[ಜೂನ್ ೨೧ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ]
ಕುಮಾರಕವಿ ಬಿ.ಎನ್.ನಟರಾಜ್

“ಯೋಗ” ಎಂದರೆ ಜೀವನದ ಪರಿಪೂರ್ಣ ಅನುಭವ. ಭೌತಪೂರ್ಣ ಅಭ್ಯಾಸ, ಬೌದ್ಧಪೂರ್ಣ ಹವ್ಯಾಸ. ಮನುಷ್ಯನ ಸಂಪೂರ್ಣ (ವಿ)ಜ್ಞಾನದ ವಿಕಸನ (ಪ್ರ)ಕ್ರಿಯೆ! ‘ಯೋಗ’ ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಉಗಮವಾಗಿದೆ. ಯೋಗ ಮತ್ತು ಆಯುರ್ವೇದ ಇವೆರಡೂ [ವಿ]ಜ್ಞಾನಗಳು ಮೊಟ್ಟ ಮೊದಲು ಪ್ರಾರಂಭವಾದುದು ಭಾರತದಲ್ಲಿ. ಶತಮಾನಗಳಷ್ಟು ಹಿಂದೆ ಸಂತ ಪತಂಜಲಿ ಗುರುವರೇಣ್ಯರಿಂದ ನಾಡಿ, ಚಕ್ರ ಹಾಗೂ ಕುಂಡಲಿನೀ ವಿದ್ಯೆ ಮೂಲದ ‘ಯೋಗಶಾಸ್ತ್ರ’ ಭಾರತದಲ್ಲಿ ಜನ್ಮತಾಳಿತು. ಪತಂಜಲಿಯೋಗದ ಅನ್ವರ್ಥ “ಯೋಗ ಚಿತ್ತ ವೃತ್ತಿ ನಿರೋಧಃ”! ಆಸನ, ಬಂಧ, ಪ್ರಾಣಾಯಾಮ ಒಳಗೊಂಡಂತೆ ಇನ್ನಷ್ಟು ಸಾಕಾರ ರೂಪ ಧರಿಸಿ ಸಾವಧಾನವಾಗಿ ಅಸ್ತಿತ್ವಕ್ಕೆ ಬಂತು. ವರ್ಷಗಳುರುಳಿದಂತೆ ಯೋಗಶಾಸ್ತ್ರ ಪರಿಷ್ಕೃತಗೊಳ್ಳುತ್ತ ಸಂಸ್ಕಾರಗೊಂಡು ವಿಶ್ವದಾದ್ಯಂತ ವಿಸ್ತರಿಸಿತು. ಅಸಂಖ್ಯಾತ ಯೋಗಶಾಸ್ತ್ರಜ್ಞರ ಜಪ, ತಪ, ಧ್ಯಾನ, ಪರಿಶ್ರಮ, ಕೊಡುಗೆ ಹಾಗೂ ತ್ಯಾಗ ಇದರಲ್ಲಿ ತುಂಬಿಕೊಂಡಿದೆ. ಪ್ರಪಂಚದೆಲ್ಲೆಡೆ ವಿವಿಧ ಧರ್ಮ ವರ್ಣ ಭಾಷೆ ಸಂಸ್ಕೃತಿ ನಾಗರಿಕತೆಯ ನೂರಾರು ರಾಷ್ಟ್ರಗಳಲ್ಲಿ ಯೋಗವು ವ್ಯಾಪಕವಾಗಿ ಹರಡಿ ಜಗತ್ ಪ್ರಸಿದ್ಧಿಯಾಗಲು ಅನೇಕ ಯೋಗ[ಪಟು]ಗುರುಗಳು ಕಾರಣ. ಅಂಥವರಲ್ಲಿ ಪ್ರಮುಖರು ಇತ್ತೀಚೆಗೆ ದೈವಾಧೀನರಾದ ಬಿ.ಕೆ.ಎಸ್.ಅಯ್ಯಂಗಾರ್. ವಿಧವಿಧ ಶಾಸ್ತ್ರದಲ್ಲಿರುವಂತೆ ಯೋಗಶಾಸ್ತ್ರದಲ್ಲೂ ಲಿಖಿತ ಮತ್ತು ಪ್ರಾಯೋಗಿಕ ಪಠ್ಯಕ್ರಮಗಳಿವೆ. ಯೋಗಶಾಸ್ತ್ರ ವಿದ್ಯಾಭ್ಯಾಸದಲ್ಲಿ ದೈಹಿಕ-ಮಾನಸಿಕ ಅಭ್ಯಾಸಕ್ಕೆ ಸಮಾನ ಪ್ರಾಧಾನ್ಯತೆ ನೀಡಲಾಗಿದೆ.

 ಆಧುನಿಕತೆ ಹೆಸರಲ್ಲಿ ಅನುಕೂಲಕ್ಕೆ ತಕ್ಕಂತೆ ದೇವ ದೆವ್ವ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ನಾಗರಿಕತೆ ಪರಿಸರ ಮುಂತಾದ ಎಲ್ಲವನ್ನು ಮಾರ್ಪಾಡು ಮಾಡಿಕೊಂಡ ಮನುಷ್ಯನು ಕಲಿಯುವವರಿಗೆ ಸುಲಭವಾಗಲೆಂದು ಯೋಗ ಕಲೆಯಲ್ಲಿ ಮಾನಸಿಕ ಅಭ್ಯಾಸಕ್ಕಿಂತ ದೈಹಿಕ ಅಭ್ಯಾಸವನ್ನು ಹೆಚ್ಚು ಜನಪ್ರಿಯಗೊಳಿಸಿದನು.  ಗ್ರಾಮೀಣ ಮತ್ತು ನಗರ ಪ್ರದೇಶದ ಕಾರ್ಮಿಕವರ್ಗಕ್ಕೂ ಶ್ರೀಸಾಮಾನ್ಯರಿಗೂ ಅರ್ಥ ಮಾಡಿಸಲು "ನೋಡಿ ತಿಳಿಯುವ, ಮಾಡಿ ಕಲಿಯುವ" ಸುಲಭ ಅಭ್ಯಾಸವನ್ನು ರೂಢಿಗೊಳಿಸಲಾಯಿತು.  ಸರಳತೆ ಆರ್ಥಿಕ ತುಟ್ಟಿಯಿಲ್ಲದ ಹಾಗೂ ರೋಗನಿವಾರಣಾ ಯೋಜನೆ ಇದಾಗಿದೆ ಎಂಬ ಸಕಾರಣದಿಂದ ವಿದ್ಯಾವಂತರಿಗಿಂತ ಅವಿದ್ಯಾವಂತ ಯೋಗಾಭ್ಯಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯಿತು. ಆರೋಗ್ಯದ ಹಿತದೃಷ್ಟಿಯಿಂದ ಕಾಯಕ ಸಮುದಾಯಕ್ಕೆ ಓದುಬರಹಕ್ಕಿಂತ 'ಯೋಗ'ದಲ್ಲಿ ತೀವ್ರ ಆಸಕ್ತಿ ಉಂಟಾಯಿತು. ತತ್ಪರಿಣಾಮ ಎಲ್ಲ ವಯಸ್ಸಿನವರಿಗೆ ಲಿಂಗತಾರತಮ್ಯವಿಲ್ಲದ ಒಂದು ಉತ್ತಮ ವ್ಯಾಯಾಮ ಎನಿಸಿಕೊಂಡಿತು ಯೋಗಾಭ್ಯಾಸ!      
ಕಾಲಕ್ರಮೇಣ, ಯೋಗವು ಜೀವನದ ಕಲೆಗಳಲ್ಲಿ ಒಂದೆನಿಸಿ ಆಕರ್ಷಣೆಗೆ ಒಳಗಾಯಿತು. ಅಂದಿನಿಂದಲೂ ಸ್ವಾಮಿವಿವೇಕಾನಂದ, ಮಹಾತ್ಮಗಾಂಧೀಜಿ, ವೀರಸಾವರ್ಕರ್, ದೀನದಯಾಳ್‌ಉಪಾಧ್ಯಾಯ, ಅಮಿತಾಬ್‌ಬಚ್ಚನ್, ರಾಜ್‌ಕುಮಾರ್, ಬಾಬಾರಾಮ್‌ದೇವ್ ಇನ್ಫೋಸಿಸ್ ನಾರಾಯಣಮೂರ್ತಿ, ಮುಂತಾದ ಗಣ್ಯಾತಿಗಣ್ಯರು ಸದಭಿಪ್ರಾಯ ತಳೆದರು.  ಈ ದಿಗ್ಗಜರು ಯೋಗದ ಬಗ್ಗೆ ಉತ್ಸಾಹದ ಪ್ರೋತ್ಸಾಹದ ಕೈಂಕರ್ಯ ಕೈಗೊಂಡರು. ಯೋಗವು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಆರೋಗ್ಯಕಾರಿ ಎಂಬುದಕ್ಕೆ ಉದಾ;- ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ಕೀಮೂನ್ ಹೇಳಿದ್ದು: "ಯೋಗದಲ್ಲಿ ಧರ್ಮದ ಕಟ್ಟುಪಾಡಿಲ್ಲ ರಾಜಕೀಯವಿಲ್ಲ ಯೋಗ ಕಲಿಯಲು ತಾರತಮ್ಯ ಸರಿಯಲ್ಲ ಯಾರು ಬೇಕಾದರು ಕಲಿಯಬಹುದು ನಾನೂ ಕೆಲವೊಂದು ಯೋಗಾಸನ ಮಾಡಿದೆ. ಅದರಿಂದ ನನಗೆ ತೃಪ್ತಿ ಸಿಕ್ಕಿದೆ ನನ್ನ ಮೊದಲ ಪ್ರಯತ್ನದಲ್ಲೆ ಯೋಗದ ಮಹತ್ವ ಅರಿತುಕೊಂಡೆ, ಪ್ರಥಮ ಬಾರಿ ಕಲಿಯುವವರಿಗೆ ವೃಕ್ಷಾಸನವು ಉತ್ತಮ, ಯೋಗಾಭ್ಯಾಸದ ಪರಿಣಾಮವಾಗಿ ವಿವಿಧ ರೋಗ/ನೋವು ಉಪಶಮನವಾಗುತ್ತದೆ ಎಂಬ ಘನತೆಯ ಅಭಿಪ್ರಾಯ ನುಡಿದಿದ್ದಾರೆ. ಯಾವುದೇ ಕಟ್ಟುಪಾಡಿಗೆ ಒಳಪಡಿಸದೆ, ಕಾನೂನು ಕಟ್ಟಳೆಗೆ ಬಲಿಯಾಗಿಸದೆ, ನಿತ್ಯಜೀವನಕ್ಕೆ ತೊಡಕಾಗದಂತೆ, ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಂಡು ಬದುಕುವಂತೆ ಗಂಭೀರ ಸಲಹೆ ನೀಡಿದ್ದಾರೆ.

ಅಷ್ಠಾಂಗ ಯೋಗ:-
[೧]ಯಮ [೨]ನಿಯಮ [೩]ಆಸನ [೪]ಪ್ರಾಣಾಯಾಮ [೫]ಪ್ರತ್ಯಾಹಾರ [೬]ಧಾರಣ [೭]ಧ್ಯಾನ [೮]ಸಮಾಧಿ. ಜತೆಗೆ ಸೂರ್ಯನಮಸ್ಕಾರ, ಸ್ವಾಸ್ಥ್ಯರಹಸ್ಯ, ಆಹಾರನಿಯಮ, ಸ್ಥೂಲತಾಹರಣ, ಕ್ರಿಯೆ, ಬಂಧ, ಯೋಗಮುದ್ರೆ, ಸತ್ಯ, ಅಹಿಂಸೆ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯೆ, ಶೌಚ, ಸಂತಸ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ, ಮುಂತಾದವುಗಳನ್ನೂ ಕಲಿಯಬಹುದು. ವಿಶೇಷವಾಗಿ ಸೂರ್ಯನಮಸ್ಕಾರ ಯಾವ ಋತುವಿನಲ್ಲಾದರು, ಯಾವ ಸ್ಥಳದಲ್ಲಾದರು, ಸುಲಭವಾಗಿ ಕೈಗೊಳ್ಳಬಹುದು. ಸೂರ್ಯ-ನಮಸ್ಕಾರವೊಂದೇ ಹಲವು ಆಸನಗಳ ಸಂಗಮವಾಗಿದೆ. ಸರ್ವಸಮ್ಮತದ ಸರ್ವಾಂಗಪ್ರಯೋಜನಕಾರಿಯಾದ ಉತ್ತಮ ವ್ಯಾಯಾಮವೂ ಹೌದು. ‘ತಾಡಾಸನ’ದಿಂದ ಮೊದಲ್ಗೊಂಡು ‘ಶವಾಸನ’ದವರೆಗೆ ೭೪ ಪ್ರಮುಖ ಆಸನಗಳಿವೆ. ಒಂದೊಂದು ರೀತಿಯ ರೋಗ-ನೋವು ಉಪಶಮನಕ್ಕೆ ತಕ್ಕುದಾದ ಬೇರೆಬೇರೆ ಯೋಗಾಸನಗಳಿದ್ದು ಅಪಾಯವಾಗದಂತೆ ಎಚ್ಚರಿಕೆಯಿಂದ ಅಭ್ಯಾಸ ಮಾಡಬೇಕು. ಇದರಿಂದಾಗುವ ಪ್ರಯೋಜನ/ಲಾಭ:- ಏಕಾಗ್ರತೆ, ಜ್ಞಾನವೃದ್ಧಿ, ನೆನಪಿನಶಕ್ತಿ ಹೆಚ್ಚಳ, ಸಹನೆ, ತಾಳ್ಮೆ ಆವಾಹನೆ, ಶಾಂತಿ, ನೆಮ್ಮದಿ!

ಯೋಗಾಭ್ಯಾಸದಿಂದ (ಉಪ)ಶಮನಗೊಳ್ಳುವ ರೋಗ:-
ಬೊಜ್ಜು ಕರಗುವಿಕೆ, ಅಜೀರ್ಣ, ಹುಳಿತೇಗು, ವಾಕರಿಕೆ, ವಾಂತಿ, ಕಫ಼ಾ, ವಾತ, ಪಿತ್ತ ತೊಂದರೆ
ಪಾರ್ಶ್ವ/ಪೂರ್ಣವಾಯು ರೋಗ, ಹೊಟ್ಟೆಯುರಿ,ಹೊಟ್ಟೆನೋವು, ಮಲಬದ್ಧತೆ, ಮೂತ್ರಕೋಶ ತೊಂದರೆ
ಮೂಗು ಕಟ್ಟುವುದು, ಉಸಿರಾಟದ ತೊಂದರೆ
ಗಂಟಲುಬೇನೆ, ಗಂಟಲಲ್ಲಿ ರಕ್ತಸ್ರಾವ, ದಂತ ಮತ್ತು ದವಡೆಯಲ್ಲಿ ರಕ್ತಸ್ರಾವ
ಬಾಯಿ ನೋವು, ಉರಿ-ಊತ, ಕಣ್ಣು, ಕಿವಿ, ಮೂಗು, ಉರಿತ-ಊತ
ಕೈ, ಕಾಲು, ಮಂಡಿ ಮತ್ತು ಕೀಲು ನೋವು
ಸಣ್ಣ ಕರುಳಿನ ಮತ್ತು ದೊಡ್ಡ ಕರುಳಿನ ಹುಣ್ಣು
ಒತ್ತಲೆ/ಪೂರ್ಣತಲೆ ನೋವು, ಮುಂದಲೆಯಲ್ಲಿ ಕೀವು
ದಮ್ಮು ಕೆಮ್ಮು ಮುಂತಾದ ಅಸ್ತಮಾ ರೋಗ
ರಕ್ತದೊತ್ತಡ ಮತ್ತು ಮಧುಮೇಹ ರೋಗ
ಜಠರ ಶ್ವಾಸಕೋಶ ವಾಯುಬಾಧೆ ರೋಗ
ಅಸಹನೆ, ಆತಂಕ, ಮುಂಗೋಪ, ದುಡುಕು ಸ್ವಭಾವ, ನಿದ್ರಾಹೀನತೆ, ದುಸ್ವಪ್ನ, ಭಯಭೀತಿ, ಪುಕ್ಕಲು/ಹೇಡಿತನ
ದುರ್ಬುದ್ಧಿ, ದುರ್ನಡತೆ, ದುಷ್ಟಶಕ್ತಿಯುಳ್ಳವರು
ಗರ್ಭಕೋಶ ತೊಂದರೆ, ಬಂಜೆತನ, ನಿರ್ವೀರ್ಯತೆ, ಅಶಕ್ತವೀರ್ಯಾಣು, ನಪುಂಸಕತ್ವ
ಅಕಾಲಿಕ ಮುಟ್ಟು, ರಕ್ತಸ್ರಾವ, ಬಿಳಿಸೆರಗು ಮುಂತಾದವು

ಯೋಗಾಭ್ಯಾಸ ವಿಧಾನ:-
ಅರುಣೋದಯ ಅಥವಾ /ಗೋಧೂಳಿ ಸಮಯವು ಪ್ರಶಸ್ತವಾದುದು
ಪ್ರಾತ:ಕಾಲ ಆಹಾರ ತೆಗೆದುಕೊಳ್ಳುವ ಮುಂಚೆ ಅಥವಾ ಆಹಾರ ತೆಗೆದುಕೊಂಡ ಕನಿಷ್ಟ ೩ಗಂಟೆಯ ನಂತರ
ಅಭ್ಯಾಸ ಪ್ರಾರಂಭ ಮಾಡುವ ಮುನ್ನ ೨ ಲೋಟ ನೀರು ಕುಡಿದಿರಲೇಬೇಕು
ಅಭ್ಯಾಸಕ್ಕೆ ಮುನ್ನ ಮತ್ತು ಅಭ್ಯಾಸದ ನಂತರ ಸ್ನಾನ ಮಾಡಬೇಕು
ಅಭ್ಯಾಸದ ಅಂತ್ಯದಲ್ಲಿ ಕನಿಷ್ಟ ೫ ನಿಮಿಷದ ಶವಾಸನವನ್ನು ಕಡ್ಡಾಯವಾಗಿ ಮಾಡಬೇಕು

ಯೋಗಾಭ್ಯಾಸ, ಯಾರು-ಯಾವಾಗ ಮಾಡಬಾರದು:-
ನುರಿತ ಶಿಕ್ಷಕರ ಮಾರ್ಗದರ್ಶನವಿಲ್ಲದೆ ಮಾಡಬಾರದು
ಯಾವುದೇ ಆಸನ ಕಷ್ಟಕರ ಎನಿಸಿದಾಗ[ಬಲವಂತದಿಂದ] ಮಾಡಬಾರದು
೭ ವರ್ಷದ ಒಳಪಟ್ಟ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಮಾಸಿಕ ರಜದ ಸ್ತ್ರೀಯರು
ಸಾಂಕ್ರಾಮಿಕರೋಗ ಪೀಡಿತರು, ವಿಕಲ ಚೇತನರು
ತಂಬಾಕು ವ್ಯಸನಿಗಳು, ಮದ್ಯಪಾನ ಮಾಡಿದವರು
ಅಸ್ತಿ-ಮತ್ತಿತರ ಶಸ್ತ್ರಚಿಕಿತ್ಸೆಗೊಳಪಟ್ಟವರು, ಅನಾರೋಗ್ಯದಿಂದ ಬಳಲುತ್ತಿರುವವರು
ಬುದ್ಧಿ[ಮಾಂದ್ಯರು]ಹೀನರು, ವಿಚಲಿತ[ವಿಕೃತ] ಮನಸ್ಸುಳ್ಳವರು

 ಯೋಗವೇಜೀವನ ಎಂದು ತಿಳಿದು ಜನಹಿತ ದೃಷ್ಟಿಯಿಂದ, [ವೈಜ್ಞಾನಿಕ]ಜಾಗತೀಕರಣ ದೃಷ್ಟಿಕೋನದಿಂದ, ಮಾನವನಿಗೋಸ್ಕರ ಮಾನವನೇ ಮಾಡುವ ಯೋಗಾಭ್ಯಾಸ ಇಂದಿನಿಂದಲೆ ಆಚರಣೆಗೆ ತರೋಣ.

ಜೈ ಯೋಗಾಯೋಗ!
ಕುಮಾರಕವಿ ಬಿ.ಎನ್.ನಟರಾಜ (೯೦೩೬೯೭೬೪೭೧)

೨೯, ೩ನೇ ಮೇನ್, ೩ನೇ ಕ್ರಾಸ್, ಕಲ್ಯಾಣನಗರ

ಮೂಡಲಪಾಳ್ಯ, ನಾಗರಬಾವಿ, ಬೆಂಗಳೂರು-೫೬೦೦೭೨