- ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಭೀಮನ ಅಮವಾಸ್ಯೆ ಸತಿಪತಿ ದಂಪತಿಗಳೀರ್ವರನ್ನು ಸಾಂಸಾರಿಕವಾಗಿ ಅನ್ಯೋನ್ಯಗೊಳಿಸಿ ಲೌಕಿಕ ಜಗತ್ತಿನ ಮೋಕ್ಷ ದೊರಕಿಸಿಕೊಡುವ ಒಂದಂಶವಾಗಿದೆ.ಈ ರೀತಿಯ ಹಲವು ಆಚರಣೆಗಳ ಅಂಶದಿಂದ ಭಾರತದ ಹೆಮ್ಮೆಯ ಸಂಸ್ಕೃತಿಯು ಮನುಷ್ಯತ್ವಕಾರಕಗಳನ್ನು ತುಂಬಿಕೊಂಡಿದೆ.
ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ
ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||
’ಮನೆಯ ಯಜಮಾನನಿಗೆ ಹಿತಬಯಸುವ ಸ್ನೇಹಿತರಿರುತ್ತಾರೆ; ಆಸ್ತಿ ಸಂಪತ್ತು ಇರುತ್ತವೆ; ಪ್ರೇಮದ ಮಳೆಗರೆಯುವ ಹೆಂಡತಿಯೂ ಇರುತ್ತಾಳೆ; ಕೆಲಸಕ್ಕೆ ಸಹಾಯಕವಾಗುವ ಸೇವಕರೂ ಇರುತ್ತಾರೆ; ಇಷ್ಟೆಲ್ಲ ಇದ್ದ ಮೇಲೆ ಅಂಥ ನಿವಾಸದಲ್ಲಿ ಸಂತೋಷ ಎನ್ನುವುದು ಸಹಜವಾಗಿಯೇ ಇರುತ್ತದೆ; ಇದರ ಜೊತೆಗೆ ಮಕ್ಕಳು ಜ್ಞಾನವಂತರು; ಹೆಂಡತಿ ಸುಂದರಿ. ಇಷ್ಟೆಲ್ಲ ಆನಂದ ಅನುಕೂಲಗಳು ಇದ್ದಾಗ ಅತಿಥಿಸತ್ಕಾರಕ್ಕೆ ಕೊರತೆಯಾದರೂ ಇದ್ದೀತೆ? ಗೃಹದಲ್ಲಿ ಪೂಜೆ ವ್ರತ ಪುರಸ್ಕಾರ ಹಬ್ಬಗಳ ಸಂಭ್ರಮ; ದೇವತಾಕಾರ್ಯವೂ ನಿರಂತರ. ಇವೆಲ್ಲಕ್ಕೂ ಮೀರಿದ ಗುಣವಾಗಿ ಹಲವರ ಸಜ್ಜನರ ಸ್ನೇಹ. ಇಷ್ಟೆಲ್ಲ ಆನಂದದ ನೆಲೆಯನ್ನು ಒದಗಿಸಿರುವ ಗೃಹಸ್ಥಾಶ್ರಮವೇ ಧನ್ಯ, ಅಲ್ಲವೆ?’ ಎಂಬ ಅರ್ಥವನ್ನು ಮೇಲಿನ ಶ್ಲೋಕವೊಂದು ತಿಳಿಸುತ್ತಿದೆ. ಇಂಥದೊಂದು ಸಂತೋಷಕ್ಕೆ ಮನೆ ಆಶ್ರಯವಾಗಬೇಕಾದರೆ ಮೊದಲು ಅದಕ್ಕೆ ತಕ್ಕ ದಾಂಪತ್ಯ ಸಿದ್ಧವಾಗಬೇಕು. ಎಂದರೆ ಹೆಣ್ಣಿಗೆ ತಕ್ಕ ಗಂಡು, ಗಂಡಿಗೆ ತಕ್ಕ ಹೆಣ್ಣು ಒಂದಾಗಿ, ಸತಿ–ಪತಿಗಳಾಗಬೇಕು. ಇದೇ ದಾಂಪತ್ಯ. ಹೆಣ್ಣೊಬ್ಬಳು ತನಗೆ ಒಳ್ಳೆಯ ಗಂಡ ದೊರೆಯಲಿ ಎಂದು ಆಶಿಸುವುದು ಸಹಜ. ಹೀಗೆಯೇ ಗಂಡು ಕೂಡ ತನಗೆ ತಕ್ಕ ಹೆಂಡತಿ ದೊರೆಯಲಿ ಎಂದು ಬಯಸುವುದೂ ಸಹಜ. ಹೀಗೆ ಪರಸ್ಪರ ಹೊಂದಾಣಿಕೆಯಾಗುವ ಹೆಣ್ಣು–ಗಂಡು ‘ದಂಪತಿ’ಯಾದರೆ ಆಗ ಅದು ಸಂತೋಷಮಯವಾದ ಕುಟುಂಬಕ್ಕೆ ಮೂಲವಾಗುತ್ತದೆ. ಇಂಥದೊಂದು ಆದರ್ಶವೇ ಭೀಮನ ಅಮಾವಾಸ್ಯೆಯ ವ್ರತದಲ್ಲಿ ನಾವು ಕಾಣುವುದು. ಇನ್ನು ಮದುವೆಯಾಗದ ಹೆಣ್ಣು ತನಗೆ ಭೀಮನಂಥ ಗಂಡ ಸಿಗಲಿ ಎಂದೂ, ಆಗಷ್ಟೆ ಮದುವೆಯಾಗಿರುವ ಹೆಣ್ಣು ತನ್ನ ಗಂಡ ಭೀಮನಂತೆ ಆಗಲಿ ಎಂದೂ ಪ್ರಾರ್ಥಿಸಿ ಆಚರಿಸುವ ವ್ರತವೇ ಭೀಮನ ಅಮಾವಾಸ್ಯೆಯ ವಿಶೇಷತೆ. ಭೀಮ ಎಂದರೆ ಶಿವ. ಆದರ್ಶ ದಾಂಪತ್ಯಕ್ಕೆ ಉದಾಹರಣೆ ಎಂದರೆ ಶಿವ–ಪಾರ್ವತಿ; ಜಗತ್ತಿನ ಆದಿದಂಪತಿಗಳು. ಶಿವ ತನ್ನ ಅರ್ಧ ಶರೀರವನ್ನೇ ತನ್ನ ಹೆಂಡತಿಗೆ ಕೊಟ್ಟವನು. ಹೀಗಾಗಿ ಇಂಥ ಶಿವನನ್ನು ದಾಂಪತ್ಯದ ಸೌಖ್ಯಕ್ಕಾಗಿ ಆರಾಧಿಸುವುದು ಯುಕ್ತವೇ ಆಗಿದೆ.ಈ ಆಚರಣೆಯು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ ದಕ್ಷಿಣಕನ್ನಡ ಪ್ರಾಂತ್ಯಗಳಲ್ಲಿ ‘ಆಟಿ ಅಮವಾಸ್ಯ’ ಎಂದು ಕರೆದರೆ ಉತ್ತರ ಕನ್ನಡದ ಪ್ರಾಂತ್ಯಗಳಲ್ಲಿ ಕೊಡೆ ‘ಅಮವಾಸ್ಯೆ’ ಎನ್ನುತ್ತಾರೆ.ಕಾರವಾರದಲ್ಲಿ ‘ಗಟಾರದ ಅಮವಾಸ್ಯೆ’ ಎಂದು ಇನ್ನಿತರದ ಕಡೆ ಭೀಮನ ಅಮವಾಸ್ಯೆ ಕರೆಯುವುದು ವಾಡಿಕೆ.ಹೆಣ್ಣು ಮಕ್ಕಳು ಅಥವಾ ಮದುವೆಯಾದ ಸ್ತ್ರೀಯರು ಕೈಗಳಿಗೆ ಕಂಕಣ ಕಟ್ಟಿಕೊಂಡು ಜ್ಯೋತಿರ್ಭೀಮೇಶ್ವರರನ್ನು ಪೂಜಿಸಿ ವ್ರತಗೊಂಡು ಸತಿಪತಿಯ ಆಯಸ್ಸಿನ ಹೆಚ್ಚಳಿಕೆಗೆ ಸಂವೃದ್ಧಿಗೆ ಪ್ರಾರ್ಥಿಸುತ್ತಾರೆ.ರಾಹುಕಾಲ ಹೊರತುಪಡಿಸಿ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯಗಳಲ್ಲಿ ಪತಿಯ ಪಾದ ಕಮಲಗಳಿಗೆ ಪ್ರೀತ್ಯರ್ಥ ಭಾವನಮಸ್ಕಾರವನ್ನು ಸಲ್ಲಿಸಿ ವ್ರತ ಅಂತಿಮಗೊಳಿಸಬಹುದು.ವ್ರತಗೊಳ್ಳುವಾಗ ಪೂಜೆ ವಿಧಾನವು ಈ ರೀತಿಯಾಗಿರುತ್ತದೆ.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ಎರಡು ದೀಪದ ಕಂಬ ಇಟ್ಟು.ಇನ್ನಿತರ ಪೂಜಾ ಸಾಮಾಗ್ರಿಗಳ ಜೊತೆ ಒಂಬತ್ತು ಗೌರಿ ಎಳೆಯನ್ನು ಮತ್ತು ನೈವೇದ್ಯಕ್ಕೆ ಒಂಬತ್ತು ಕರಿಗಡಬು ಇಡಬೇಕು. ಆ ನಂತರ ದೀಪ ಹಚ್ಚಿ ಮೊದಲಿಗೆ ಗಣಪನನ್ನು ಪೂಜಿಸಿ ಬಳಿಕ ಶಿವಪಾರ್ವತಿಯರ ಆವಾಹನೆ ಮಾಡಿ ಪೂಜೆ ಸಲ್ಲಿಸಿ ಕೊನೆಗೆ ಪತಿಯ ಪಾದಗಳಿಗೆ ನಮಸ್ಕರಿಸಿ ಸ್ತ್ರೀ ಇಬ್ಬರ ದೀರ್ಘಾಯುಷ್ಯ ಮತ್ತು ಸರ್ವಸಂಪತ್ತಿಗಾಗಿ ಪ್ರಾರ್ಥಿಸಬೇಕು ಎಂಬುವುದು ವಾಡಿಕೆ ಅಥವಾ ಈ ಭೀಮನ ಅಮಾವಾಸ್ಯೆಯ ವೈಶಿಷ್ಟ್ಯ.
ಮೊದಲು ಒಂದು ವಿಷಯದ ಬಗ್ಗೆ ತಿಳಿಸುವಾಗ ಅದರ ಸರ್ವಲಕ್ಷಣ ಅಥವಾ ಅದರ ಒಂದು ಮೂಲ ಉದ್ದೇಶ ಅರಿವಾದರಷ್ಟೇ ಅಲ್ಲವೇ ಮುಂದೆ ಯೋಚಿಸುವ ಪರಿ ಅರ್ಥವಾಗುವುದು.ಹಾಗಾಗಿಯೇ ಭೀಮನ ಅಮವಾಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪೂರ್ವದಲ್ಲಿ ತಿಳಿಸಬಯಸಿದೆ.ಕುಟುಂಬ ಎನ್ನುವುದೇ ಸಮಾಜದ ಮೊದಲ ತಳಪಾಯ.ಇದನ್ನು ಹಾಳುಗೆಡುವಿಕೊಂಡವರು ಮುಂದೇನೇ ಸಾಧಿಸಿದರೂ ಪಡೆದುಕೊಂಡರೂ ಅದು ಸಂಪೂರ್ಣತೆಯನ್ನು ಹೊಂದುವುದಿಲ್ಲ. ಜೊತೆಗೆ ತೃಪ್ತಿಕರ ಮಟ್ಟವನ್ನು ತಲುಪುವುದಿಲ್ಲ.ಹಾಗಾಗಿ ಇದನ್ನು ಬಲಾಢ್ಯಗೊಳಿಸಬೇಕೆಂದೇ ಇಂತಹ ನೂರು ಸಾವಿರಾರು ಆಚರಣೆಗಳು ಇವೆ.ನಾವು ಈ ಕಾಲದವರು ಈ ಸಂಪ್ರದಾಯಗಳನ್ನು ಮುರಿಯುವುದರಲ್ಲೇ ಅತೀ ಬುದ್ಧಿವಂತಿಕೆಯನ್ನು ತೋರಿಸುತ್ತಿದ್ದೇವೆ.ಇದು ಜಡತ್ವ ಮತ್ತು ಅಪಾಯವನ್ನು ತಂದೊಡ್ಡುವುದೇ ವಿನಃ ಮತ್ಯಾವುದೇ ಸಾಂಸಾರಿಕ ಲಾಭವನ್ನು ತಂದುಕೊಡಲಾರದು.ಹೀಗೊಂದು ಸ್ತ್ರೀ ವಾದ ಹೆಸರಿನಲ್ಲಿ ಕೆಲವರು ಕೆಲವುಗಳನ್ನು ಪ್ರಶ್ನಿಸಿ ಉದ್ಧಟತನ ತೋರಿಸುತ್ತಿದ್ದಾರೆ.ನಾವೇಕೆ ಗಂಡನ ಪಾದ ಪೂಜೆ ಮಾಡಬೇಕು? ಸ್ತ್ರೀ ಪುರುಷ ಸಮಾನ ಎಂದಮೇಲೆ ನಾವುಗಳೇಕೆ ಅವರಿಗೆ ನಮ್ಮ ಅಧೀನತೆಯನ್ನು ಹೆಚ್ಚಿಸುವ ಈ ಸಂಪ್ರದಾಯಗಳನ್ನು ಒಪ್ಪಬೇಕು.ಬೇಕಿದ್ದರೆ ಕಾಲ ಬದಲಾಗಿದೆ ಪುರುಷರೇ ಸತಿಪತಿಗಳ ಆಯಸ್ಸಿಗಾಗಿ ಸುಖ ಶಾಂತಿಗಾಗಿ ಸತಿಯ ಕಾಲುಗಳಿಗೆ ಬೀಳಬಾರದೇಕೆ? ಪಾದ ಪೂಜೆ ಮಾಡಬಾರದೇಕೆ? ಎನ್ನುವ ಯೋಚನೆಗಳ ಮನಸ್ಥಿತಿಯನ್ನು ಸಮಾಜಕ್ಕೆ ಒಂದು ವರ್ಗ ಎಸೆಯುತ್ತಿರುವುದು ಬಹುದೊಡ್ಡ ಅಸಮತೋಲನವನ್ನೇ ಸೃಷ್ಟಿಸುತ್ತಿದೆ.ಇನ್ನು ಸ್ವಲ್ಪ ಮುಂದೆ ಹೋದರೆ ಸ್ತ್ರೀಯರೇಕೆ ತಾಯ್ತನ ಹೊಂದಬೇಕು ಪುರುಷರೇ ಮಕ್ಕಳನ್ನು ಹಡೆಯಬಾರದೇ ಪೋಷಿಸಬಾರದೆ? ವೈಜ್ಞಾನಿಕತೆ ಮುಂದುವರೆದಿದೆ ಎಲ್ಲವೂ ಬದಲಾಗಲಿ ಎನ್ನುತ್ತಾರೆ. ಇಲ್ಲಿ ಆಧ್ಯಾತ್ಮಿಕವಾಗಿ ಮತ್ತು ಪ್ರಕೃತಿ ಸೃಷ್ಟಿಯ ವಿರುದ್ಧವಾಗಿ ಯಾವುದನ್ನೇ ಮಾಡಿದರೂ ಅದು ವ್ಯರ್ಥವಾಗುತ್ತದೆ ಮತ್ತು ತೊಂದರೆಯನ್ನು ತಂದೊಡ್ಡುತ್ತದೆ.ಇಲ್ಲಿ ಪ್ರತಿಯೊಂದು ಜೀವಿಗೂ ವಿಶಿಷ್ಠವಾದ ಶಕ್ತಿ ಎನ್ನುವುದು ಹೂಡಿಕೆಯಾಗಿದೆ.ಆ ಶಕ್ತಿಗಳ ಬೆಸುಗೆಯಲ್ಲಿ ಮತ್ತು ಆ ಶಕ್ತಿಗಳು ವ್ಯವಸ್ಥಿತವಾಗಿ ಒಟ್ಟಿಗೆ ಸೇರಿದಾಗಲೇ ಸರಿಯಾದ ಕ್ರಿಯೆಯು ನಡೆಯುವುದು.ಅದನ್ನು ಬಿಟ್ಟು ಪ್ರಕೃತಿ ನೀಡಿರುವ ಬುದ್ಧಿವಂತಿಕೆಯನ್ನು ವಿನಾಶಕಾರಿಯಾಗಿ ಬಳಸುವುದು ದಡ್ಡತನವೇ ಸರಿ.ಇಲ್ಲಿ ಸ್ತ್ರೀ ಪುರುಷ ಸಮಾನತೆ ಅಗತ್ಯ, ಸ್ತ್ರೀ ಪುರುಷ ಸಮಾನ ಗೌರವ , ಭಾಗಿತ್ವ ಅಗತ್ಯ. ಮೇಲು ಕೀಳುಗಳ ಪ್ರಶ್ನೆಯನ್ನು ಸಂಗತಿಯನ್ನು ಈ ನಮ್ಮ ಆಚರಣೆಗಳು ತಂದೊಡ್ಡಿಲ್ಲ. ನಮ್ಮಲ್ಲಿರುವ ಕೆಟ್ಟ ಮನಸ್ಥಿತಿ ,ಕೆಟ್ಟ ನಿರ್ಧಾರಗಳು ,ಕೆಟ್ಟ ಸ್ವಾರ್ಥ ಅಭಿಲಾಷೆಗಳು ಆಚರಣೆಗಳಲ್ಲಿ ನಕಾರಾತ್ಮಕ ಭಾವವನ್ನು ಹುಡುಕಿಕೊಳ್ಳುತ್ತಿದೆಯಷ್ಟೇ.ಹಾಗಾಗಿ ನಾವುಗಳು ಮೊದಲು ಸರಿಯಾಗಿ ಯಾವುದೇ ಆಚರಣೆಗಳನ್ನು ಧನಾತ್ಮಕವಾಗಿ ಆಚರಿಸಿದರೆ ಅದರ ಫಲವು ಸಿಕ್ಕೇ ಸಿಗುತ್ತದೆ.ವೈವಾಹಿಕ ವಿಚ್ಛೇದನ ನಮ್ಮ ಸಂಸ್ಕೃತಿಯದಲ್ಲ ಹಾಗೆಂದುಕೊಂಡು ಗಂಡ ಕೊಡುವ ಕಿರುಕುಳವನ್ನು ಹೆಂಡತಿ ಸಹಿಸಬೇಕು ಅಂತೇನೂ ಅಲ್ಲ.ಗಂಡನ ಕೆಟ್ಟ ನಡವಳಿಕೆಗಳು ಮಿತಿ ಮೀರಿದರೆ ವಿಚ್ಛೇದನ ಅಗತ್ಯ.ಆದರೆ ಇಲ್ಲಿ ಇಬ್ಬರೂ ಸರಿಯಾಗಿ ಕುಟುಂಬ ಸ್ವಾಸ್ಥ್ಯ ಹೊಂದುವುದೇ ಆಚರಣೆಗಳ ಮಹತ್ವ.ಎಲ್ಲವೂ ನಾವು ಕೈಗೊಳ್ಳುವ ಆಚರಣೆಗಳಲ್ಲಿ ನಮ್ಮ ಒಳಿತು ಮತ್ತು ಕೆಡುಕುಗಳಿದೆ.ರಾತ್ರಿಯಾಗಲು ಕಾರಣವಿರುತ್ತದೆ ಹಾಗೇಯೇ ಹಗಲಾಗಲು ಕಾರಣವಿರುತ್ತದೆ.ಇಂದು ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಪೈಪೋಟಿ ಏರ್ಪಟ್ಟಿರುವುದಕ್ಕೆ ಕಾರಣ ಪುರಷರೇ.ಹಿಂದೆ ಸ್ತ್ರೀಯರಲ್ಲಿದ್ದ ಒಳ್ಳೆಯ ಗುಣಗಳನ್ನು ಆಚರಣೆಗಳನ್ನು ಮೆಚ್ಚದೇ ಸ್ತ್ರೀಯರ ಮೇಲೆ ದೌರ್ಜನ್ಯ ಎಸಗಿದ ಪರಿಣಾಮವಾಗಿ ಅವರಿಂದು ಆ ಆಚರಣೆಗಳ ಹೊರಬಿದ್ದಿದ್ದಾರೆ.ನಾವು ಎಷ್ಟೇ ವ್ರತ ಪೂಜೆ ಧನ್ಯತೆಯಿಂದ ಇದ್ದರೂ ಇವರುಗಳ ಕಿರುಕುಳ ತಪ್ಪದಿರುವಾಗ ಆ ಆಚರಣೆಗಳ ಮಾಡಿ ಫಲವೇನು ಎಂದು ವೈರಾಗ್ಯಗೊಂಡಿದ್ದಾರೆ.ಇಂದಿಗೂ ಸ್ತ್ರೀಯರಿಗೆ ಸಂಪೂರ್ಣ ಸಮಾನ ಒಳಿತು ಸಮಾಜದಲ್ಲಿ ದೊರಕಿಲ್ಲ.ಹೀಗಾಗಿ ಸ್ತ್ರೀಯರು ಸ್ವಾತಂತ್ರ್ಯ ಮತ್ತು ಸಮಾಜದ ಸಂಸಾರದ ಪರಮಾಧಿಕಾರ ಬಯಸಿ ಹೊರಟಿದ್ದಾರೆ.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಪಣತೊಟ್ಟು ನಿಂತಿದ್ದಾರೆ.ಇಲ್ಲಿ ಪುರುಷರ ದರ್ಪವನ್ನು ತೆಗೆಯಲು ಅವರು ದರ್ಪವನ್ನೇ ತೋರಿಸುತ್ತಿದ್ದಾರೆ.ಇದು ಕಲಹಗಳಿಗೆ ತಿರುಗಿ ಸಂಸಾರಗಳು ಬೀದಿಗೆ ಬೀಳುತ್ತಿದೆ.ಪುರುಷ ತನ್ನೆಲ್ಲಾ ಸುಖ ದುಃಖಗಳನ್ನು ತನ್ನ ಮಡದಿಯಲ್ಲೇ ಹಂಚಿಕೊಂಡರೆ ಪರಿಹಾರ ಕಂಡುಕೊಂಡರೆ ಸಂತೋಷ ಬಯಸಿದರೆ ಈ ಕಲಹಗಳಾಗುವುದಿಲ್ಲ.ಪರಸ್ತ್ರೀ ವ್ಯಾಮೋಹ, ಮದ್ಯವ್ಯಸನಿ ದುಶ್ಚಟದಾಸನಾಗಿ ಸತಿಯ ಮುಂದೆ ನಿಂತರೆ ಯಾವ ಸತಿಯೂ ಒಪ್ಪುವುದಿಲ್ಲ.ಯಾವ ಹೆಂಡತಿಯೂ ಆಚರಣೆ ಕೈಗೊಳ್ಳುವುದಿಲ್ಲ.ಹಾಗೊಂದು ವೇಳೆ ಕೈಗೊಂಡರೆ ಅದು ಆಕೆಯ ಒಳ್ಳೆತನವಾಗಿರುತ್ತದೆ.ಇಲ್ಲವೇ ಅಸಹಾಯಕ ಪರಿಸ್ಥಿತಿಯಲ್ಲಿ ತೋರಿದ ಸುಳ್ಳು ಆಚರಣೆಯಾಗಿರುತ್ತದೆ.ಇನ್ನೊಂದು ತೋರ್ಪಡಿಕೆಯ ನಾಟಕವಾಗಿರುತ್ತದೆ.ಇಲ್ಲಿ ಸ್ತ್ರೀಯರು ಕೂಡ ಎಡವುತ್ತಿದ್ದಾರೆ.ವಿದ್ಯಾವಂತರಾದ ಅವರುಗಳು ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ಆಧುನಿಕತೆಯ ಲೇಪನ ಪಡೆದು ಭಾರತೀಯ ಸ್ತ್ರೀತತ್ವವನ್ನು ಕಳೆದುಕೊಳ್ಳುತ್ತಿದ್ದಾರೆ.ನಿಜವಾಗಿ ಆಧ್ಯಾತ್ಮಿಕತೆಯನ್ನು ಮರೆಯುತ್ತಿದ್ದಾರೆ.ಅವರೂ ಕೂಡ ಶೀಲದ ವಿಚಾರದಲ್ಲಿ ಹಾದಿ ತಪ್ಪುತ್ತಿದ್ದಾರೆ.ಗಂಡ ಪರ ಸ್ತ್ರೀ ವ್ಯಾಮೋಹಕ್ಕೆ ಬಿದ್ದನೆಂದು ಹೆಂಡತಿಯೂ ಪರಪುರುಷನನ್ನು ಬಯಸುತ್ತಿರುವುದು ನಮ್ಮ ಸಂಸ್ಕೃತಿಯಲ್ಲ.ಪುರುಷನನ್ನು ಸರಿದಾರಿಗೆ ತರುವ ಯೋಜನೆಯೂ ಅಲ್ಲ.ಆತನಲ್ಲಿ ಜೀವನಾಂಶ ಪಡೆದು ಸ್ವತಂತ್ರವಾಗಿ ಬದುಕುತ್ತೇನೆಂದು ವೈವಾಹಿಕ ಸಂಬಂಧದಿಂದ ಹೊರಬೀಳುವುದು ಉತ್ತಮ ಮೊದಲ ಆಯ್ಕೆಯಲ್ಲ.ಮುಳ್ಳಿನಿಂದ ಮುಳ್ಳನ್ನು ಬಿಡಿಸಬೇಕು ಎನ್ನುವುದು ಎಲ್ಲವುದಕ್ಕೂ ಹೊಂದುವುದಿಲ್ಲ.ಈ ಕಾಲದ ನಾವುಗಳೀರ್ವರು ಇದೇ ವಿರುದ್ಧ ದೃಷ್ಟಿಕೋನಗಳಲ್ಲಿ ಮುಂದುವರೆದರೆ ನಮಗೂ ಇನ್ನಿತರ ದೇಶದವರಿಗೂ ವ್ಯತ್ಯಾಸ ಇರುವುದಿಲ್ಲ.ಭಾರತವು ತನ್ನ ಮೂಲತ್ವ ಲಕ್ಷಣವನ್ನು ಕಳೆದುಕೊಳ್ಳುವುದಕ್ಕೆ ಸನಿಹವಾಗುತ್ತಿದೆ.ಇದೇ ಮಾದರಿಯ ಸ್ತ್ರೀ ಪುರುಷರ ವಿರುದ್ಧ ದೃಷ್ಟಿಕೋನಗಳು ಸಮಾಜದ ತುಂಬೆಲ್ಲಾ ತುಂಬುಹೋಗುತ್ತಿರುವಾಗ ಮತ್ತೆಲ್ಲಿ ಈ ಭೀಮನ ಅಮವಾಸ್ಯೆ ವಿಜೃಂಭಿಸುತ್ತದೆ.ಅದರ ಮಹತ್ವವನ್ನು ಸಾರುತ್ತದೆ.ಈಗಾಗಲೇ ಎಷ್ಟೋ ಆಚರಣೆಗಳು ಅಳಿದು ಹೋಗಿವೆ.ಮೌಢ್ಯ ಇರುವ ಆಚರಣೆಗಳಾದ ಸತಿಸಹಗಮನ, ಬಾಲ್ಯ ವಿವಾಹ,ದೇವದಾಸಿ ಇನ್ನಿತರ ಪದ್ಧತಿಗಳು ಸಮಾಜದಿಂದ ತೊಲಗಿದ್ದು ತುಂಬಾ ಒಳ್ಳೆಯದೇ.ಆದರೆ ಈಗ ಮೌಲ್ಯವಿರುವ ಆಚರಣೆಗಳು ಕಣ್ಮರೆಯಾಗುತ್ತಿರುವುದು ಸಮಾಜಕ್ಕೆ ಒಳ್ಳೆಯದಲ್ಲ.ದಯವಿಟ್ಟು ಭಾರತೀಯ ಸಂಸ್ಕೃತಿಗೆ ಹಿಮ್ಮರಳಿ ಸಮಾಜವನ್ನು ಸ್ವಾಸ್ಥ್ಯದಿಂದ ಇಡಲು ದಯವಿಟ್ಟು ಪ್ರಯತ್ನಿಸಿ.ಗಂಡನಲ್ಲಿ ತಪ್ಪಿದ್ದರೆ ಹೆಂಡತಿ ಸರಿ ಇದ್ದು ;ಹೆಂಡತಿಯಲ್ಲಿ ತಪ್ಪಿದ್ದರೆ ಗಂಡ ಸರಿ ಇದ್ದು ಹೊಂದಾಣಿಕೆಗೆ ಪ್ರಯತ್ನಿಸಿ. ಇಬ್ಬರ ನಡುವೆ ಸಾಂಸಾರಿಕ ಜೀವನ ಸ್ಪಷ್ಟತೆಗೆ ಬನ್ನಿ. ತಮ್ಮ ಯೋಚನೆ ಮತ್ತು ಇನ್ನಿತರ ಒಳ್ಳೆಯ ವಿಷಯಗಳನ್ನು ಸಮತೆಗೆ ತನ್ನಿ.ಅದು ಬಿಟ್ಟು ವಿರುದ್ಧ ಪ್ರತಿಭಟಿಸಿದರೆ ನಮ್ಮ ಸಂಸ್ಕೃತಿಯು ಅಳಿವಿನಂಚಿಗೆ ಬರುತ್ತದೆ.ಜೊತೆಗೆ ನಮ್ಮ ನೆಮ್ಮದಿಯೂ ಅಳಿವಿನಂಚಿನಲ್ಲಿ ನೆಲೆವೂರುತ್ತದೆ.ನಾವುಗಳೇ ಆಚರಣೆ ಗೊತ್ತಿದ್ದರೂ ಆಚರಿಸುತ್ತಿಲ್ಲ ಎಂದಾದಮೇಲೆ ಮುಂದಿನ ಪೀಳಿಗೆಯು ತಿಳಿಯದ ಆಚರಣೆಯನ್ನು ಹೇಗೆ ತಾನೆ ಆಚರಿಸುತ್ತಾರೆ.ಮುಂದಿನ ಪೀಳಿಗೆಗೆ ಆಚರಣೆಗಳು ತಿಳಿಯುವುದು ನಾವುಗಳು ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ.ಅದರ ಫಲವನ್ನು ಅನುಭವಿಸಿ ಮಹತ್ವವನ್ನು ಸಾರುವುದರಿಂದ.”ಮತ್ತೊಮ್ಮೆ ಕರೆಕೊಡುವೆ ದಯವಿಟ್ಟು ನಮ್ಮ ಭಾರತೀಯ ಒಳ್ಳೆಯ ಸಂಸ್ಕೃತಿಗೆ ಮರಳಿ”.ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ,ಸಂಶೋಧಕ, ವಿಮರ್ಶಕ.
ಹೆಚ್.ಡಿ.ಕೋಟೆ. ಮೈಸೂರು.
