾವುದೇ ರೀತಿಯಲ್ಲೂ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ, ಸರ್ಕಾರದ ಸೌಲಭ್ಯವನ್ನು ಪಡೆಯುವ ನಿಟ್ಟಿನಲ್ಲಿ ಹಾಗೂ ಗ್ರಾಮದಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಉತ್ತಮ ಕಾರ್ಯಕ್ರಮವಾಗಿದೆ. ಇದರ ಪ್ರಯೋಜನ ಪಡೆಯಬೇಕು. ತಾಲೂಕಿನ ನಾಗಣ್ಣ ನಗರದಲ್ಲಿ ಸುಮಾರು ೭೦೦ ಎಕರೆ ಸರ್ಕಾರಿ ಜಮೀನು ಇದೆ. ಸಮರ್ಪಕವಾಗಿ ಅಳತೆ ಕಾರ್ಯವಾಗಿಲ್ಲ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಅಗತ್ಯ ಮುತುರ್ವಜಿ ವಹಿಸಿ ಸ್ವಾಧೀನ ಪತ್ರ ನೀಡಬೇಕು. ಹಾಗೆಯೇ ಹೂಗ್ಯಂ ಗ್ರಾಮದಲ್ಲೂ ಸಹ ೨ ಸಾವಿರ ಎಕರೆ ಸರ್ಕಾರಿ ಭೂಮಿಯ ಸ್ಥಿತಿಯು ಇದೇ ಆಗಿದೆ. ಈ ಬಗ್ಗೆಯೂ ಕ್ರಮವಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮಾತನಾಡಿ ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲ, ರಸ್ತೆಯು ತೀವ್ರವಾಗಿ ಹದಗೆಟ್ಟಿದೆ, ಇದರಿಂದ ಸಂಚರಿಸಲು ತೊಂದರೆಯಾಗಿದೆ. ಶವವನ್ನು ಹೂಳಲು ಸ್ಮಶಾನ ಇಲ್ಲ. ಆಗ್ಗಾಗ್ಗೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಬಹುತೇಕ ಜನರಿಗೆ ಮನೆ ಅಗತ್ಯವಿದೆ. ಒಂದೇ ಮನೆಯಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸಿಸುತ್ತಿವೆ. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಾರಿಗೆ, ನೀರಾವರಿ, ಶಿಕ್ಷಣ, ಕೃಷಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾದವು.
ಇದೇ ವೇಳೆ ನಲಿಕಲಿ ಕೇಂದ್ರ ಕಟ್ಟಡ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಉಪ ವಿಭಾಗಾಧಿಕಾರಿ ಗೀತಾ ಹುಡೇದ್, ತಹಶೀಲ್ದಾರ್ ಆನಂದಪ್ಪ ನಾಯಕ್, ಬಿಇಒ ಟಿ.ಆರ್ ಸ್ವಾಮಿ, ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಧರಣೇಶ್, ಜಿಲ್ಲಾ ಪರಿಶಿ? ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಲ್. ಗಂಗಾಧರ್, ಗ್ರಾ. ಪಂ ಅಧ್ಯಕ್ಷೆ ಆರೋಗ್ಯಮ್ಮ, ಸದಸ್ಯೆ ಮಹದೇವಮ್ಮ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ಕರಿಯಪ್ಪ, ಉಪಾಧ್ಯಕ್ಷರಾದ ರತ್ನಮ್ಮ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.