ಒಳಿತು ಮಾಡು ಮನುಷ|

ನೀ ಇರೋದು ಮೂರು ದಿವಸ||

ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ |

ಇಲ್ಲೇ ಕಾಣಬೇಕು ಉಸಿರಿರೋ ಕೊನೇತನಕ ||


ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ರಿಷಿ ಅವರು ಬರೆದಿರುವ ಜನಪದ ಸಾಹಿತ್ಯ ತುಂಬಾ ಸತ್ಯ ಹಾಗೂ ವಾಸ್ತವ. ಈ ಸಾಲುಗಳನ್ನು ಈ ಸಂದರ್ಭದಲ್ಲಿ ನೆನೆಯುವುದಕ್ಕೆ ಒಂದು‌ ಬಲವಾದ ಕಾರಣವಿದೆ. ಸ್ವತಃ ನಮಗೆಯೇ ಕಹಿ ಘಟನೆಯ ಅನುಭವವಾದಾಗ ಸಮಾಜದಲ್ಲಿನ ಈ ಅವ್ಯವಸ್ಥೆಗಳ ಬಗ್ಗೆ ಥೂ ಎನಿಸುತ್ತದೆ. ಆ ಸಂದರ್ಭದಲ್ಲಿ ಉಂಟಾಗುವ ಬೇಸರ ನಮ್ಮನ್ನು ಎಷ್ಟು ತೊಳಲಾಟಕ್ಕೆ ಮತ್ತು ತೀವ್ರ ಆಕ್ರೋಶಕ್ಕೆ ನೂಕುತ್ತದೆಂದರೆ ಹೇಳಲು ಅಸಾಧ್ಯ. ಆದರೆ ಮೊದಲೇ ಗಾದೆ ಇದೆಯಲ್ಲ, ‘ಬಡವನ ಕೋಪ ದವಡೆಗೆ ಮೂಲ’ ಎಂದು.  ಈ ಗಾದೆ ಈಗ ಪ್ರಸ್ತುತ ಹೆಚ್ಚೇ ಎನಿಸಿದೆ. ಆದರೂ ಸಹಿಸಲಾಗುತ್ತಿಲ್ಲ ನೋಡಿ; ನನ್ನೊಳಗಿನ ಬರಹಗಾರನಿಗೆ, ಪ್ರಶ್ನಿಸುವವನಿಗೆ. 

ನನ್ನ ಸ್ನೇಹಿತನ ತಂದೆಯವರಿಗೆ ಚಳಿಗಾಲದ ವಾತಾವರಣದಿಂದಾಗಿ ಹೃದಯ ಸಂಬಂಧಿ ಸಮಸ್ಯೆಯೊಂದು ಅವರನ್ನು ಬಾದಿಸಿತ್ತು. ತಕ್ಷಣ ಹತ್ತಿರದ ಖಾಸಗಿ ಕ್ಲಿನಿಕಲ್’ಗೆ ಕರೆದೋಯ್ದು ಪ್ರಾಥಮಿಕವಾಗಿ ಎಲ್ಲಾ ರೀತಿಯ ಹೃದಯ ವಿಷಯವಾಗಿ ಪರಿಶೀಲಿಸಿದ್ದಾರೆ. ಅಲ್ಲಿಯ ವೈದ್ಯರೊಬ್ಬರು ಹೇಳಿದ್ದು ಹೀಗೆ; ನಿಮ್ಮ ತಂದೆಯವರಿಗೆ ಹೃದಯಘಾತವಾಗಿದೆ ಹಾಗಾಗಿ ನಗರದ ಸುಸರ್ಜಿತ ಖಾಸಗಿ ಆಸ್ಪತ್ರೆಗೆ ಬರೆಯುತ್ತೆನೆ, ಅಲ್ಲಿರುವ ವೈದ್ಯರು ನನ್ನ ಸ್ನೇಹಿತರು, ಅವರ ಬಳಿ ಹೋಗಿ ನಿಮಗೆ ಸರ್ಕಾರಿ ಯೋಜನೆಯೊಂದಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ ಎಂದು. ತಕ್ಷಣ ನನ್ನ ಸ್ನೇಹಿತ ನನಗೆ ದೂರವಾಣಿ ಕರೆಮಾಡಿ, ಇರುವ ವಿಷಯವನ್ನು ನನಗೆ ಮುಟ್ಟಿಸಿದ. ಹಾಗೆಯೇ ನನ್ನೊಂದಿಗಿದ್ದು ನನ್ನ ತಂದೆಯವರ ಚಿಕಿತ್ಸೆ ವಿಚಾರವಾಗಿ ಸಹಾಯ ಮಾಡು ಗೆಳೆಯ ಎಂದು ಕೇಳಿಕೊಂಡ. ಸರಿ ನೀನು ಆಸ್ಪತ್ರೆ ಬಳಿ ನಿನ್ನ ತಂದೆಯವರೊಟ್ಟಿಗೆ ಬಾ ಗೆಳೆಯ, ನಾನು ಕೂಡ ಬರುತ್ತೇನೆ ಎಂದೆ.

ಆದರೆ ನಾನು ಕೆಲಸದ ನಿಮಿತ್ತ ಸ್ವಲ್ಪ ತಡವಾಗಿ ಆಸ್ಪತ್ರೆಗೆ ತೆರಳಿದೆ. ನಾನು ಹೋಗುವಷ್ಟರಲ್ಲಿ ನನ್ನ ಗೆಳೆಯನೇ ಅವರ ತಂದೆಯವರನ್ನು ಆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಅವನನ್ನು ಭೇಟಿಯಾದ ತಕ್ಷಣದಲ್ಲೇ ತಿಳಿಸಿದ ವಿಷಯ ನನಗೂ ಗೊಂದಲ ಆತನಿಗೂ ಗೊಂದಲ. ಗೆಳೆಯ ಇಲ್ಲಿ ಸರ್ಕಾರಿ ಯೋಜನೆಯೊಂದರಲ್ಲಿ ಉಚಿತ ಚಿಕಿತ್ಸೆ ಎಂದು ದಾಖಲಿಸಿಕೊಂಡರು ಆದರೆ ನಿಮ್ಮ ಹಣ ಕೊನೆಯಲ್ಲಿ ಜಮಾವಾಗುವುದು ಹಾಗಾಗಿ ತುರ್ತಾಗಿ‌ ನಿಮ್ಮ ತಂದೆಯವರಿಗೆ ಅಂಜಿಯೋಗ್ರಾಮ್ ಸ್ಕ್ಯಾನಿಂಗ್ ಮಾಡಬೇಕು ಎಂದು ಸಬೂಬು ಹೇಳಿ 4500 ಹಣ ಕಟ್ಟಿಸಿಕೊಂಡರು ಎಂದ. ಸರಿ, ಇರಲಿ; ಮೊದಲು ತಂದೆಯವರ ಆರೋಗ್ಯ ಸುಧಾರಿಸಲಿ ಚಿಂತಿಸಬೇಡ ಇರು ಗೆಳೆಯ ಕೊನೆಯಲ್ಲಿ ಕೊಡುತ್ತಾರಲ್ಲ ಎಂದೆ. ಸರಿ ಎಂದು ನನ್ನ ಸ್ನೇಹಿತ ಸಮಾಧಾನಗೊಂಡ, ಆದರೂ ಅವನಲ್ಲಿದ್ದ ಆತಂಕ ಮತ್ತು ಬೇಸರ ಏನೆಂದರೆ ಈ ಆಸ್ಪತ್ರೆಯಲ್ಲಿ ಇನ್ನೆಷ್ಟು ಹಣ ಸುಲಿಗೆ ಮಾಡುತ್ತಾರೋ, ನಾನು ಈಗಾಗಲೇ ಸಾಲಕ್ಕೆ ತಂದಿರುವ ಪುಡಿಗಾಸು ಕೂಡ ಖರ್ಚಾಗಿ ಮತ್ಯಾರ ಬಳಿ ಸಾಲಕ್ಕಾಗಿ ಕೈ ಚಾಚಲಿ. ಇಲ್ಲಿ ಎಲ್ಲವೂ ಉಚಿತ ಎಂದು ಈಗ ಒಂದೊಂದಾಗಿ ಹೇಳಿ ಹಣ ಕೀಳುತ್ತಿದ್ದಾರಲ್ಲ ಎಂದು.

ಸ್ವಲ್ಪ ಸಮಯದ ನಂತರ ದಾದಿಯೊಬ್ಬರು ಬಂದು ನಮ್ಮನ್ನು ವೈದ್ಯರಲ್ಲಿಗೆ ಕರೆದೋಯ್ದರು. ಅಲ್ಲಿ ನಮಗೆ ಏನಾಗಿದೆ ಎಂದು ಪ್ರಶ್ನೆ ಕೇಳುವುದಕ್ಕೆ ಅವಕಾಶವೇ ಇರಲಿಲ್ಲ. ಓದ ತಕ್ಷಣ ವೈದ್ಯರು ಹೇಳಿದ್ದು; ನಿಮ್ಮ ತಂದೆಯವರಿಗೆ ಹೃದಯಾಘಾತ ಆಗಿದೆ, ಹೃದಯದ ಎರಡು ನಾಳಗಳಲ್ಲಿ ಒಂದು ನಾಳದಲ್ಲಿ ರಕ್ತಸಂಚಾರಕ್ಕೆ ಅಡೆತಡೆಯಾಗಿದೆ, ತಕ್ಷಣ ಅವರಿಗೆ ಒಂದು ಇಂಜೆಕ್ಷನ್ ಹಾಕಬೇಕು ಹಾಗೆಯೇ ಅವರನ್ನು ಈಗ ಮಾತನಾಡಿಸಿಕೊಂಡುಬಿಡಿ ಏಕೆಂದರೆ ಇನ್ನು ಮೂರು ದಿನಗಳವರೆಗೆ ಅವರನ್ನು ಐ.ಸಿ.ಯು. ನಲ್ಲಿರಿಸಬೇಕಾಗಿದೆ ಹಾಗಾಗಿ ಅಲ್ಲಿಗೆ ವರ್ಗಾಯಿಸುತ್ತೇವೆ ಎಂದರು. ನಾನು ನನ್ನ ಸ್ನೇಹಿತನ ತಂದೆಯವರ ಬಳಿ ಹೋಗಿ; ಹೆದರಬೇಡಿ, ನಿಮ್ಮ ಆರೋಗ್ಯ ಚೆನ್ನಾಗಿದೆ. ಸ್ವಲ್ಪ ಉಷಾರಿಲ್ಲದ ಕಾರಣ ಹೀಗೆ ಸೇರಿಸಿದ್ದೇವೆ ಅಷ್ಟೆ, ಒಂದು ಇಂಜೆಕ್ಷನ್ ಮಾಡುತ್ತಾರೆ ಬೇಗ ಗುಣಮುಖವಾಗುತ್ತೀರ ಎಂದು ಧೈರ್ಯದ ನುಡಿಗಳನ್ನಾಡಿದೆ. ಪಕ್ಕದಲ್ಲೇ ಇದ್ದ ದಾದಿ ತಕ್ಷಣ ಒಂದು ಧ್ವನಿ ಎತ್ತಿದರು; ಏನು ಹೇಳುತ್ತಿದ್ದೀರಿ ನೀವು, ನಿಮ್ಮ ಸ್ನೇಹಿತನ ತಂದೆಗೆ ಹೃದಯಾಘಾತವಾಗಿದೆ, ಜೀವಕ್ಕೆ ಅಪಾಯವಿದೆ ಅದಕ್ಕೆ ಅವರನ್ನು ಐ.ಸಿ.ಯು’ಗೆ ಕಳುಹಿಸುತ್ತಿರುವುದು ನೀವು ಏನೇನೋ ಹೇಳಬೇಡಿ ಎಂದು. ನಾನು ನನ್ನ ಗೆಳೆಯನೊಂದಿಗೆ ಹೇಳಿಕೊಂಡೆ ಇವರು ಯಾವ ಸೀಮೆ ದಾದಿ ಮಾರಾಯ ಧೈರ್ಯ ತುಂಬೋದು ಬಿಟ್ಟು ರೋಗಿಗೆ ಇನ್ನೂ ಭಯ ಹುಟ್ಟಿಸುತ್ತಾರಲ್ಲ ಎಂದು.

ಸರಿ‌ ಬಿಡು ಬಾ ಇಂಜೆಕ್ಷನ್ ತರೋಣ ಎಂದು ಹೊರಟೋ. ಆಗ ನನ್ನ ಗೆಳೆಯನಿಗೆ ಆಸ್ಪತ್ರೆಯವರು ಉಚಿತ ಚಿಕಿತ್ಸೆ ಎಂದು ಹೇಳಿದ್ದು ನೆನಪಾಗಿ  ಇರು ಗೆಳೆಯ ವೈದ್ಯರ ಹತ್ತಿರ ಹೋಗಿ ಬರುತ್ತೇನೆ, ಏನೋ ಕೇಳೋದಿದೆ ಎಂದು ಹಿಂದಕ್ಕೆ ಹೊರಟ. ಅವನು ಹೋದ ಸಂದರ್ಭದಲ್ಲಿ ವೈದ್ಯರು ತಮ್ಮ ದಾದಿಯರ ಬಳಿ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡು ಒಂದೇ ಸಮನೆ ನಾನಿದ್ದ ಜಾಗಕ್ಕೆ ಓಡಿ ಬಂದ. ಗೆಳೆಯ ನಾವು ತರುವ ಇಂಜೆಕ್ಷನ್ ಅನ್ನು ಕೊಡಬೇಡಿ ಹಾಗೆಯೇ ಎತ್ತಿಡಿ ಅಂತ ವೈದ್ಯರು ತಮ್ಮ ದಾದಿಯರ ಬಳಿ ಹೇಳುತ್ತಾ ಇದ್ದಾರೆ, ನಾನು ಮರೆಯಲ್ಲಿ ಕೇಳಿಸಿಕೊಂಡೆ. ಬೆಳಿಗ್ಗೆ ಯಾವ ಹಣವೂ ಇಲ್ಲದೆ ಉಚಿತ ಚಿಕಿತ್ಸೆ ನೀಡುತ್ತೇನೆ ಎಂದು ಈಗ ಒಂದೊಂದಾಗಿ ಅವರದೇ ಆಸ್ಪತ್ರೆಯ ಮೆಡಿಕಲ್ ಅಂಗಡಿಯಲ್ಲಿ ಔಷಧಿಗಳನ್ನು ತರಲು ಹೇಳುತ್ತಿದ್ದಾರೆ ಜೊತೆಗೆ ಅದನ್ನು ರೋಗಿಗೆ ಕೊಡದೇ ಎತ್ತಿಡಲು ಹೇಳುತ್ತಿದ್ದಾರೆ. ನನಗೆ ಯಾಕೋ ಅನುಮಾನ ಗೆಳೆಯ, ಇವರು ಹಣ ವಸೂಲಿ ಮಾಡುವ ಹಾಗೇ ಕಾಣುತ್ತಿದೆ. ಇಲ್ಲಿಂದ ನಮ್ಮ ತಂದೆ ಅವರನ್ನು ಕರೆದುಕೊಂಡು ಹೊರಡುವುದೇ ಸರಿ ಎಂದ‌. ನನಗೂ ನನ್ನ ಗೆಳೆಯ ಹೇಳಿದ್ದೇ ಸರಿ ಎನಿಸಿ; ಗೆಳೆಯ ಹೇಗಿದ್ದರೂ ನಿನ್ನ ಬಳಿ ಹಣವಿಲ್ಲ, ಆ ಕಾರಣವನ್ನೇ ಕೊಟ್ಟು ನಿಮ್ಮ ತಂದೆಯವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದೆ.

ಸರಿ ಎಂದು ಇಬ್ಬರೂ ಹೋಗಿ ವೈದ್ಯರಲ್ಲಿ ನಮ್ಮ ಬಳಿ ಹಣವಿಲ್ಲ, ನಾವು ಕಡುಬಡವರು ಉಚಿತ ಚಿಕಿತ್ಸೆ ಎಂದು ಇಲ್ಲಿಗೆ ಬಂದೋ, ಈಗ ನೀವು ಇಷ್ಟೊಂದು ಹಣ ಖರ್ಚಾಗುವ ಔಷಧಿಗಳನ್ನು ತರಲು ಹೇಳುತ್ತಿದ್ದೀರ, ನಮ್ಮ ಕೈಯಲ್ಲಿ ಆ ಶಕ್ತಿ ಇಲ್ಲ ದಯವಿಟ್ಟು ನಮ್ಮ ತಂದೆಯವರನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡೆವು. ಹಾಗೆಂದೊಡನೆ ನಮ್ಮಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಔಷಧಿಗಳಿವೆ ನೀವೇಕೆ ತರಲು ಹೋದಿರಿ, ಇರಿ ನಾನು ನಿಮಗೆ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸುತ್ತೇನೆ ಎಂದರು. ಆ ಮುಂಚೆ ನಮ್ಮ ಬಳಿ ಇಂಜೆಕ್ಷನ್ ಖಾಲಿಯಾಗಿದೆ, ಕೆಳಗಡೆ ನಮ್ಮದೇ ಔಷಧಿ ಅಂಗಡಿ ಇದೆ ಅಲ್ಲಿ ತನ್ನಿ ಎಂದು ಹೇಳಿದ ಆ ವೈದ್ಯರು ಈಗ ಈ ರೀತಿ ಹೇಳುವುದನ್ನು ನೋಡಿ ನಮಗೆ ಆಶ್ಚರ್ಯದ ಜೊತೆಗೆ ಭಯವೂ ಆರಂಭವಾಯಿತು. ಏನಪ್ಪ ಇವರು ನಿಮಿಷಕ್ಕೊಂದು ಮಾತನಾಡುತ್ತಾರಲ್ಲ ಎಂದು. ಒಂದೆರೆಡು ನಿಮಿಷಗಳ ಹಿಂದೆ ನಾವಿಬ್ಬರು ದೃಢವಾಗಿ ನಿಶ್ಚಯಿಸಿಕೊಂಡೇ ಬಂದಿದ್ದೆವು ಇಲ್ಲಿಂದ ಕರೆದುಕೊಂಡು ವಾಪಾಸು ಹೋಗಲೇ ಬೇಕೆಂದು. ಹಾಗಾಗಿ ಅವರು ಏನೇ ಹೇಳಿ ಸಮಾಧಾನಿಸಿದರೂ ನಾವು ನಿರಾಕರಿಸುತ್ತಿದ್ದೆವು‌. ಮತ್ತೊಬ್ಬ ಹಿರಿಯ ವೈದ್ಯರು ಬಂದು, ನೋಡಿ ನಿಮ್ಮ ತಂದೆಯವರ ಸ್ಥಿತಿ ತುಂಬಾ ಹದಗೆಟ್ಟಿದೆ ನೀವು ಇಲ್ಲಿಂದ ಹೊರಗೆ ಹೋದರೆ ದಾರಿ ಮಧ್ಯದಲ್ಲಿ ನಿಮ್ಮ ತಂದೆಯ ಜೀವಕ್ಕೆ ತೊಂದರೆ ಆಗಬಹುದು ಯೋಚನೆ ಮಾಡಿ. ಉಚಿತ ಚಿಕಿತ್ಸೆ ಎಂದರೂ ನೀವೇಕೆ ಹೋಗುತ್ತಿರುವಿರಿ ಎಂದು ನಮ್ಮನ್ನೇ ಪ್ರಶ್ನಿಸುತ್ತಿದ್ದರು.

ನಮ್ಮದು ಒಂದೇ ಹಠ ನಾವು ಇಲ್ಲಿಂದ ಹೋಗುತ್ತೇವೆಂದು. ನಮ್ಮನ್ನು ಕಮ್ಮಿ ಎಂದರೂ ಹತ್ತಾರು ಬಾರಿ ಬಂದು  ಎದುರಿಸಿದರು ನಿಮ್ಮ ತಂದೆಯವರ ಜೀವಕ್ಕೆ ತೊಂದರೆ ಇದೆ ಯೋಚಿಸಿ ಎಂದು. ನಂತರ ನಾವು ಒಪ್ಪದೆ ಇದ್ದಾಗ ಸರಿ ನಿಮ್ಮಿಷ್ಟ ನಿಮ್ಮ ತಂದೆಯವರನ್ನು ಕಳುಹಿಸಿ ಕೊಡುತ್ತೇವೆ ಎಂದವರು ಎರಡು ಗಂಟೆ ಆದರೂ ಕಳುಹಿಸಿಕೊಡಲಿಲ್ಲ. ಹೇಗಾದರೂ ಒಂದು ರಾತ್ರಿ ಸಮಯ ಇಲ್ಲಿ ಉಳಿಸಿಕೊಳ್ಳಬೇಕು, ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದು ತೀರ್ಮಾನಿಸಿದ್ದರು. ಹಣಕೀಳಬೇಕು ಎನ್ನುವುದೇ ಅವರಲ್ಲಿನ ವಿಚಾರ. ಒಂದು ರೀತಿಯ ವ್ಯಾಪಾರದ ಮನಸ್ಥಿತಿ ಅವರದು, ಅವರ ನಡತೆಯಲ್ಲೇ ತಿಳಿಯುತ್ತಿತ್ತು. ನಾವು ವೈದ್ಯರ ಬಳಿ ಹತ್ತಾರು ಬಾರಿ ಸುತ್ತಾಡಿ ಪೀಡಿಸಿದ ನಂತರ ರಾತ್ರಿ ಸಮಯ ಸುಮಾರು ಒಂಭತ್ತು ಗಂಟೆಗೆ ಕಳುಹಿಸಿದರು. ನನ್ನ ಗೆಳೆಯ ಅವರ ತಂದೆಯವರನ್ನು ತನ್ನ ಮನೆಗೆ ಕರೆದುಕೊಂಡು ಹೋದ ನಂತರ ಮೂರು ದಿನಗಳ ಕಾಲ ಯಾವುದೇ ಚಿಕಿತ್ಸೆ ಇಲ್ಲದೆ ಮನೆಯಲ್ಲೇ ಇರಿಸಿಕೊಂಡಿದ್ದು ನಂತರ ಸರ್ಕಾರಿ ಹೃದಯ ಸಂಬಂಧಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿದ್ದ ವೈದ್ಯರು ನನ್ನ ಗೆಳೆಯನ ತಂದೆಯವರನ್ನು ಸರಿಯಾಗಿ ಪರಿಶೀಲಿಸಿದ ನಂತರ ಧೈರ್ಯದ ಮಾತುಗಳನ್ನಾಡಿದ್ದಾರೆ.

ಅವರ ಮಾತನ್ನು ಕೇಳಿ ಒಂದೆಡೆ ಸಂತೋಷ, ಇನ್ನೊಂದೆಡೆ ಮನಸಿನಲ್ಲೆಲ್ಲೋ ಇದ್ದ ಆತಂಕದ ನೆನಪು, ಹಿಂದೆ ಹೋಗಿದ್ದ ಆಸ್ಪತ್ರೆಯಲ್ಲೇ ಇದ್ದಿದ್ದರೆ ಈ ರೀತಿ ಒಳಿತಾಗುತ್ತಿತ್ತೇ ಎಂದು. ಸದ್ಯ ದೇವರು ದೊಡ್ಡವನು ನಮ್ಮ ಮನಸಿನಲ್ಲಿ ಬಲವಾಗಿ ಒಳ್ಳೆಯ ಯೋಚನೆಯಲ್ಲಿ ಕುಳಿತು ನಮ್ಮನ್ನು ಕಾಪಾಡಿದನೆಂದು. ಸರ್ಕಾರಿ ಆಸ್ಪತ್ರೆಯ ವೈದ್ಯರು ಹೀಗೆಂದಿದ್ದರು; ನಿಮ್ಮ ತಂದೆಯವರಿಗೆ ದೈಹಿಕವಾಗಿ ಶಕ್ತಿ ಕುಂದಿದೆ, ಅವರಿಗೆ ಕೇವಲ ಒಂದು ತಿಂಗಳ ಮಾತ್ರೆಗಳನ್ನು ಕೊಟ್ಟರೆ ಸಾಕು‌ ಗುಣಮುಖರಾಗುತ್ತಾರೆ, ಜೀವಕ್ಕೆ ಯಾವುದೇ ತೊಂದರೆ ಇಲ್ಲ, ಮತ್ತೆ ಒಂದು‌ ತಿಂಗಳ ನಂತರ ಬನ್ನಿ ಎಂದು ಹೇಳಿ ಕಳುಹಿಸಿದ್ದರು. 

ಇನ್ನೊಂದು ಘಟನೆ, ನನ್ನ ಪರಿಚಯಸ್ತರು ನಗರದಲ್ಲೇ ಇದ್ದಾರೆ. ಅವರ ತಂದೆಗೆ ಸಕ್ಕರೆ ಖಾಯಿಲೆ. ಮನೆಯಲ್ಲೇ  ಮಾತ್ರೆಗಳನ್ನು ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇತ್ತೀಚೆಗೆ ವೈದ್ಯರನ್ನು ಭೇಟಿಯಾದಾಗ ಹೀಗೆಂದಿದ್ದರು ಕಾಲಿನ ಬೆರಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಿರಿ ಇಲ್ಲವೆಂದರೆ ಇಡಿ ಕಾಲೇ ತೆಗೆಯಬೇಕಾದ ಸಂಭವ ಬರಬಹುದು ಎಂದು.  ಸರಿ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಅವರಿಗೆ ಖರ್ಚಾದ ಹಣ ಸುಮಾರು 4 ಲಕ್ಷ. ಕೊನೆಗೆ ಬೇಸತ್ತು ಇವರ ಸಹವಾಸವೇ ಬೇಡವೆಂದು ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿ ಶಸ್ತ್ರಚಿಕಿತ್ಸೆ ಏನೋ ಆಯಿತು ಆದರೆ ಮನೆಗೆ ಕರೆತಂದ ಎರಡೇ ದಿನದಲ್ಲಿ ಮೃತರಾದರು. ಇಲ್ಲಿ ಯಾರನ್ನು ದೂರುವುದು. ಮನೆಯಲ್ಲಿ ಇದ್ದವರನ್ನು ಮುಂಜಾಗ್ರತೆಯಿಂದ ಆಸ್ಪತ್ರೆಗೆ ಕರೆಸಿದವರನ್ನೋ ಅಥವಾ ಕಾಣದ ದೇವರನ್ನೋ ಒಂದೂ ತಿಳಿಯುತ್ತಿಲ್ಲ. 

ಮಾನವರಾದ ನಾವುಗಳು ಮಾನವರನ್ನೇ ಹಿಂಸಿಸಿ, ಮೋಸಗೊಳಿಸಿ ಬದುಕುವ ರೀತಿ ಒಳಿತಿಗಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ. ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಎನ್ನುವ ತಾತ್ಪರ್ಯವನ್ನು ನೆನೆದು ಮನುಷ್ಯರಾಗಿ ಜೀವಿಸಬೇಕಿದೆ. ಜನಸಾಮಾನ್ಯರು ಜಾಗೃತರಾಗಬೇಕಿದೆ. ಸರ್ಕಾರಿ ಸವಲತ್ತುಗಳು, ಯೋಜನೆಗಳು ಎಂದ ಮೇಲೆ ಯಾವುದೇ ರೀತಿಯ ಶುಲ್ಕ ವಿಧಿಸದೇ ಚಿಕಿತ್ಸೆ ಪಡೆದುಕೊಳ್ಳುವ ಬುದ್ಧಿವಂತರಾಗಬೇಕು. ಒಬ್ಬರ ಜೀವವನ್ನು ಮಧ್ಯಸ್ಥಿಕೆಯಾಗಿಟ್ಟುಕೊಂಡು ಇಲ್ಲಸಲ್ಲದ್ದನ್ನು ಹೇಳಿ ಹೆದರಿಸಿ ವ್ಯವಹರಿಸುವರ ವಿರುದ್ಧ ಧ್ವನಿ ಎತ್ತುವುದು ಅಗತ್ಯವಾಗಿದೆ. ಸರ್ಕಾರವು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಯೋಜನೆಗಳನ್ನೇನೋ ಮಾಡಿದೆ ಆದರೆ ಅದರ ಜೊತೆಗೆ ಯೋಜನೆಗಳು ಸರಿಯಾದ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪುತ್ತಿದೆಯೇ ಎಂದು ಗಮನಿಸುವುದೂ ಅಷ್ಟೇ ಅಗತ್ಯ ಎನ್ನುವುದನ್ನು ಮರೆತಿದೆ.

ಕೆಲವು ಆಸ್ಪತ್ರೆಗಳಲ್ಲಿ ನೆಗಡಿ ಎಂದು ಹೋದವನಿಗೂ ದೊಡ್ಡ ಖಾಯಿಲೆ ಇರುವ ಹಾಗೆ ಅವಶ್ಯಕತೆ ಇಲ್ಲದಿದ್ದರೂ ದೇಹಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಮಾಡಿ ಕೊನೆಗೆ ಏನೂ ತೊಂದರೆ ಇಲ್ಲ, ಎಲ್ಲ ಸರಿಯಾಗಿದೆ ಎಂದು ಹೇಳಿ ಜನರನ್ನು ಮಾನಸಿಕವಾಗಿ ಬೆದರಿಸಿ ಹಣ ಕೀಳುವ ತಂತ್ರಗಾರಿಕೆ ನಮ್ಮ ಉತ್ತಮ ಸಮಾಜಕ್ಕೆ ಪೂರಕವಲ್ಲ. ಅಶಿಕ್ಷಿತರು ಇಂದು ಕಳ್ಳರಲ್ಲ, ಸುಳ್ಳರಲ್ಲ, ಮೋಸಗಾರರಲ್ಲ ಶಿಕ್ಷಿತರೇ ಸುಳ್ಳರು, ಮೋಸಗಾರರು ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ವಂಚನೆ ಮಾಡುವವರಿದ್ದಾರೆ ಅಂತೆಯೇ ಈ ಆರೋಗ್ಯ ಕ್ಷೇತ್ರದಲ್ಲಿರುವ ವಂಚಕರ ಸುಳಿವನ್ನು ಹಿಡಿದು ಮಾತ್ರ ಈ ಅನಿಸಿಕೆ. ನಿಷ್ಠಾವಂತ ವೈದ್ಯರಿಗೆ, ಆರೋಗ್ಯ ಸಂಸ್ಥೆಗಳಿಗೆ ಸಾರ್ವಜನಿಕರ ಮೆಚ್ಚುಗೆ ಇದ್ದೇ ಇದೆ. ಕೆಲವು ವೈದ್ಯರು ಉಚಿತ ಆರೋಗ್ಯ ಸೇವೆಯನ್ನು ಒದಗಿಸಿ ಸದಾ ಸಮಾಜದ ಒಳಿತನ್ನು ಬಯಸುವವರಿದ್ದಾರೆ. ಆದರೆ ಈ ಮೇಲೆ ತಿಳಿಸಿದಂತೆ ವಂಚಿಸಿ ಹಣಮಾಡುವ ದಂಧೆಕೋರರಿಂದ ಒಳ್ಳೆಯವರ ಕೆಲಸಕ್ಕೂ ತೊಂದರೆ ಆಗುವ ಸಂಭವ ಹೆಚ್ಚು. ಪರಿಸರದಲ್ಲಿ ಈ ಒಳ್ಳೆಯ ಗಿಡಗಳಿಗಿಂತ ಬೇಡದ ಕಳೆಗಳೇ ಹೆಚ್ಚಲ್ಲವೇ ಹಾಗೆ ಈ ವಂಚನೆ ಮಾಡಿ ಬದುಕುವವರ ಸ್ವರೂಪ. ಅವರಂಥೂ ಬದಲಾಗುವುದಿಲ್ಲ, ಆದರೆ ಸರ್ಕಾರ ಮತ್ತು ಸಾಮಾನ್ಯ ಜನತೆ ಈ ದೃಷ್ಟಿಯಲ್ಲಿ ಬುದ್ಧಿವಂತರಾಗಬೇಕಿದೆ ಹಾಗೆಯೇ ಇಂತಹ ಕಳೆಗಳನ್ನು ಸಮಾಜದಿಂದ ಕಿತ್ತೊಗೆದು ಸಮಾಜದ  ಸ್ವಾಸ್ಥ್ಯವನ್ನು ಕಾಪಾಡಬೇಕಿದೆ. 


ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಯುವಸಾಹಿತಿ, ವಿಮರ್ಶಕ, ಸಂಶೋಧಕ

ಹೆಚ್.ಡಿ.ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:-8884684726

Gmail I’d:-Manjunathabr709@gmail.com