ಚಾಮರಾಜನಗರ: ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಭಗ್ನ, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಗಡಿನಾಡು ಕನ್ನಡರಕ್ಷಣಾ ವೇದಿಕೆ ವತಿಯಿಂದ ಪೊರಕೆ ಚಳವಳಿ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಪೊರಕೆ ಹಿಡಿದು ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು, ಭುವನೇಶ್ವರಿ ವೃತ್ತದಲ್ಲಿ ಪೊರಕೆ ಹಿಡಿದು ಪ್ರತಿಭಟಿಸಿದರು.
ಗಡಿನಾಡು ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್ ಮಾತನಾಡಿ, ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆಯನ್ನು ತಡರಾತ್ರಿ ಎಂಇಎಸ್ ಪುಂಡರು ಭಗ್ನಗೊಳಿಸಿದ್ದಾರೆ, ಅಲ್ಲದೇ ಮೂರುದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಧ್ವಜಕ್ಕೆ ಬೆಂಕಿಹಾಕಿ, ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ್ದಾರೆ. ಸರಕಾರ ಕೂಡಲೇ ಎಂಇಎಸ್ ಪುಂಡರನ್ನು ಬಂಧಿಸಿ ಉಗ್ರಶಿಕ್ಷೆಗೊಳಪಡಿಸಿ, ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಶಿವಶಂಕರನಾಯಕ, ನಿಜಧ್ವನಿಗೋವಿಂದರಾಜು, ಕಸ್ತೂರಿ ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು, ಯಳಂದೂರು ತಾಲೂಕು ಘಟಕದ ಅಧ್ಯಕ್ಷ ಪುಟ್ಟರಾಜು, ಮಹದೇವಶೆಟ್ಟಿ, ತಾಂಡವಮೂರ್ತಿ, ನಾಗೇಶ್,ಲಿಂಗರಾಜು, ಶಿವಮೂರ್ತಿ, ದಿಲೀಪ್, ಕಾರ್ತಿಕ್, ಪ್ರಕಾಶ್, ಆಕಾಶ್ ಇತರರು ಭಾಗವಹಿಸಿದ್ದರು.
