ಚಾಮರಾಜನಗರ: ಜೈಹಿಂದ್ ಪ್ರತಿಷ್ಠಾನದ ವತಿಯಿಂದ ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಹುಲಿಗಳ ನಾಡು ಎಂದೇ ಪ್ರಸಿದ್ದವಾಗಿರುವ ಅರಣ್ಯದ ವನ್ಯಜೀವಿ ಗಳಾದ ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಪ್ರಾಣಿಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ವಾಣಿಜ್ಯ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಹದೇವಪ್ಪ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶವಿದೆ. ನೂರಾರು ದೇವಾಲಯಗಳು, ಪ್ರಕೃತಿ ಸಂಪತ್ತು ,ವನ್ಯಮೃಗಗಳ ಬೀಡಾಗಿದೆ. ಗಡಿ ಜಿಲ್ಲೆ ಚಾಮರಾಜನಗರ ವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಿ ಆರ್ಥಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿಗೊಳಿಸಬಹುದು ಎಂದು ತಿಳಿಸಿದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಚಾಮರಾಜನಗರ ಭೂಪ್ರದೇಶದ ಶೇಕಡ ಐವತ್ತಕ್ಕೂ ಹೆಚ್ಚು ಅರಣ್ಯ ಸಂಪತ್ತಿನಿಂದ ಕೂಡಿದ್ದು, ಅಪಾರ ವನ್ಯಮೃಗಗಳು ಇಲ್ಲಿವೆ. ೨೮೦ ಕ್ಕೂ ಹೆಚ್ಚು ಹುಲಿ ಗಳನ್ನು ಹೊಂದಿರುವ ಸಮೃದ್ಧ ಅರಣ್ಯ ಪ್ರದೇಶ ಚಾಮರಾಜನಗರ ಜಿಲ್ಲೆಯಾಗಿದೆ. ಚಾಮರಾಜನಗರವನ್ನು ಹುಲಿಗಳ ನಾಡು ಎಂದೇ ಕರೆಯುವ ದಿಕ್ಕಿನಲ್ಲಿ ಅರಣ್ಯ ಸಂಪತ್ತು ಸಂರಕ್ಷಿಸಲು ಪಡುತ್ತಿದೆ. ಪ್ರಾಣಿ ಪಕ್ಷಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಧಾರ್ಮಿಕವಾಗಿಯೂ ಶ್ರೀಮಂತಿಕೆಯ ದೇವಾಲಯಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟ, ಸಿದ್ದಪ್ಪಾಜಿ ಮಂಟೇಸ್ವಾಮಿ ರವರ ಪುಣ್ಯಕ್ಷೇತ್ರವಾಗಿದ್ದು, ಶ್ರೀ ಚಾಮರಾಜೇಶ್ವರ, ಹರದನಹಳ್ಳಿ ಸಿದ್ದಲಿಂಗೇಶ್ವರ, ವೇಣುಗೋಪಾಲ ಸ್ವಾಮಿ, ಚನ್ನಪ್ಪನ ಪುರದ ವೀರಭದ್ರೇಶ್ವರ ದೇವಾಲಯ, ನರಸಮಂಗಲ ದೇವಾಲಯ, ಉಮ್ಮತ್ತೂರು ದೇವಾಲಯ, ಕನಕಗಿರಿ, ಯಳಂದೂರು ಬಳೇಮಂಟಪ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯ ನೂರಾರು ದೇವಾಲಯಗಳು ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತಿದೆ.
ವಿಶ್ವದ ಪ್ರವಾಸಿಗರು ಚಾಮರಾಜನಗರದ ಕಡೆ ಬರುವಂತೆ ಆಕರ್ಷಣೀಯ ವಾದಂತಹ ಯೋಜನೆಗಳನ್ನು ರೂಪಿಸಿ ಜನಪ್ರಿಯಗೊಳಿಸಬೇಕು ಎಂದು ತಿಳಿಸಿದರು.
ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ, ಕಿಶೋರ್, ಸುಯೋಗ್, ಸುಕೃತ, ಚಿರಂತ್, ಸಾರಂಗ್ ವಾಸುದೇವ್, ಶಂಕರಪುರ ಹಿತರಕ್ಷಣಾ ಸಮಿತಿಯ ನಾಗಸುಂದರ್ ಇದ್ದರು.