ಕುಂಟ ಕುರುಡ ಕಿವುಡ ಮೂಗ ಹೆಸರುಗಳಿಂದ
ಚುಚ್ಚಿ ಚುಚ್ಚಿ ಜರಿದು ಏಕೆ ಹೀಯಾಳಿಸುವಿರಿ?
ವಿಕಲಾಂಗ ಅಂಗವಿಕಲ ಇನ್ನೂ ಮುಂತಾದ
ನಾಮಕರಣಗಳಿಂದೇಕೆ ನಿಂದಿಸಿ ನೋಯಿಸುವಿರಿ?

ಯಾರೋ ಮಾಡಿದ ಯಾವುದೋ ತಪ್ಪಿಗೆ
ಅಮಾಯಕ ಮುಗ್ಧರಿಗೇಕೆ ಅಪಮಾನ ಶಿಕ್ಷೆಯಬಗೆ?
ಯಾವತಪ್ಪೂ ಮಾಡದ ಪಾಪ-ಪುಣ್ಯ ಅರಿಯದ
ಅವ್ಯಕ್ತಿಗೇಕೆ ಪೂರ್ವಜನ್ಮದ ನಂಟುಗಂಟು ಸಂಬಂಧ?

ಕಣ್ಣಿದ್ದೂ ಕುರುಡರಂತೆ ಬಾಳುವರಿಗಿಂತಲೂ
ದೃಷ್ಟಿರಹಿತರ ಬೋಧನೆ ಸಾಧನೆಗಳೇ ಮಿಗಿಲು!
ಕೈ-ಕಾಲುಳ್ಳವರ ಅತ್ಯಾಚಾರ ಅಪರಾಧಕ್ಕಿಂತಲೂ
ಗಾಲಿಕುರ್ಚಿ ಗಾರುಡಿಗರ ಆಚಾರವಿಚಾರವೇ ಮೇಲು!

ಪರಾವಲಂಬಿ ಮಾತೃ-ಪಿತೃ-ಆಚಾರ್ಯದ್ರೋಹಿ
ಅತಿಥಿದ್ರೋಹಿ ಭ್ರಾತೃದ್ರೋಹಿ ನಂಬಿಕೆದ್ರೋಹಿ!
ಮಿತ್ರದ್ರೋಹಿ ದೇಶದ್ರೋಹಿ ಅಯೋಗ್ಯಂಗಿಂತಲೂ
ಅಂಗವಿಕಲ ಅಪ್ರತಿಮ ಸ್ವಾವಲಂಬಿಗಳೇ ಮಿಗಿಲು!

ಅನಗತ್ಯವಾಗಿ ಮೂಗು ತೂರಿಸಿ ತಲೆಗೊಡದ
ಅನ್ವಯಿಸದ ಯಾವುದಕ್ಕೂ ಕೈಬಾಯ್ ಹಾಕದ
ಅನಾಚಾರಭ್ರಷ್ಟಾಚಾರ ನೀತಿಗೆಟ್ಟಕಾರ್ಯಕ್ಕೆ ಮಣೆಹಾಕದ
ಅಮೋಘ ನಿಷ್ಠಾವಂತ ಜೇಷ್ಟ-ಶ್ರೇಷ್ಠ ದೇಶಭಕ್ತರು!

ನಾಡು-ನುಡಿ ಸಂಸ್ಕೃತಿ-ಇತಿಹಾಸದ ನಾಗರಿಕರು
ನಮ್ಮೆಲ್ಲರ ಅಚ್ಚು ಮೆಚ್ಚಿನ ಅನರ್ಘ್ಯ ರತ್ನರಿವರು
ಈಶತಮಾನದ ವಿಶ್ವವಿಕಲಾಂಗ ವಿಶಿಷ್ಟಚೇತನರು
ಆಚಂದ್ರಾರ್ಕ ಅಜರಾಮರ ಅಪೂರ್ವ ಅದ್ಭುತರು!

ಕುಮಾರಕವಿ ಬೋ.ನಾ.ನಟರಾಜ
9036976471