ಮೈಸೂರು: ತಂದೆ ತಾಯಿಯನ್ನು ಕಳೆದುಕೊಂಡು ಮಾನಸಿಕವಾಗಿ ಜರ್ಜರಿತನಾಗಿದ್ದ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯಲ್ಲಿ ನಡೆದಿದೆ.
ಮೈಸೂರಿನ ಗಾಂಧಿನಗರ ನಿವಾಸಿ ಎಸ್. ಕಾರ್ತಿಕ್ ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುದೈವಿ. ಕಳೆದ ಎಂಟು ವರ್ಷಗಳ ಹಿಂದೆ ಈತನ ತಂದೆ ಕೌಟುಂಬಿಕ ಕಲಹದ ಕಾರಣ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಘಟನೆ ಬಳಿಕ ಮಾನಸಿಕಾಗಿ ನೊಂದಿದ್ದ ಕಾರ್ತಿಕ್ ಏಕಾಂಗಿಯಾಗಿದ್ದನಲ್ಲದೆ, ಅಪ್ಪ ಅಮ್ಮನಿಲ್ಲದೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದನು. ಅದರಿಂದ ಹೊರಗೆ ಬರಲಾರದೆ ಪರದಾಡುತ್ತಿದ್ದನು. ಹೀಗಾಗಿ ಈ ಹಿಂದೆ ತಂದೆ ತಾಯಿ ಸಾವನ್ನಪ್ಪಿದ ದಿನವೇ ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದಿದ್ದನು.
ತನ್ನ ಹುಟ್ಟು ಹಬ್ಬದ ದಿನವೇ ಶ್ರೀರಂಗಪಟ್ಟಣ ಸಮೀಪದ ಪಶ್ಚಿಮ ವಾಹಿನಿಯ ಕಾವೇರಿ ದಡದ ಬಳಿ ತೆರಳಿ, ಅಲ್ಲಿ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಸ್ನೇಹಿತರಿಗೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.