ಮಂಡ್ಯ: ದೇಶದ ಎಲ್ಲೆಡೆ ಹರಡಿರುವ ಮಹಾಮಾರಿ ಕರೋನ ಓಡಿಸುವ ಕಠಿಣ ಸಂದರ್ಭದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಆರೋಗ್ಯವೃದ್ಧಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ .ಕೆ.ಸಿ ನಾರಾಯಣಗೌಡ ಹೇಳಿದರು.
ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ತುಮಕೂರು ಹಾಗೂ ಮೈಸೂರಿನ ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕೋವಿಡ್-19 ನಿರ್ವಹಣೆಗಾಗಿ ಉಚಿತ ಆನ್‌ಲೈನ್ ಯೋಗ ತರಗತಿಗಳ ಕಾರ್ಯಕ್ರಮವನ್ನು ಜೂಮ್ ವಿಡಿಯೋ ಸಂವಾದದ ಮೂಲಕ ವರ್ಚುವಲ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಮ್ಮ ರಾಜ್ಯ ಹಾಗೂ ರಾ? ಮಟ್ಟದಲ್ಲಿ ಉಚಿತ ಯೋಗ ತರಗತಿ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದು ಖುಷಿ ತಂದಿದೆ ಎಂದರು.
ಯೋಗದ ಮುಖಾಂತರ ಈ ಕರೋನವನ್ನು ಹೊಡೆದು ಓಡಿಸಬಹುದಾಗಿದ್ದು ನಮ್ಮ ಕುಟುಂಬದ ಹಿರಿಯ ಕಿರಿಯರೆಲ್ಲರ ಆರೋಗ್ಯವನ್ನು ವೃದ್ಧಿಸಿ ಅವರಲ್ಲಿ ಶಕ್ತಿ ತುಂಬುವಲ್ಲಿ ಯೋಗ ಮಹತ್ವದ ಪಾತ್ರ ವಹಿಸಿದೆ ಎಂದರು.
ಪಾರಂಪರಿಕ ಇತಿಹಾಸವನ್ನು ಹೊಂದಿರುವ ಯೋಗವನ್ನು ನಾವೆಲ್ಲರೂ ಮರೆತಿದ್ದೇವೆ ಆದರೆ ಪ್ರಸ್ತುತದ ಕಠಿಣ ಸಂದರ್ಭದಲ್ಲಿ ಹಿಂದಿನ ಕಾಲದಂತೆಯೇ ಬೆಳಿಗ್ಗೆ ಹಾಗೂ ಸಂಜೆ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಹೊರಗೆ ತಿರುಗಾಡುವ ಬದಲು ಮನೆಯಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಹಾಗೂ ಈ ಉಚಿತ ಯೋಗ ತರಗತಿಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ವಿಡಿಯೋ ಸಂವಾದದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಪ್ರೊ.ಕೆ.ಇ ದೇವನಾಥನ್, ಭಾರತ ಸರ್ಕಾರದ ಎನ್ .ಎಸ್.ಎಸ್ ಪ್ರಾದೇಶಿಕ ನಿರ್ದೇಶಕರಾದ ಖಾದ್ರಿ ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.
ಪತ್ರಕರ್ತರ ಕಾರ್ಯ ಶ್ಲಾಘನೀಯ:
ಕರೋನಾದಂಥ ಸಮಯದಲ್ಲೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ .ಕೆ.ಸಿ ನಾರಾಯಣಗೌಡ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಕರ್ತರಿಗೆ ಕೋವಿಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸುದ್ದಿ ನೀಡುವಲ್ಲಿ ಗಾಳಿ, ಮಳೆ , ಚಳಿಯನ್ನು ಲೆಕ್ಕಿಸದೇ ಕೆಲಸ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತ ಕೆಲಸ ಎಂದರು. ಯಾವುದಕ್ಕೂ ಧೈರ್ಯಗೆಡದೇ ಮುನ್ನುಗುವ ನಿಮ್ಮ ಕಾರ್ಯವೈಖರಿಗೆ ಪತ್ರಿಕೋದ್ಯಮದ ಕಲಿಕೆಯೇ ಕಾರಣ ಎಂದು ಭಾವಿಸಿದ್ದೇನೆ ಎಂದರು. ಸುದ್ದಿಯ ಧಾವಂತದಲ್ಲಿ ವೇಗವಾಗಿ ಕೆಲಸಕ್ಕೆ ಹೋಗುವ ಜವಾಬ್ದಾರಿ ನಿಮ್ಮದಾಗಿದ್ದು, ಆದ ಕಾರಣ ನಿಮ್ಮೆಲ್ಲರ ರಕ್ಷಣೆಗೆ ಸಾಮಾನ್ಯ ವಿಮೆಯನ್ನು ಮಾಡಿಸಿಕೊಳ್ಳಿ ಎಂದರು.
ನಂತರದಲ್ಲಿ ಪತ್ರಕರ್ತರಿಗೆ ಔ?ಧಗಳ ಮೆಡಿಕಲ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಬಾಟಲುಗಳನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ, ಮುಡಾ ಅಧ್ಯಕ್ಷ ಶ್ರೀನಿವಾಸ್, ವಾರ್ತಾಧಿಕಾರಿ ಟಿ.ಕೆ ಹರೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಉಪಾಧ್ಯಕ್ಷ ಬಿ.ಪಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಮೋಹನ್ ರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.