ಚಾಮರಾಜನಗರ: ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ವಿವಿಧ ವಿಷಯಗಳಲ್ಲಿ ನೈಪುಣ್ಯತಾ ತರಬೇತಿಗಳನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ನಗರದ ಮರಿಯಾಲದ ಜೆ.ಎಸ್.ಎಸ್. ನೈಪುಣ್ಯತಾ ತರಬೇತಿ ಸಂಸ್ಥೆಯಲ್ಲಿಂದು ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕೆ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ) ಹಾಗೂ ಜೆ.ಎಸ್.ಎಸ್ ನೈಪುಣ್ಯತಾ ತರಬೇತಿ ಸಂಸ್ಥೆ ಆಶ್ರಯದಲ್ಲಿ ಏರ್ಪಾಡಾಗಿದ್ದ ಹೋಬಳಿ ಮಟ್ಟದ ಉದ್ಯಮ ಶೀಲತಾ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಹಪ್ಪಳ, ಉಪ್ಪಿನಕಾಯಿ, ಖಾರದಪುಡಿ ತಯಾರಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ, ಸಾವಯವ ಬೆಲ್ಲದಂತಹ ತಯಾರಿಕೆಯಲ್ಲಿ ತರಬೇತಿ ನೀಡಿದಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಿ ಆರ್ಥಿಕ ಸ್ವಾವಲಂಭಿಗಳಾಗಲು ಹೆಚ್ಚಿನ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆಯ್ದ ೧೪ ಹೋಬಳಿಗಳಲ್ಲಿ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಆಯೋಜಿಸಬೇಕು ಎಂದರು.
ಉದ್ಯಮಶೀಲತಾ ಶಿಬಿರದಲ್ಲಿ ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ, ಇಲಾಖೆಗಳಿಂದ ದೊರೆಯುವ ಸೌಲಭ್ಯಗಳು, ಬ್ಯಾಂಕ್‌ಗಳಿಂದ ಲಭಿಸುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ೧೮ ರಿಂದ ೫೦ ವರ್ಷದೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು, ಉದ್ಯಮಿಗಳು, ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರು, ರೈತರು, ಮಹಿಳಾ ಸ್ವ-ಸಹಾಯ ಸಂಘದವರು ಇತರೆ ಕಸುಬುದಾರರು ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯಬೇಕು. ಕಾರ್ಯಕ್ರಮಗಳು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದಲ್ಲಿ ಹೆಚ್ಚಿನ ಪರಿಣಾಮಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಹೆಚ್.ಆರ್ ಮಹದೇವಸ್ವಾಮಿ, ಗ್ರಾಮೀಣ ಕೈಗಾರಿಕೆಯ ಉಪನಿರ್ದೆಶಕರಾದ ಕೆ.ಎ ರಾಜೇಂದ್ರಪ್ರಸಾದ್, ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಗುಣ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಎಂ.ಪಿ. ಆರ್‍ಮುಗಂ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ಬಿ. ಶಿವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದಾದ ಬಳಿಕ ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕೈಗಾರಿಕೆ ಪ್ರಾಯೋಜಕತ್ವದಲ್ಲಿ ಜಿಲ್ಲಾ ಉದ್ಯಮ ಕೇಂದ್ರ (ತರಬೇತಿ ಕಾರ್ಯಕ್ರಮ) ಯೋಜನೆಯಡಿಯಲ್ಲಿ ಮರಿಯಾಲದ ಜೆಎಸ್‌ಎಸ್ ನೈಪುಣ್ಯತಾ ತರಬೇತಿ ಸಂಸ್ಥೆಯಲ್ಲಿ ಮಹಿಳಾ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರಾರಂಭಿಸಿರುವ ಡ್ರೆಸ್ ಮೇಕಿಂಗ್ ಕೋರ್ಸ್‌ನಲ್ಲಿ ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ವೀಕ್ಷಿಸಿದರು.
ಡ್ರೆಸ್ ಮೇಕಿಂಗ್ ಕೋರ್ಸ್‌ನಲ್ಲಿ ೧೦ ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಿ ಸ್ವ-ಉದ್ಯೋಗ ಪ್ರಾರಂಭಿಸಲು ಉತ್ತೇಜನ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ಸೂಚಿಸಿ ತರಬೇತಿ ಪಡೆಯಲು ಆಸಕ್ತಿಯುಳ್ಳ ೧೦ ಮಂದಿಯ ಪಟ್ಟಿಯನ್ನು ಪಡೆಯುವಂತೆ ತಿಳಿಸಿದ್ದರು. ಹೀಗಾಗಿ ಈಗಾಗಲೇ ಪ್ರಸ್ತುತ ೪ ಮಂದಿ ಹಾಜರಾಗಿ ಬಹಳ ಉತ್ಸಾಹದಿಂದ ತರಬೇತಿ ಪಡೆಯುತ್ತಿದ್ದಾರೆ. ಸದರಿ ಯೋಜನೆಯಲ್ಲಿ ಇನ್ನುಳಿದಂತೆ ೧೬ ಮಂದಿ ಮಹಿಳೆಯರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.