ಹಾಸನ: ಬೇಲೂರು ತಾಲೂಕಿನ ಯಗಚಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿಯಷ್ಟೇ ಬಾಕಿಯಿದ್ದು, ಯಾವುದೇ ಕ್ಷಣದಲ್ಲಾದರೂ ಕ್ರಸ್ಟ್ ಗೇಟ್ ಮುಖಾಂತರ ನದಿಗೆ ನೀರು ಹೊರಬಿಡುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕಾರ್ಯ ಪಾಲಕ ಅಭಿಯಂತರ ಎಸ್ ಡಿ ತಿಮ್ಮೇಗೌಡ ಹಾಗೂ ಎಇ ಶಿವಕುಮಾರ್ ಹೇಳಿದ್ದಾರೆ.

ಹಾಗಾಗಿ ಜಲಾಶಯದ ತಳಭಾಗದ ಮತ್ತು ನದಿ ಪಾತ್ರದ ಪ್ರದೇಶದಲ್ಲಿ ಬರುವ ಎಲ್ಲ ಹಳ್ಳಿಗಳ ಸಾರ್ವಜನಿಕರು ಮತ್ತು ರೈತ ಬಾಂಧವರು ಜನ ಜಾನುವಾರು ಹಾಗೂ ಆಸ್ತಿ ಪಾಸ್ತಿ ರಕ್ಷಣೆಯ ದೃಷ್ಠಿಯಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ತಿಳಿಸಲಾಗಿದೆ

ಇನ್ನು ಬೇಲೂರಿನ ತಾಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೂಡು, ಗೆಂಡೇಹಳ್ಳಿ, ಬೇಲೂರು ಪಟ್ಟಣ, ಹಳೇಬೀಡು ಮತ್ತುಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ನೀರು ಜಲಾಶಯಕ್ಕೆ ಹರಿದು ಬಂದಿದ್ದು. 964.603 ಮೀ.ಎತ್ತರ ಮತ್ತು 3.603 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ 3.250ಕ್ಕೂ ಹೆಚ್ಚು  ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು, 3000 ಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಳ ಹರಿವಿನ  ಪ್ರಮಾಣ ಹೆಚ್ಚಾದರೆ ಜಲಾಶಯದಿಂದ ನೀರನ್ನು ಬಿಡುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.. ಈ ಬಾರಿ ಜೂನ್ ನಲ್ಲಿ ಉತ್ತಮ ಮಳೆಯಾಗಿದ್ದು, ಯಗಚಿ ನದಿ ತುಂಬಿ ಹರಿದಿದೆ. ಇದು ಹೇಮಾವತಿಯ ಉಪ ನದಿಯಾಗಿರುವುದರಿಂದ ಜಲಾಶಯದಿಂದ ನೀರು ಹರಿಸಿದರೂ ಹೇಮಾವತಿ ಜಲಾಶಯವನ್ನು ತಲುಪಲಿದ್ದು, ಹೇಮಾವತಿ ಜಲಾಶಯ ಭರ್ತಿಯಾಗಲು ಸಹಕಾರಿಯಾಗಲಿದೆ.

ಇನ್ನು ಯಗಚಿ ನದಿ ಬಗ್ಗೆ ಹೇಳುವುದಾದರೆ ಚಿಕ್ಕ ಮಗಳೂರಿನ ಬಾಬಾ ಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ಈ ನದಿಗೆ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ನದಿಗಳು ಸೇರುತ್ತವೆ. ಹೀಗಾಗಿ ಇದರ ನೀರಿನಮಟ್ಟ ಹೆಚ್ಚಾಗುತ್ತದೆ. ಈ ಬಾರಿ ಯಗಚಿ ಜಲಾಶಯ ಈ ಬಹುಬೇಗ ಭರ್ತಿಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಮಳೆ ಹೆಚ್ಚಾದರೆ ಕರಿಮೆಣಸು ಮತ್ತು ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದ್ದು, ಕೊಳೆರೋಗ ಬಂದು ಮಿಡಿಯಲ್ಲಿಯೇ ಫಸಲು ಉದುರಲಿದೆ. ಇನ್ನೆರಡು ತಿಂಗಳು ಮಳೆಗಾಲದ ಅಬ್ಬರ ಇರುವ ಕಾರಣ ಮಳೆಹಾನಿಯ ಭಯ ಜನರನ್ನು ಕಾಡತೊಡಗಿದೆ.

By admin