ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಇತ್ತ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡಾ ಜಯ ಗಳಿಸುವ ಮೂಲಕ ಮತ್ತೊಂದು ಸರಣಿಯಲ್ಲಿ ವೈಟ್ ವಾಷ್ ಮಾಡಿದೆ.

ಮೊದಲನೇ ಟಿ 20 ಪಂದ್ಯದಲ್ಲಿ 62 ರನ್ಗಳ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಫೆಬ್ರವರಿ 26ರಂದು ಧರ್ಮಶಾಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಇಂದು ( ಫೆಬ್ರವರಿ 27 ) ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿಯೂ ಕೂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 28 ರನ್ಗಳಿಗೆ ತನ್ನ ಮೊದಲ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಹೌದು, 8.3 ಓವರ್ಗಳಲ್ಲಿಯೇ ತನ್ನ ಮೊದಲ 4 ವಿಕೆಟ್ಗಳನ್ನು ಕಳೆದುಕೊಂಡ ಶ್ರೀಲಂಕಾ 100ರ ಗಡಿ ದಾಟುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿದವು. ಆದರೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ 38 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸುವುದರ ಮೂಲಕ ಶ್ರೀಲಂಕಾ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿತು.

ಇನ್ನು ಶ್ರೀಲಂಕಾ ನೀಡಿದ 147 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 18 ರನ್ ಗಳಿಸಿ ಔಟ್ ಆದರೆ, ನಾಯಕ ರೋಹಿತ್ ಶರ್ಮಾ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ 21 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 45 ಎಸೆತಗಳಿಗೆ ಅಜೇಯ 73 ರನ್ ಬಾರಿಸುವುದರ ಮೂಲಕ ಸತತ ಮೂರನೇ ಅರ್ಧಶತಕವನ್ನು ಚಚ್ಚಿದರು. ಇನ್ನುಳಿದಂತೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ 5 ರನ್ ಗಳಿಸಿ ಔಟ್ ಆದರೆ, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ಅಜೇಯ 22 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 16.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಬಾರಿಸಿ ಇನ್ನೂ 19 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.

ಈ ಮೂಲಕ ಮತ್ತೊಂದು ವೈಟ್ ವಾಷ್ ಸಾಧನೆ ಮಾಡಿದ ಟೀಮ್ ಇಂಡಿಯಾ ಸತತ 12ನೇ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯದಲ್ಲಿ ಜಯ ಸಾಧಿಸಿತು. ಈ ಜಯದೊಂದಿಗೆ ಈ ಹಿಂದೆ ಸತತ 12 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಅಫ್ಘಾನಿಸ್ತಾನದ ದಾಖಲೆಯನ್ನು ಟೀಮ್ ಇಂಡಿಯಾ ಸರಿದೂಗಿಸಿದೆ.