ಕೊಡಗಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭೂಕುಸಿತದ ಭೀತಿ ಜನರನ್ನು ಕಾಡತೊಡಗುತ್ತದೆ. ಇದಕ್ಕೆ ಅಳಿದ ಕಾಡುಗಳು, ಬೆಟ್ಟಗುಡ್ಡಗಳಲ್ಲಿ ನಿರ್ಮಾಣವಾದ ರಸ್ತೆ ಮತ್ತು ಅಲ್ಲಿ ತಲೆ ಎತ್ತಿದ ಭವ್ಯ ಬಂಗಲೆ, ರೆಸಾರ್ಟ್, ಹೋಂಸ್ಟೇಗಳು ಕಾರಣ ಎಂಬುದನ್ನು ಬೆಟ್ಟು ಮಾಡಿ ತೋರಿಸುತ್ತವೆ.
ಒಂದೆರಡು ದಶಕಗಳ ಹಿಂದೆಗೂ ಇವತ್ತಿಗೂ ಕೊಡಗಿನಲ್ಲಿ ಬಹಳಷ್ಟು ಬದಲಾವಣೆಗಳು ಆಗಿರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ಆಧುನಿಕತೆ ಮತ್ತು ಅದರಾಚೆಗಿನ ಸ್ವಾರ್ಥ, ವಾಣಿಜ್ಯಕರಣದ ವ್ಯಾಮೋಹ ಹೀಗೆ ಎಲ್ಲವೂ ನೇರ ಪರಿಣಾಮ ಬೀರಿದ್ದು ಪರಿಸರದ ಮೇಲೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಕೊಡಗಿನಲ್ಲಿ ಭೂಕುಸಿತದಂತಹ ಘಟನೆಗಳು ಹಿಂದೆ ನಡೆಯುತ್ತಿದ್ದದ್ದು ಅಪರೂಪವೇ. ಮಳೆಗಾಲವೂ ಕೂಡ ಭೀಕರತೆಯನ್ನು ಪಡೆಯುತ್ತಿರಲಿಲ್ಲ. ಜಿಟಿಜಿಟಿಯಾಗಿ ಆರಂಭವಾಗುತ್ತಿದ್ದ ಮಳೆಗಾಲ ಜುಲೈ ಆಗಸ್ಟ್ ತಿಂಗಳಲ್ಲಿ ಬಿರುಸು ಪಡೆಯುತ್ತಿತ್ತು. ಈ ಸಂದರ್ಭ ತೊರೆ, ನದಿಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾದರೂ ಅದು ಜನ ಸಾಮಾನ್ಯರ ಜೀವನಕ್ಕೆ ಅಷ್ಟೊಂದು ಅಡ್ಡಿಯಾಗುತ್ತಿರಲಿಲ್ಲ.
ಕೃಷಿಯನ್ನೇ ನಂಬಿ ಅದರಲ್ಲೇ ಬದುಕು ಕಟ್ಟಿಕೊಂಡಿರುವ ಸಣ್ಣ ಹಿಡುವಳಿದಾರ ರೈತರು ಇವತ್ತಿಗೂ ಹಾಗೆಯೇ ಉಳಿದಿದ್ದಾರೆ. ತಮ್ಮ, ತೋಟ, ಗದ್ದೆಯನ್ನು ಜತನದಿಂದ ಕಾಪಾಡಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಬಂಡವಾಳ ಶಾಹಿಗಳು, ಶ್ರೀಮಂತ ರಾಜಕಾರಣಿಗಳು ಸೇರಿದಂತೆ ಉದ್ಯಮಿಗಳು ಕೊಡಗಿನ ಮೇಲೆ ಯಾವಾಗ ವಕ್ರದೃಷ್ಠಿ ಬೀರಿದರೋ ಅವತ್ತೇ ಇಲ್ಲಿನ ಸ್ಥಿತಿ ಬದಲಾಗಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಕಳೆದ ಎರಡು ದಶಕಗಳ ಅವಧಿಯಲ್ಲಿ ಕೊಡಗಿನಲ್ಲಿ ಪರಿಸರ ಎಗ್ಗಿಲ್ಲದೆ ನಾಶವಾಯಿತು. ಮಳೆಯ ಪ್ರಮಾಣ ಕಡಿಮೆಯಾಯಿತು. ಪ್ರವಾಸೋದ್ಯಮ ಬೆಳೆಯಲಾರಂಭಿಸಿತು. ಜನ ಬರತೊಡಗಿದರು. ಬಂಡವಾಳ ಶಾಹಿಗಳು ರೆಸಾರ್ಟ್, ಹೋಂಸ್ಟೇ, ಹೋಟೆಲ್ ನಿರ್ಮಿಸಿದರು. ಕೆಲವು ರಾಜಕಾರಣಿಗಳು ಭ್ರಷ್ಟಾಚಾರದ ಹಣವನ್ನು ತಂದು ಕಾಫಿತೋಟಗಳನ್ನು ಖರೀದಿಸಿ ಬಂಗಲೆ ನಿರ್ಮಿಸಿ ತಮ್ಮ ಕಾರ್ಯ ಚಟುವಟಿಕೆ ನಡೆಸಲು ಆರಂಭಿಸಿದರು. ಬೆಟ್ಟಗುಡ್ಡಗಳನ್ನು ಕೊರೆದು ರಸ್ತೆ ಮಾಡಿದರು, ಮತ್ತೆ ಕೆಲವರು ಗುಡ್ಡವನ್ನು ಜೆಸಿಬಿ ಬಳಸಿ ಸಮತಟ್ಟು ಮಾಡಿ ಬಂಗಲೆ ನಿರ್ಮಿಸಿದರು.
ಪ್ರಕೃತಿ ಮೇಲೆ ನಡೆಸಿದ ಅನಾಚಾರಗಳಿಗೆ ಈಗ ಬೆಲೆ ಕಟ್ಟುವ ಸಮಯ ಬಂದಿದೆ. ಅದು ತನ್ನ ಪರಿಮಿತಿಯನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಪಾಕೃತಿಕ ವಿಕೋಪಗಳು ನಿದರ್ಶನವಾಗಿವೆ. ನದಿ ತಟವನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮನೆ, ಬಂಗಲೆ ನಿರ್ಮಿಸಿದವರಿಗೆ ಅದು ನನಗೆ ಸೇರಿದ್ದು ಎಂಬುದಾಗಿ ಪ್ರವಾಹದ ಮೂಲಕ ತೋರಿಸುತ್ತಿದೆ. ಇನ್ನು ಬೆಟ್ಟಗುಡ್ಡಗಳನ್ನು ಕೊರೆದು, ಮರಗಿಡಗಳನ್ನು ಕಡಿದು ಬೋಳು ಮಾಡಿದ್ದಕ್ಕೆ ಭೂಕುಸಿತದ ಮೂಲಕ ಮನೆ, ತೋಟ, ಗದ್ದೆ ಎಲ್ಲವನ್ನೂ ನಾಶ ಮಾಡಿ ಇದು ನನ್ನದು ಎಂಬುದನ್ನು ಸಾರಿ ಹೇಳುತ್ತಿದೆ.
ಕೊಡಗಿನ ಪರಿಸರದ ಮೇಲೆ ಯಾರಿಂದಲೋ ಆದ ಪ್ರಮಾದಕ್ಕೆ ಸ್ಥಳೀಯ ಜನರೇ ಕಷ್ಟ, ನಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಜನ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಆಸ್ತಿಯನ್ನೆಲ್ಲ ದೂರದ ಬಂಡವಾಳ ಶಾಹಿಗಳಿಗೆ ನೀಡಿ ಕೈತೊಳೆದುಕೊಳ್ಳದೆ, ಎಚ್ಚೆತ್ತುಕೊಂಡು ತಮ್ಮತನವನ್ನು ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ.
ಬಿ.ಎಂ.ಲವಕುಮಾರ್, ಕಗ್ಗೋಡ್ಲು