ಮೈಸೂರು,ಮಾ.೩೦ ಕಾಂಗ್ರೆಸ್ ನವರು ಏನೇ ಹೇಳಲಿ, ಬಿಜೆಪಿ ಪರವಾದಂತಹ ಅಲೆಯಿದೆ. ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೧೪೦ಕ್ಕೂ ಹೆಚ್ಚು ಕ್ಷೇತ್ರ ಗಳನ್ನು ಗೆದ್ದು ನಾವು ಅಧಿಕಾರಕ್ಕೆ ಬರೋದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರನ್ನು ಮಠದ ವತಿಯಿಂದ ಪೂರ್ಣಕುಂಭ ದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ನಂತರ ಯಡಿಯೂರಪ್ಪನವರು ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಅವರ ಜೊತೆ ಉಭಯಕುಶಲೋಪರಿ ನಡೆಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಒಂದನೇ ತಾರೀಖಿನ ನಂತರ ನಾವು ಮೂರ್ನಾಲ್ಕು ತಂಡದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುತ್ತೇವೆ. ಆಗ ಜನರಬೆಂಬಲ ಯಾವ ರೀತಿ ಬಿಜೆಪಿಗೆ ಇದೆ ಎನ್ನುವಂಥದ್ದು ನಿಮಗೆ ಮುಂದೆ ಗೊತ್ತಾಗತ್ತೆ ಎಂದರು.

ವಾತಾವರಣ ತುಂಬಾ ಅನುಕೂಲಕರವಾಗಿದೆ. ನಾವು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಜನರಿಗೆ ಮನೆಮನೆಗೆ ತಲುಪಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ. ಆ ಕೆಲಸವನ್ನು ಮಾಡುವಂತಹ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿ ಈಗಿರೋ ಪ್ರಕಾರ ಯಾವುದೂ ಆ ರೀತಿ ಕಾಣಿಸುತ್ತಿಲ್ಲ, ಏ.೧ರಂದು ಅಮಿತ್ ಷಾ ಬಂದಾಗ ಆ ರೀತಿ ಏನಾದರೂ ಸುದ್ದಿ ಇದ್ದರೆ ನಾನು ನಿಮಗೆ ತಿಳಿಸುತ್ತೇನೆ ಎಂದರು.

ಮುಖ್ಯಮಂತ್ರಿ ಬದಲಾವಣೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ಮುಗಿಯುವವರೆಗೂ ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲೇ ಚುನಾವಣೆ ನಡೆಯತ್ತೆ. ಆ ರೀತಿಯ ಊಹಾಪೋಹಗಳಿಗೆ ಯಾರೂ ಕೂಡ ಕಿವಿಗೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಬದಲಾವಣೆ ಆಗಲಿದೆಯಾ ಎಂದು ಕೇಳಿದ ಪ್ರಶ್ನೆಗೆ ನೂರಕ್ಕೆ ನೂರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಿಂದುಳಿದ ವರ್ಗದವರನ್ನು ನಮ್ಮ ಜೊತೆ ತೆಗೆದುಕೊಳ್ಳುವ ಪ್ರಯತ್ನ ಆಗಬೇಕಿದೆ. ಅವರೆಲ್ಲರೂ ನಮ್ಮ ಜೊತೆ ಇದ್ದಾರೆ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡು ಬರುವುದರ ಮೂಲಕ ಮಹಿಳಾ ಸಬಲೀಕರಣ ಮೂಲಕ ಸಂಘಟನೆಯನ್ನು ಬಲಪಡಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ನೂರಕ್ಕೆ ನೂರು ಅದರಲ್ಲಿ ಯಶಸ್ವಿಯಾಗುತ್ತೇವೆ. ಬರುವಂತಹ ಚುನಾವಣೆಯಲ್ಲಿ ೧೪೦ ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಭಾರತೀಯ ಜನತಾ ಪಕ್ಷ ಕರ್ನಾಟಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ನವರು ಅನೇಕ ವಿಚಾರಗಳನ್ನು ಹೇಳುತ್ತಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೇವಲ ಅದೆಲ್ಲ ಭರವಸೆಯ ಮಾತು. ವಾಸ್ತವಿಕವಾಗಿ ಜನ ನಮ್ಮ ಜೊತೆ ಇದ್ದಾರೆ. ನೂರಕ್ಕೆ ನೂರು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.