ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ||

       

ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ,ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರ ದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ ಪತಂಜಲಿಯವರಿಗೆ ಕೈಮುಗಿದು ನಮಿಸುವೆ ಎಂಬುದು ಮಂತ್ರದ ಅರ್ಥ…


       

ಭಾರತೀಯರು  ವಿಶ್ವಕ್ಕೆ ನೀಡಿದ ಕೊಡುಗೆಗಳು ಹಲವಾರು. ಅವು ಕೇವಲ ಕೊಡುಗೆಗಳಾಗದೆ ಸಮಸ್ತ ಮಾನವ ಜನಾಂಗವನ್ನು ಸದೃಢ ಹಾಗೂ ಸುಸಂಪನ್ನಗೊಳಿಸಬಲ್ಲ ಅದಮ್ಯ ವೈಚಾರಿಕ ಹಾಗೂ ವೈಜ್ಞಾನಿಕ ಅಮೂಲ್ಯ ಶಕ್ತಿಗಳು ಅಂದರೆ ತಪ್ಪಾಗಲಾರದು.


       

ಅಂತಹ ಅದಮ್ಯ ಕೊಡುಗೆಗಳಲ್ಲಿ ‘ಯೋಗ’ ವೂ ಒಂದು. ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಹಾಗೂ ಭಾರತವನ್ನು ಅನುಸರಿಸಿ ನೆಡೆಯುವಂತೆ ಮಾಡಿರುವುದು ಇದೇ ‘ಯೋಗ’. ಕೇವಲ ‘ಪ್ರಯೋಜನವಾದಿ ಹಾಗೂ ವ್ಯಾವಹಾರಿಕ ಸಿದ್ದಾಂತವನ್ನೇ ಮೈಗೂಡಿಸಿಕೊಂಡು ಆರ್ಥಿಕತೆಯಲ್ಲಿ ಸದೃಢರೆಂದು ಕೊರಳಪಟ್ಟಿ ಎತ್ತಿ ಬೀಗುತ್ತಿದ್ದ ಅದೆಷ್ಟೋ ರಾಷ್ಟ್ರಗಳು ಇಂದು ಭಾರತದ ಮುಂದೆ ಮಂಡಿಯೂರಿ ಇಲ್ಲಿನ ಪದ್ಧತಿಗಳನ್ನು ಅನುಸರಿಸಲು ಹೊರಟಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ. ಅದರ ಒಂದಷ್ಟು ಒಳನೋಟವನ್ನು ನಾವು ಅರಿಯದೆ ಹೋದರೆ ಎಷ್ಟರ ಮಟ್ಟಿಗೆ ಸರಿ?


       

ಪ್ರಕೃತಿದತ್ತ ಜೀವಕಣಗಳಲ್ಲಿ ಅತೀ ಬುದ್ದಿವಂತ, ಕ್ರಿಯಾಶೀಲ, ವಿಚಾರ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಜೀವಿ ಮಾನವ ಅನ್ನುವುದು ಎಷ್ಟು ಸತ್ಯವೋ ಅದೇ ಮಾನವ ತನ್ನ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವ ವೇಗದಲ್ಲಿ ಪ್ರಕೃತಿಯಿಂದ ದೂರ ಸಾಗುತ್ತಿರುವುದೂ ಅಷ್ಟೇ ಸತ್ಯ. ‘ಆಗಸದಲ್ಲಿ ಹಾರಲು ಹೊರಟವನು ಅಂಗಳ ಮರೆತಂತೆ’! ಆಗಸದಲ್ಲಿ ಹಾರುತ್ತಿರುವ ವಿಮಾನವಾಗಲಿ, ಗಗನಕ್ಕೆ ಹಾರಿದ ಉಪಗ್ರಹವಾಗಲಿ ಸಂಪರ್ಕ ಕೇಂದ್ರದ ನಿಯಂತ್ರಣದಲ್ಲಿದ್ದರೆ ಮಾತ್ರ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದು. ನಿರ್ದಿಷ್ಟ ಮಿತಿ ದಾಟಿದರೆ ಪ್ರಯೋಜನಕ್ಕೆ ಬಾರದು ಮತ್ತು ಅಪಾಯಕಾರಿ! ಪ್ರಕೃತಿಯಿಂದ ಜನ್ಮ ತಳೆದ ಮಾನವ ಪ್ರಕೃತಿಯಿಂದ ದೂರ ಸಾಗುತ್ತಿರುವುದೂ ಮನು ಕುಲಕ್ಕೆ ಅಷ್ಟೇ ಅಪಾಯಕಾರಿ. ಮತ್ತೆ ಪ್ರಕೃತಿಯ ಹತ್ತಿರಕ್ಕೆ ಒಳಗೊಳ್ಳಿಸುವ ಕ್ರಿಯೆಯೇ ‘ಯೋಗ’.


       

ನಾವು ಬಿಟ್ಟ ಉಸಿರನ್ನು ಮರಗಿಡಗಳು ತೆಗೆದುಕೊಳ್ಳುತ್ತವೆ. ಮರಗಿಡಗಳು ಬಿಟ್ಟ ಗಾಳಿಯನ್ನು ನಾವು ಉಸಿರಾಡುತ್ತೇವೆ. ನಮ್ಮ ಜೀವದ ಅರ್ಧಭಾಗ ನಮ್ಮ ಶರೀರದಲ್ಲೂ ಉಳಿದರ್ಧ ಪ್ರಕೃತಿಯಲ್ಲೂ ಇದೆ. ಈ ಸತ್ಯವನ್ನು ನಾವು ಅರಿತದ್ದೇ ಆದರೆ ಯಾರೋ ಬಂದು ನಮಗೆ ಪರಿಸರ ಸಂರಕ್ಷಣೆ ಪಾಠ ಮಾಡುವ ಅಗತ್ಯವೇ ಇಲ್ಲ! ‘ಯೋಗ’ ನಮ್ಮನ್ನು ಪ್ರಕೃತಿಯೊಂದಿಗೆ ಒಳಗೊಳ್ಳಿಸುವಿಕೆಯಲ್ಲಿ ಮಹತ್ತರವಾದುದಾಗಿದೆ.


       

ನಮ್ಮ ದೇಹ ಮತ್ತು ಮನಸ್ಸು ಸದೃಢವಾಗಿರಬೇಕಾದರೆ ನಿತ್ಯ ಜೀವನದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಶಿಸ್ತು ಪಾಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಮುನಿ ಶ್ರೇಷ್ಠರು ಕಂಡುಕೊಂಡ ವಿಧಾನವೇ ‘ಯೋಗ’. ವೇದಕಾಲದ ಋಷಿಗಳಿಂದ ಹುಟ್ಟಿ ಬೆಳೆದು, ಪತಂಜಲಿ ಮಹರ್ಷಿಯಿಂದ ಸರ್ವಾಂಗೀಣ ಆರೋಗ್ಯ-ಅಧ್ಯಾತ್ಮ ವಿದ್ಯೆಯಾಗಿ ಪರಿಷ್ಕರಿಸಲ್ಪಟ್ಟು ಇಂದು ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಸರ್ವಮಾನ್ಯತೆ ಪಡೆದಿದೆ. ವೇದಗಳಿಂದ ಉಗಮವಾದ ಯೋಗವು ತನ್ನ ವ್ಯಾಪ್ತಿಯನ್ನು ಬೌದ್ಧ,ಜೈನ ಇತರೆ ಧರ್ಮಗಳಿಗೂ ವ್ಯಾಪಿಸಿ ಆಯಾ ಧರ್ಮಗಳ ನೆಲೆಗಟ್ಟಿನಲ್ಲಿ ಅಳವಡಿಸಿಕೊಂಡು ಅನುಸರಿಸುತ್ತಾ ಬಂದಿರುವುದನ್ನು ಕಾಣಬಹುದು. ಆಧುನಿಕ ಇಸ್ಲಾಂ ಯೋಗವನ್ನು ನಿಷೇಧಿಸುತ್ತದಾದರೂ, ಸೂಫಿ ಪಂಥದಲ್ಲಿ ಆಸನಗಳು ಹಾಗೂ ಪ್ರಾಣಾಯಾಮಗಳೆರಡನ್ನೂ ಅಳವಡಿಸಿಕೊಳ್ಳಲಾಗಿದೆ.


       

ಯೋಗ ಅನ್ನುವುದು ದೇಹ ಮತ್ತು ಮನಸ್ಸು ಇಷ್ಟಕ್ಕೇ ಸೀಮಿತವಾದುದಲ್ಲ. ಮಾನವನನ್ನು ಅಧ್ಯಾತ್ಮದತ್ತ ಕರೆದೊಯ್ಯುವ ಮಾರ್ಗ. ಯೋಗವೆಂದರೆ ಒಳಗೂಡಿಸಿಕೊಳ್ಳುವಿಕೆ. ಒಳಗೂಡಿಸಿಕೊಳ್ಳುವಿಕೆಯನ್ನು ಭೌತಿಕ ಪ್ರಕೃತಿಯ ಆಚೆಗೆ ವಿಸ್ತರಿಸಬಹುದು. ಒಂದು ನಿರ್ದಿಷ್ಟ ಮಟ್ಟದಲ್ಲಿ ಒಳಗೂಡಿಸಿಕೊಳ್ಳುವಿಕೆ ನಮ್ಮಲ್ಲಿ ಸಂಭವಿಸಿದರೆ ಮಾತ್ರ ನಾವಲ್ಲದ ಯಾವುದನ್ನಾದರೂ ನಾವಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಆಗ ನಾವು ಒಂದೆಡೆ ಕುಳಿತುಕೊಂಡು ವಿಶ್ವವನ್ನು ನಾವಾಗಿ ಅನುಭವಿಸಬಹುದು. ಇದು ನಮಗೆ ಸಾಧ್ಯವಾದದ್ದೇ ಆದರೆ ನಾವು ಯೋಗದಲ್ಲಿದ್ದೇವೆ ಎಂದು ಹೇಳಬಹುದು.


        ಆದರೆ ಈ ಯೋಗಾಸನಗಳು ಏಕೆ?


       

ನಮಗೆಲ್ಲ ತಿಳಿದಿದೆ 1970-80 ರ ದಶಕದಲ್ಲಿ ಆಗ ತಾನೇ ಟಿ.ವಿ ಗಳು ಬಂದಿದ್ದವು. ಮನೆಯ ಮೇಲೆ ಎತ್ತರಕ್ಕೆ ಆಂಟೆನಾ ಅಳವಡಿಸುತ್ತಿದ್ದರು. ಕೆಲವೊಮ್ಮೆ ಟಿವಿಯಲ್ಲಿ ಚುಕ್ಕಿಗಳು ಬಂದು ಗೊರ್ ಎಂದು ಸದ್ದಾಗುತ್ತಿತ್ತು. ಆಗ ಯಾರಾದರೊಬ್ಬರು ಮನೆಯ ಮೇಲೆ ಹತ್ತಿ ಸರಿಯಾದ ಕೋನದಲ್ಲಿ ತಿರುಗಿಸಿದಾಗ ಪ್ರಪಂಚ ನಮ್ಮ ಮುಂದೆ ಬರುತ್ತಿತ್ತು! ನಮ್ಮ ಶರೀರವನ್ನು ಸರಿಯಾದ ರೀತಿಯಲ್ಲಿ ಹಿಡಿದಿಡಲು ನಾವು ಕಲಿತಾಗ ಇಡೀ ಬ್ರಹ್ಮಾಂಡವನ್ನು ಅದರಲ್ಲಿ ಕಂಡುಕೊಳ್ಳಬಹುದು. ಇದೇ ಹಠ ಯೋಗ. ಯೋಗವೆಂದರೆ ತಿರುಚಿ ಮಡಚುವುದಲ್ಲ. ನಮ್ಮ ಮೂಲ ಸ್ವಭಾವವನ್ನು ಮಾರ್ಪಡಿಸುದು. ಅದನ್ನು ಯೋಗಾ ಮ್ಯಾಟ್ ಮೇಲೆಯೇ ಮಾಡಬೇಕಾಗಿಲ್ಲ. ಇದಾವುದೂ ಇಲ್ಲದೆ ಮೂಲ ಮಾರ್ಪಾಡು ತರಬಹುದು. ನಮ್ಮ ಜೀವನವನ್ನೇ ಯೋಗವಾಗಿ ಮಾಡಿದಾಗ;  ಯೋಗದ ಅರ್ಥ ಒಂದು ದೃಷ್ಟಿಯಲ್ಲಿ ಯಾವುದು ನಮ್ಮನ್ನು ಉತ್ಕೃಷ್ಟ ಸಾಧನೆಗೆ ತರುತ್ತದೋ ಅದೇ ಯೋಗ. ಆದ್ದರಿಂದ ಯೋಗವನ್ನು ಬೇರೊಂದು ರೀತಿಯಲ್ಲಿ ಸಮೀಪಿಸುವುದು ಉತ್ತಮ. ಯೋಗ ಬಹಳ ಸೂಕ್ಷ್ಮವಾದ ಆಯಾಮ. ಇದನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸಬೇಕು. ನಿರ್ವಹಣೆಯಲ್ಲಿ ಅತಿ ನಿಖರತೆಯಿರಬೇಕು. ಇಲ್ಲದಿದ್ದರೆ ಅಪಾಯವೇ ಆಗಬಹುದು. ಯೋಗಕ್ಕೆ ಯತ್ನಿಸುವ ಮೊದಲು ಯೋಗದ ‘ಉಪ-ಯೋಗ’ ಕ್ಕೆ ಯತ್ನಿಸಬಹುದು. ಇದನ್ನು ಮುಂಚಿನ ಯೋಗ ಅಥವಾ ಅಧೀನ ಯೋಗ ಅನ್ನುತ್ತಾರೆ. ನಾವು ವಿವಿಧ ಆಸನಗಳನ್ನು ಮಾಡುವುದೇ ಯೋಗವಲ್ಲ ಅದು ಉಪ-ಯೋಗ. ಟಿ.ವಿ ಸರಿಯಾಗಿ ಬರಲು ಆಂಟೆನ ತಿರುಗಿಸಿದಂತೆ! ಅದರ ಮುಂದಿನ ಸ್ಥಿತಿ ತಲುಪಿದಾಗ ಅದು ಯೋಗ. ಉಪ-ಯೋಗ ವೆಂದರೆ ಭಾರತೀಯ ಆಡು ಮಾತಿನಲ್ಲಿ ‘ಪ್ರಯೋಜನಕ್ಕೆ ಬರುವ’ ಎಂದರ್ಥ. ಇದರ ಮೂಲ ಅರ್ಥ ಯೋಗಕ್ಕೆ ಮೊದಲಿನದು. ಯೋಗವನ್ನು ಮಾಡುವಲ್ಲಿ ಉಪಯೋಗವಾದುದು ಎಂದು.


       

ಜಗತ್ತನ್ನು ಅರಿಯಲು ನಮಗೆ ವಿಜ್ಞಾನ, ತಂತ್ರಜ್ಞಾನ ಬೇಕು. ನಮ್ಮನ್ನು ನಾವು ಅರಿಯಲು ಯೋಗ ಬೇಕು. ನಮ್ಮನ್ನು ನಾವು ತಿಳಿಯುವುದೂ ಎತ್ತರದ ಸಾಧನೆಯೇ ಅಲ್ಲವೆ? ಹೌದು! ಆಧ್ಯಾತ್ಮದಿಂದ ದೂರವಿದ್ದ ಜಗತ್ತಿನ ಎಷ್ಟೋ ಮುಂದುವರಿದ ರಾಷ್ಷ್ರಗಳು  ಶತಮಾನಗಳನ್ನೇ ಕಳೆದು ಎಲ್ಲವನ್ನೂ ಗಳಿಸಿದ ಮೇಲೆ ಗಳಿಸಲು ಇನ್ನೇನಿದೆ ಎಂದು ಬೀಗುತ್ತಿದ್ದಾಗ ಭಾರತದ ಅಧ್ಯಾತ್ಮದ ಕಿಡಿ ತಾಗಿ ತಿರುಗಿ ನೋಡಲು ತಮ್ಮನ್ನು ತಾವು ಅರಿಯುವಲ್ಲಿ ಎಷ್ಟು ಹಿಂದುಳಿದಿದ್ದೇವೆ ಅನ್ನುವುದನ್ನು ಮನದಟ್ಟು ಮಾಡಿಕೊಂಡು ಅದರ ಸಿದ್ಧಿಗಾಗಿ ಭಾರತದತ್ತ ಹೊರಟರು. ಇಂದು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತದ ಯೋಗ ವಿಶ್ವಕ್ಕೆ ಸುಯೋಗ!

ಡಾ.ಕಿರಣ್ ಸಿಡ್ಲೇಹಳ್ಳಿಸಾಹಿತಿ

ಹಾಗೂ ಸಂಸ್ಕೃತಿ ಚಿಂತಕರು