ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)
ಪಾಪರಾಜಿಗಳ ಹುಟ್ಟು ಒಂದು ವಿಚಿತ್ರವೇ ಸರಿ. ಒಳ್ಳೆಯದರಿಂದ ಆರಂಭಗೊಂಡ ಇವರು ಇದೀಗ ಅಪಾಯದ ತೀವ್ರತೆಯನ್ನು ಸೃಷ್ಟಿಸುವವರೂ ಸಹ ಆಗಿದ್ದಾರೆ. 1980-90ರ ದಶಕದಲ್ಲಿ ತಾಂತ್ರಿಕ ಕ್ಷೇತ್ರದಲ್ಲಾದ ಅತ್ಯಾಧುನಿಕ ಮತ್ತು ಹೈ-ಟೆಕ್ ಪರಿಕರಗಳು, ಉತ್ತಮ ಕ್ಯಾಮೆರಾ ಲೆನ್ಸ್‌ಗಳು, ಹ್ಯಾಂಡ್-ಹೆಲ್ಡ್ ವಿಡಿಯೋ ಕ್ಯಾಮೆರಾಗಳು, ಸ್ಯಾಟಲೈಟ್ ಡಿಶ್‌ಗಳು ಮತ್ತು ಇಂಟರ್ನೆಟ್. ಈ ಯಂತ್ರ ಮತ್ತು ತಂತ್ರಜ್ಞಾನಗಳ ವಿಕಾಸದ ಫಲವಾಗಿ ಈ ಪಾಪರಾಜಿಗಳು ಹುಟ್ಟನ್ನು ಪಡೆದುಕೊಂಡರು.

ಮೊದಲು ದೂರದರ್ಶನ ಕೇಂದ್ರಗಳು ಸ್ಥಳೀಯ ನಾಗರಿಕರಲ್ಲಿ ಸ್ವ-ಉದ್ಯೋಗ ಛಾಯಾಗ್ರಾಹಕರಿಗೆ ಅವಕಾಶವನ್ನು ನೀಡಲಾರಂಬಿಸಿದವು. ಇದರ ಉದ್ದೇಶ ಸ್ಥಳೀಯ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸುವುದು. ಇದರ ಸಲುವಾಗಿ ಯಾರು ಬೇಕಾದರೂ ತಮ್ಮಲ್ಲಿರುವ ಕ್ಯಾಮರಾಗಳನ್ನು ಬಳಸಿಕೊಂಡು ಛಾಯಾಚಿತ್ರಗಳನ್ನು ತೆಗೆದು ಕಳುಹಿಸಬಹುದಾಗಿತ್ತು, ಅಂದರೆ ವರದಿ ಮಾಡಬಹುದಾಗಿತ್ತು. ಹವ್ಯಾಸಿ ಸುದ್ದಿಗಾರರಾಗಿ ಸಮಾಜದ ಸ್ಥಿತಿಗತಿಗಳಿಗೆ ಕಣ್ಣಾಗುವ, ಕಿವಿಯಾಗುವ ಈ ಹೊಸ ರೀತಿಯ ಅವಕಾಶ ತಾಂತ್ರಿಕ ಸಲಕರಣೆ ಉಳ್ಳವರನ್ನು ಆಕರ್ಷಿಸಿತು. ಆ ಕಾಲಕ್ಕೆ ಸುದ್ದಿಯ ಹರಿವು ಪ್ರಸ್ತುತದ ತೀವ್ರತೆಯನ್ನು ಪಡೆದಿರಲಿಲ್ಲ; ಕಾರಣ ಸವಲತ್ತುಗಳ ಸ್ವತ್ತು ಕೇವಲ ಕೆಲವರದಾಗಿತ್ತು. ಈ ನಿಟ್ಟಿನಲ್ಲಿ ಸಂಪಾದಕರು, ಪ್ರಕಾಶಕರು ತಮ್ಮ ಬುದ್ಧಿಯನ್ನು ಉಪಯೋಗಿಸಿ ವೃತ್ತಿ ನಿರತ ಸುದ್ದಿಗಾರರನ್ನು, ಛಾಯಾಗ್ರಾಹಕರನ್ನು ಸುದ್ದಿ ಸಂಗ್ರಹಣೆಗೆ ಕಳುಹಿಸಿ ಅಧಿಕ ವೆಚ್ಚ ಬರಿಸುವ ಬದಲು ಸ್ವತಂತ್ರೋದ್ಯೋಗಿ ಸುದ್ದಿಗಾರರನ್ನು ಬಳಸಿಕೊಳ್ಳಲಾರಂಬಿಸಿ ಈ ಪಾಪರಾಜಿಗಳ ಹುಟ್ಟಿಗೆ ಸೃಷ್ಟಿಕರ್ತರಾದರು. ಸುದ್ದಿಯನ್ನು ಸುಲಭವಾಗಿ ಪಡೆಯುವಂತರಾದರು.

ಆರಂಭದಲ್ಲಿ ಈ ಪಾಪರಾಜಿಗಳಿಂದ ಒಳಿತೆಷ್ಟಿತ್ತೆಂದರೆ ವಿದೇಶದಲ್ಲಿ ಜರುಗಿದ ಒಂದು ಸ್ಥಳೀಯ ಘಟನೆಯಲ್ಲಿ ನಿರಪರಾಧಿಗೆ ನ್ಯಾಯ ಒದಗಿಸಿತ್ತು. ಲಾಸ್ ಏಂಜಲೀಸ್‌ನಲ್ಲಿ ‘ರಾಡ್ನಿ ಕಿಂಗ್’ ಎಂಬ ವ್ಯಕ್ತಿಯನ್ನು ಪೋಲೀಸರು ಹೊಡೆದರೆಂಬ ವಿವಾದವು ಎಲ್ಲೆಡೆ ಹರಡಿನಿಂತಂಥಹ ಸಂದರ್ಭದಲ್ಲಿ ಸ್ಥಳೀಯರು ತೆಗೆದ ವಿಡಿಯೋ ಮತ್ತು ಛಾಯಾಚಿತ್ರಗಳಿಂದ ಆ ಅಧಿಕಾರಿಗಳು ತಪ್ಪಿತಸ್ಥರಲ್ಲ ಎಂದು ತಿಳಿದುಬರುತ್ತದೆ. ಈ ಸಂಗತಿಯ ನಂತರ ಸ್ವತಂತ್ರ ಉದ್ಯೋಗಿ ಛಾಯಾಗ್ರಾಹಕರಿಗೆ ಇಂತಹ ವಿಚಾರಗಳಲ್ಲಿ ಬೇಡಿಕೆ ಹೆಚ್ಚಾಗುತ್ತದೆ.
1960ರಲ್ಲಿ ‘ಫೆಡೆರಿಕ್ ಫೆಲಿನ್’ ನಿರ್ದೇಶಿಸಿದ “ಲಾ ಡೋಲ್ಸ್ ವೀಟಾ” ಸಿನಿಮಾದಲ್ಲಿ ‘ವಾಲ್ಟರ್ ಸ್ಯಾಂಟೆಸೋ’ ಎಂಬ ನಟ ‘ಪಾಪರಾಜೋ’ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಹಾಸ್ಯ ಸಿನಿಮಾವಾಗಿದ್ದು ಆ ‘ಪಾಪರಾಜೋ’ ಪಾತ್ರದ ಹೆಸರನ್ನೇ ನಂತರದಲ್ಲಿ ಸ್ವ-ಉದ್ಯೋಗಿ ಛಾಯಾಗ್ರಾಹಕರಿಗೆ “ಪಾಪರಾಜಿ” ಎಂದು ನಾಮಸೂಚಕವಾಗಿ ಬಳಸಿಕೊಳ್ಳಲಾಯಿತು. ಈ ಪಾಪರಾಜಿ ಎನ್ನುವ ಇಂಗ್ಲಿಷ್ ಪದದ ಬಳಕೆಯು ವಿಕ್ಟೋರಿಯಾ ನಗರದ ಬರಹಗಾರ ‘ಜಾರ್ಜ್ ಗಿಸ್ಸಿಂಗ್’ ಅವರ ಪ್ರವಾಸ ಕಥನವಾದ “ಬೈ ದಿ ಅಯೋನಿಯನ್ ಸೀ” (1901) ಕೃತಿಯನ್ನು ಅನುವಾದ ರೂಪಕ್ಕೆ ತಂದ ಮಾರ್ಗರಿಟಾ ಗೈಡಾಕಿಯ “ಸುಲ್ಲೆ ರೈವ್ ಡೆಲ್ಲೊ ಐಯೊನಿಯೊ” (1957) ಅನುವಾದಿತ ಕೃತಿಯಲ್ಲಿನ ಪಾತ್ರವಾದ “ಕೊರಿಯೊಲಾನೊ ಪಾಪರಾಜೊ” ಎಂಬ ರೆಸ್ಟೋರೆಂಟ್-ಮಾಲೀಕನ ಹೆಸರಾಗಿರುತ್ತದೆ. ಈ ಹೆಸರನ್ನು ಫೆಡೆರಿಕ್ ಫೆಲಿನಿ ಮತ್ತು ಚಲನಚಿತ್ರದ ಸಹ ಚಿತ್ರಕಥೆಗಾರ “ಎನ್ನಿಯೊ ಫ್ಲೈಯಾನೊ” ತಮ್ಮ ಚಿತ್ರಕಥೆಗೆ ಆಯ್ಕೆ ಮಾಡಿದರು. ನಂತರ ‘ಲಾ ಡೊಲ್ಸ್ ವೀಟಾ’ ಸಿನಿಮಾದಲ್ಲಿ ಅವರು ಮೊಟ್ಟ ಮೊದಲಿಗೆ ‘ಪಾಪರಾಜೋ’ ಎಂಬ ಪದವನ್ನು ಬಳಸಿದರು. ಈ ಎಲ್ಲಾ ರೀತಿಯಿಂದಾಗಿ 1960ರ ದಶಕದ ಸನ್ನಿಹದಲ್ಲಿ ಪಾಪರಾಜಿ ಎಂಬ ಇಂಗ್ಲಿಷ್ ಪದವು ನಿಷ್ಪತ್ತಿಯನ್ನು ಪಡೆದಿದೆ.

ಈ ಪಾಪರಾಜಿಗಳಿಗೆ ಬಳಸುವ ವಿವಿಧ ಅರ್ಥಗಳು ಕೆಲವೊಮ್ಮೆ ವಿವಾದವನ್ನು ಸೃಷ್ಟಿಸಿದೆ. ‘ಪಾಪರಾಜೋ’ ಎಂದರೆ ಝೇಂಕರಿಸುವ ಕೀಟ ಮತ್ತು ಕುಟುಕುವಿಕೆಯನ್ನು ಸೂಚಿಸುತ್ತದೆ. ಹಾಗೆಯೇ ಲಾ ಡೊಲ್ಸ್ ವೀಟಾದ ಸಹ-ಚಿತ್ರಕಥೆಗಾರ ‘ಎನ್ನಿಯೊ ಫ್ಲೈಯಾನೊ’ ಮಾತನಾಡುವ ‘ಅಬ್ರುಝೊ’ ಉಪಭಾಷೆಯಲ್ಲಿ, ‘ಪಾಪರಾಜೊ’ ಎಂಬ ಪದವು ಸ್ಥಳೀಯ ಮೃದ್ವಂಗಿ, ಕಪ್ಪೆಚಿಪ್ಪನ್ನು ಉಲ್ಲೇಖಿಸುತ್ತದೆ ಮತ್ತು ಇದನ್ನು ಕ್ಯಾಮೆರಾ ಲೆನ್ಸ್‌ನ ಶಟರ್‌ಗೆ ರೂಪಕವಾಗಿಯೂ ಬಳಸಲಾಗುತ್ತದೆ.
ಈ ವಿವಿಧ ಅರ್ಥದಲ್ಲಿ ಹೇಳಲು ಕಾರಣ; ಪಾಪರಾಜಿಗಳು ಹೆಚ್ಚಾಗುತ್ತಲೇ ಸುದ್ದಿಗಳ ಹರಿವು ಹೆಚ್ಚಾಯಿತು. ಈ ಸುದ್ದಿಗಳಲ್ಲಿ ವಿಶೇಷತೆ ಇದ್ದವು ಮಾತ್ರ ಹಣ ಮಾಡಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಪ್ರಸಿದ್ಧಿ ಅಥವಾ ಪ್ರಖ್ಯಾತಿ ಪಡೆದ ಜನನಾಯಕ ಜನನಾಯಕಿಯರ ಹಿಂದೆ ಬಿದ್ದರು. ಅವರುಗಳ ವಯಕ್ತಿಕ ಜೀವನವನ್ನು ಎಲ್ಲೆಂದರಲ್ಲಿ ಬೆಂಬಿದ್ದು ಹಿಂಬಾಲಿಸಿ ಅವರನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದು ಅವರ ವಯಕ್ತಿಕ ಬದುಕನ್ನು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳ ಸಂಪಾದಕರಿಗೆ, ಪ್ರಕಾಶಕರಿಗೆ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುವ ಸ್ಪರ್ಧಾತ್ಮಕ ವಿಕೋಪ ಸ್ಥಿತಿಗೆ ಜಾರಿದರು. ಈ ಬಗೆಯಲ್ಲಿ ಜನನಾಯಕರ ವಯಕ್ತಿಕ ಬದುಕಿನ ಬೇಲಿಯನ್ನು ಹಾರುವ ಪಾಪರಾಜಿಗಳ ಮೇಲೆ ಕೆಲವರು ದೂರು ಸಲ್ಲಿಸಿದ ಉದಾಹರಣೆಗಳೂ ಸಹ ಇದೆ. ಈ ನಿಟ್ಟಿನಲ್ಲಿ ಅವರನ್ನು ವಿವಾದಾತ್ಮಕ ಅರ್ಥಗಳಲ್ಲಿ ಕರೆಯುವುದೂ ಇದೆ.
ಪಾಪರಾಜಿಗಳ ಛಾಯಾಚಿತ್ರಕ್ಕೆ ಸೆರೆಯಾದ ವ್ಯಕ್ತಿಯನ್ನು “ಪ್ಯಾಪ್” ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಕುರಿತಂತೆ ‘ಆಡಮ್ಸ್’ ಪತ್ರಿಕೋದ್ಯಮ ಮತ್ತು ಪಾಪರಾಜಿಗಳ ನಡುವಿನ ಸಂಬಂಧದ ಬಗ್ಗೆ ಹೀಗೆ ಹೇಳಿದ್ದಾರೆ; ಛಾಯಾ ಪತ್ರಿಕೋದ್ಯಮ ಒಂದು ವಿಭಿನ್ನ ವೃತ್ತಿಯಾಗಿ ಮಾರ್ಪಟ್ಟಿದೆ. ಮನೋರಂಜನೆಯು ಹಣದ ಲಾಲಸೆಯಾಗಿರುವುದರಿಂದ ಪತ್ರಿಕೋದ್ಯಮವನ್ನು ಮೂಕವಿಸ್ಮಿತಗೊಳಿಸುವುದರೊಂದಿಗೆ ಹಣದ ಹಿಂದೆ ಓಡುವಂತೆ ಮಾಡಿದೆ. ಹಣ ಸಿಗುವುದು ಯುದ್ಧಗಳು ಅಥವಾ ಬರಗಾಲದ ಬಗ್ಗೆ ವರದಿ ಮಾಡುವುದರಲ್ಲಿ ಅಲ್ಲ, ಬದಲಿಗೆ ಪಸಿದ್ಧಿ ಪಡೆದವರು (ಸೆಲೆಬ್ರಿಟಿ) ಹಾಗೂ ಟಾಪ್‌ಲೆಸ್‌ನ ಚಿತ್ರವನ್ನು ಪಡೆಯುವುದರಲ್ಲಿದೆ ಎಂದಿದ್ದಾರೆ.
ಇವರ ಮಾತು ಈ ಪಾಪರಾಜಿಗಳು ಸೆಲೆಬ್ರಿಟಿಗಳನ್ನೇ ‘ಪ್ಯಾಪ್’ಗಳನ್ನಾಗಿ ಮಾಡಿಕೊಳ್ಳುತ್ತಿರುವುದರ ಬಗ್ಗೆ ಸೂಚ್ಯವನ್ನು ಕೊಟ್ಟಂತಿದೆ.
ಕೆಲವು ಪಾಪರಾಜಿಗಳು ಹೊಸ ರೀತಿಯಲ್ಲಿ ಮಾಹಿತಿ ಬಜಾರ್‌ನ ಲಾಭವನ್ನು ಪಡೆಯುವ ಮೂಲಕ ತಮ್ಮನ್ನು ತಾವು ಕಾನೂನುಬದ್ಧಗೊಳಿಸಿಕೊಂಡಿದ್ದಾರೆ. ಅಂದರೆ ಈ ಬಗ್ಗೆ ಅಸೋಸಿಯೇಟೆಡ್ ಪ್ರೆಸ್‌ನ ಸಹಾಯಕರಾದ ವಾಷಿಂಗ್ಟನ್’ನ ಬ್ಯೂರೋ ಮುಖ್ಯಸ್ಥ ‘ಫ್ರೆಡ್ ಸ್ವೀಟ್ಸ್’ ಒಂದು ಮಾತನ್ನು ಹೇಳಿದ್ದಾರೆ.”ಯಾರಾದರೂ ಸರಿಯೇ ಕ್ಯಾಮರಾವನ್ನು ತೆಗೆದುಕೊಂಡು ತಮ್ಮನ್ನು ತಾವು ಛಾಯಾಗ್ರಾಹಕ ಎಂದು ಕರೆದುಕೊಳ್ಳಬಹುದು”. ಈ ಮಾತು ಸುಳ್ಳಲ್ಲ. ಈ ಪಾಪರಾಜಿಗಳು ಸುದ್ದಿ ಛಾಯಾಗ್ರಾಹಕರಲ್ಲ. ಅವರು ಛಾಯಾ ಪತ್ರಕರ್ತರಲ್ಲ. ಅವರು ಬಹುಪಾಲು, ಚಿತ್ರಕ್ಕಾಗಿ ಏನು ಬೇಕಾದರೂ ಮತ್ತು ಯಾವ ತರಹದ್ದಾದರೂ ಹರಸಾಹಸ ಮಾಡಲು ಸಿದ್ಧರಿರುವ ಸ್ವತಂತ್ರೋದ್ಯೋಗಿಗಳು. ಸುದ್ದಿ, ಮನರಂಜನೆ ಮತ್ತು ಗಾಸಿಪ್ ವಿಷಯಗಳೇ ಇವರ ಬಂಡವಾಳ.ಸುದ್ದಿವಾಹಿನಿಗಳು ತಮ್ಮ ಸ್ವಂತ ಛಾಯಾಗ್ರಾಹಕರನ್ನು ಸುದ್ದಿ ಸಂಗ್ರಹಣೆಗಾಗಿ ಕಳುಹಿಸುವ ಬದಲು ಸ್ವತಂತ್ರೋದ್ಯೋಗಿಗಳಿಂದ ಹೆಚ್ಚು ಹೆಚ್ಚು ಚಿತ್ರಗಳನ್ನು ಖರೀದಿಸುವುದರಿಂದ, ಪತ್ರಿಕೋದ್ಯಮ ಹೆಚ್ಚು ಮಂಕಾಗಿ ಬೆಳೆಯುತ್ತದೆ. ಈ ಬೆಳವಣಿಗೆಯಿಂದ “ಪತ್ರಿಕೆಗಳು ಛಾಯಾಗ್ರಾಹಕರ ದೊಡ್ಡ ಸಿಬ್ಬಂದಿ ವರ್ಗವನ್ನು ಹೊಂದಿದ್ದ ದಿನಗಳು ಇದೀಗ ಕ್ಷೀಣಿಸುತ್ತಿವೆ. ಈಗ ಎಲ್ಲರೂ ಬೇರೆಯವರಿಂದ ಸುದ್ದಿಗಳನ್ನು ಮತ್ತು ಛಾಯಾ ಚಿತ್ರಗಳನ್ನು ಖರೀದಿಸುತ್ತಾರೆ ಎಂದು ಲಂಡನ್‌ನ ಸಂಡೇ ಟೈಮ್ಸ್‌ನ ವಾಷಿಂಗ್ಟನ್ ಬ್ಯೂರೋ ಮಾಜಿ ಮುಖ್ಯಸ್ಥ ಜೇಮ್ಸ್ ಆಡಮ್ಸ್ ಹೀಗೇಳಿದ್ದಾರೆ.
ಹೀಗಿರುವಾಗ ಓದುಗರು ಮತ್ತು ವೀಕ್ಷಕರು ಕೇವಲ ಪತ್ರಕರ್ತರಂತೆ ವೇಷ ಹಾಕುವವರಿಂದ ವೃತ್ತಿಪರರನ್ನು ಹೇಗೆ ವಿಂಗಡಿಸಲು ಸಾಧ್ಯ? ಓದುಗರು ಅಥವಾ ವೀಕ್ಷಕರು ಈ ಪಾಪರಾಜಿಗಳನ್ನು ವೃತ್ತಿ ಪತ್ರಕರ್ತರೆಂದೇ ನಂಬಿರುತ್ತಾರೆ ಎನ್ನುವುದು ಆಡಮ್ಸ್ ಅವರ ಅಭಿಪ್ರಾಯ. ಇವರ ಮಾತು ವಾಸ್ತವವಾಗಿದೆ.
ಪಾಪರಾಜಿಗಳು ತೆಗೆದ ಛಾಯಾಚಿತ್ರಗಳಿಗೆ ಸಾಕಷ್ಟು ಹಣವನ್ನು ಪಾವತಿಸುತ್ತಿದ್ದ ಅದೇ ಸಂಪಾದಕರು ಮತ್ತು ಪ್ರಕಾಶಕರು ಸೇರಿದಂತೆ ಅಂತರರಾಷ್ಟ್ರೀಯ ಪತ್ರಿಕೆಗಳು ಈ ಪಾಪರಾಜಿ ಛಾಯಾಗ್ರಾಹಕರಿಂದ ಇದೀಗ ದೂರ ಸರಿಯುತ್ತಿವೆ, ಪಾಪರಾಜಿಗಳು ನೀಡುವ ಸುದ್ದಿಗಳು ಕಾನೂನುಬದ್ಧ ಪತ್ರಿಕಾ ಸುದ್ದಿಯಲ್ಲ ಎಂದು ಹೇಳಿಕೊಳ್ಳುತ್ತಿವೆ. ಕಾರಣ ಪತ್ರಿಕೋದ್ಯಮದ ನಿಜ ಸ್ವರೂಪ ಹಾಳಾಗುತ್ತಿದೆ. ಯಾರೋ ಪತ್ರಕರ್ತರಲ್ಲದವರು ಮಾಡಿದ ಸುದ್ದಿಗಳು ಓದುಗರನ್ನು ಸೃಷ್ಟಿಸಬಹುದು ಆದರೆ ಪತ್ರಿಕೋದ್ಯಮದ ನೈತಿಕ ಮಿತಿಯನ್ನು ಮೀರಿ ಒಂದು ಕಪ್ಪು ಚುಕ್ಕೆಯಾಗಿ ಆ ಸುದ್ದಿಗಳು ನಿಲ್ಲುವಾಗ ನಿಜವಾದ ಪತ್ರಕರ್ತ ವರ್ಗವು ಈ ತೀರ್ಮಾನಕ್ಕೆ ಬರುವುದರಲ್ಲಿ ಆಶ್ಚರ್ಯವಿಲ್ಲ. ಈ ಪಾಪರಾಜಿಗಳು ಸಮಾಜಕ್ಕೆ ಅಗತ್ಯವಿದ್ದಷ್ಟು ಕಣ್ಣಾಗಿರಲಿ ತೊಂದರೆ ಇಲ್ಲ. ಆದರೆ ಇನ್ನೊಬ್ಬರ ವಯಕ್ತಿಕ ಬದುಕಿಗೆ ಮುಳ್ಳಾಗುವಷ್ಟು ಕಾರ್ಯೋನ್ಮುಖರಾಗುವುದು ಸರಿಯಲ್ಲ.
ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ವಿಮರ್ಶಕ, ಸಂಶೋಧಕ.
ಹೆಚ್.ಡಿ ಕೋಟೆ ಮೈಸೂರು.
ದೂರವಾಣಿ ಸಂಖ್ಯೆ:-8884684726*