ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಶ್ರೀಯುತ ಅರವಿಂದ ಮಾಲಗತ್ತಿಯವರು “ಒಂದು ಪ್ರಾಣಿಯನ್ನು ಮಾತ್ರ ವೈಭವೀಕರಿಸಿ ನೋಡುವ ಪರಿಕಲ್ಪನೆ ವೈದಿಕ ಪರಂಪರೆಯಲ್ಲಿದೆ ಎಂಬ ಆಕ್ಷೇಪದ ಮಾತುಗಳನ್ನಾಡಿ, ಹಸುವೊಂದೇ ಪೂಜಾರ್ಹ ಪ್ರಾಣಿಯಲ್ಲ; ನಾಯಿ ಮುಂತಾದ ಪ್ರಾಣಿಗಳೂ ಕೂಡ ಪೂಜಾರ್ಹ ಎಂದು ಹೇಳಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಏಕೆಂದರೆ ‘ವಸುದೈವ ಕುಟುಂಬಕಂ’ ಎಂದು ಇಡೀ ವಿಶ್ವವನ್ನೇ ಕುಟುಂಬದಂತೆ ಕಂಡ ಹಾಗೂ ಸಕಲ ಜೀವಿಗಳಲ್ಲೂ ದೇವರನ್ನು ಕಂಡ ಸನಾತನ ಪರಂಪರೆಯೇ ವೈದಿಕ ಪರಂಪರೆ. ಆದರೆ ಜೀವಿಗಳಲ್ಲೆಲ್ಲ ಹಸುವೊಂದಕ್ಕೆ ಏಕೆ ಇಷ್ಟೊಂದು ಭಕ್ತಿ ಎಂಬುದಕ್ಕೆ ಮಾತ್ರ ನನ್ನ ಸ್ಪಷ್ಟೀಕರಣ.

ನಮ್ಮ ಪರಂಪರೆಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ಥಾನಮಾನವಿದ್ದರೂ ಗೋವು ಮಾತ್ರ ಪೂಜಾರ್ಹಗೊಳ್ಳುತ್ತಿರುವುದರ ಹಿಂದೆ ಅದರದೇ ಆದ ಅನೇಕ ಸಾಮಾಜಿಕ, ವೈಜ್ಞಾನಿಕ ಕಾರಣಗಳು ಅಡಗಿವೆ. ತಾಯಿಯ ಹಾಲಿನ ನಂತರ ನಾವು ಉಪಯೋಗಿಸುವುದು ಈ ಹಸುವಿನ ಹಾಲನ್ನು ಮಾತ್ರ. ಆದ್ದರಿಂದಲೇ ಹಸುವಿಗೆ ಮಾತೆಯ ಸ್ಥಾನವನ್ನೇ ನೀಡಿ ಗೋಮಾತೆ ಎಂದು ಕರೆಯುತ್ತೇವೆ. ಹಾಲು, ಮೊಸರು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳಿಗೆ ಮೂಲ ಈ ಗೋವು. ಹಾಗೆಯೇ ಹಸುವಿನ ಗಂಜಲ, ಸೆಗಣಿ ಕೂಡ ಮಹತ್ವದ್ದೇ. ಬೇರೆ ಯಾವ ಪ್ರಾಣಿಯ ಮಲವನ್ನು (ಸ್ವತಃ ಮನುಷ್ಯನದೂ ಸೇರಿ) ಮುಟ್ಟಲು ಅಸಹ್ಯ ಪಡುವ ನಾವು ಅದೇ ಹಸುವಿನ ಸೆಗಣಿಯನ್ನು, ಗಂಜಲವನ್ನು ಯಾವುದೇ ಅಸಹ್ಯ ಭಾವವಿಲ್ಲದೆ ಉಪಯೋಗಿಸುವ ಪರಂಪರೆ ಬಹಳ ಹಿಂದಿನಿಂದಲೂ ಬಂದಿದೆ. ಹಸುವಿನ ಸೆಗಣಿಯಿಂದ ಮನೆಯ ಒಳ ಮತ್ತು ಹೊರಭಾಗದ ನೆಲವನ್ನು ಸಾರಿಸಿ, ಯಾವುದೇ ಬ್ಯಾಕ್ಟೀರಿಯಾಗಳು ಒಳ ಪ್ರವೇಶಿಸದಂತೆ ತಡೆಯುವ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಇನ್ನು ಹಸುವಿನ ಗಂಜಲದ ರೋಗನಿರೋಧಕ ಶಕ್ತಿ ಬಗೆಗೆ ಹಲವಾರು ಸಂಶೋಧನೆಗಳು ನಡೆದು ಯಶಸ್ಸು ಕಂಡಿವೆ. ಗೋ ಮೂತ್ರ ಆಧಾರಿತ ಔಷಧಗಳು ಎಷ್ಟೋ ಕಾಯಿಲೆಗಳಿಗೆ ಮದ್ದಾಗಿ ಬಳಕೆಯಲ್ಲಿವೆ. ಹಸುವಿನ ಗೊಬ್ಬರವಂತೂ ಸರ್ವೋತ್ಕøಷ್ಟವಾದುದೆಂಬುದು ಕೃಷಿತಜ್ಞರ ಅಭಿಮತ.

ಸತ್ತ ನಂತರದ ಹಸುವಿನ ಕಳೇಬರವನ್ನೂ ಕೂಡ ಕೊಳೆಯಿಸಿ ಅದನ್ನು ಜೀವಾಮೃತವನ್ನಾಗಿ ಬಳಸಿ, ಸಿಂಪಡಿಸಿ ಕೃಷಿಯಲ್ಲಿ ಅತ್ಯುತ್ತಮ ಬೆಳವಣಿಗೆ ಸಾಧಿಸಿರುವ ಉದಾಹರಣೆಗಳೂ ಕೂಡ ನಮ್ಮ ಮುಂದಿವೆ. ಎಲ್ಲ ಸಸ್ತನಿಗಳ ಮೊಲೆಯಲ್ಲಿ ಹಾಲಿದ್ದರೂ ಹಸುವಿನ ಹಾಲು ದೇವರ ಅಭಿಷೇಕದಿಂದ ಹಿಡಿದು ದಿನನಿತ್ಯದ ಬಳಕೆಯವರೆವಿಗೂ ವ್ಯಾಪಕತೆ ಪಡೆದಿದೆ. ಈ ಹಿನ್ನೆಲೆಯಲ್ಲಿಯೇ ನಾಯಿಯ ಮೊಲೆಯಲ್ಲಿ ಎಷ್ಟು ಹಾಲಿದ್ದರೂ ಏನು ಪ್ರಯೋಜನ ಎಂಬ ಜಾನಪದ ಗಾದೆಯೇ ಇದೆ. ಹೀಗೆ ಸರ್ವೋಪಯೋಗಿ ಜೀವಿಯಾದ ಹಸುವಿಗೆ ಪೂಜಾರ್ಹ ಸ್ಥಾನವನ್ನು ಕೊಟ್ಟಿರುವುದರ ಹಿಂದೆ ವೈದಿಕರ ವಿಶಾಲತೆ ಹಾಗೂ ಕೃತಜ್ಞತಾ ಭಾವ ಕಾಣಬಹುದೇ ಹೊರತು ಮತ್ತಾವುದೇ ದೋಷ ಕಾಣುವಂತಿಲ್ಲ.

ಇದರಂತೆ ಇಡೀ ಪ್ರಕೃತಿಯನ್ನೇ ಆರಾಧಿಸುವ ವೈದಿಕ ಪರಂಪರೆ ತುಳಸಿ, ಬಿಲ್ವ ಮುಂತಾದ ಪತ್ರೆಗಳಲ್ಲೂ ಕೂಡ ದೈವೀಕ ಅಂಶಗಳನ್ನು ಕಂಡಿರುವ ಹಿಂದೆಯೂ ಇದೇ ಬಗೆಯ ವೈಜ್ಞಾನಿಕ ಸತ್ಯಗಳು ಅಡಗಿವೆ. ಇವನ್ನೆಲ್ಲ ಅರ್ಥೈಸಿಕೊಂಡು ಮಾತನಾಡಬೇಕೇ ಹೊರತು ಕೇವಲ ಟೀಕೆ ಮಾಡಲೆಂದೇ ಮಾತನಾಡುವುದು ಪ್ರಜ್ಞಾವಂತ ಸಾಹಿತಿಗಳಿಗೆ ಶೋಭೆ ತರುವುದಿಲ್ಲ.
-ಎನ್.ಅನಂತ ಅಧ್ಯಕ್ಷರು, ಹಿಮಾಲಯ ಫೌಂಡೇಷನ್

By admin