ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 59 ನಿಮಿಷಾಂಬ ನಗರ ಗೋಳು ಕೇಳುವ ಕಾರ್ಪೊರೇಟರ್ ಇಲ್ಲವೇ ಇಲ್ಲ. ಮರಗಳನ್ನು ಕಡಿದು ಡಾಂಬರ್ ಹಾಕಿ, ಚರಂಡಿಯನ್ನು ನಿರ್ಮಾಣ ಮಾಡಿದ ಮೇಲಂತೂ ಕಸ ಕಚಡಗಳ, ಸೊಳ್ಳೆ – ಹೆಗಣಗಳ ಗೂಡಾಗಿದೆ. ಇಫು ನಿಮಿಷಾಂಬ ನಗರ 10ನೇ ಕ್ರಾಸ್ ಹೈಟೆನ್ಷನ್ ಲೈನ್ ಅಡಿಯಲ್ಲಿ ಬರುವ ರಸ್ತೆಯ ದುಸ್ಥಿತಿ. ಈ ಚರಂಡಿ ನಿರ್ಮಾಣವೇ ನಿಮಿಷಾಂಬನಗರದ ಪಾಲಿಗೆ ಅವೈಜ್ಞಾನಿಕ, ಅನಾರೋಗ್ಯಕರ, ಅನಾವಶ್ಯಕವಾಗಿದೆ.
ಚರಂಡಿ ಮಾಡಿದ ನಂತರ ಪಾಲಿಕೆ ಸದಸ್ಯರ ಜವಾಬ್ದಾರಿ ಕೊಳಚೆ ನೀರು ಅಥವಾ ಮಲಮೂತ್ರ ವಿಸರ್ಜನೆ ಆಗದಂತೆ ಎಚ್ಚರಿಕೆ ವಹಿಸಬೇಕಾದದ್ದು.
ನಾವು ಕಟ್ಟುವ ಕಂದಾಯದಲ್ಲಿ ಕೊಳಚೆ ನಿರ್ವಹಣೆಗೂ SWR ಕಟ್ಟಿಸಿಕೊಳ್ಳುತ್ತಾರೆ. ಆದರೆ ಈಗ ಕೊಳಚೆ ನೀರು ಬಂದರೆ ಅದನ್ನು ತೆಗೆಯುವಂತೆ ದೂರುಕೊಟ್ಟರೆ ಈ ಕೆಲಸವನ್ನು ಯಾವ ಪೌರಕಾರ್ಮಿಕರು ಮಾಡುವುದಿಲ್ಲ ಆ ವಾಸನೆಯಲ್ಲಿಯೇ ಕಸದ ಮಧ್ಯದಲ್ಲಿಯೇ ಬದುಕಿ ಎಂಬಂತಹ ಧೋರಣೆ ಈ ನಗರದ ಸದಸ್ಯರದ್ದು.
ಕೊಳಚೆ ನಿರ್ವಹಣೆ ಕಸ ವಿಲೇವಾರಿ ಮಾಡಲು ಈ ಕಡೆ ಯಾವೊಬ್ಬ ಪೌರಕಾರ್ಮಿಕರು ಬರುತ್ತಿಲ್ಲ. ಇದೇ ರಸ್ತೆಯಲ್ಲಿ ಎಷ್ಟು ಅಪಘಾತವಾಗುತ್ತಿದೆ ರಸ್ತೆ ಉಬ್ಬು ಹಾಕುವಂತೆ ಪರಿಪರಿ ಬೇಡಿಕೊಂಡರು, ರಸ್ತೆಗೆ ಉಬ್ಬು ಹಾಕುವಂತಿಲ್ಲ ಅನ್ನುವ ಹೊಸ ನಿಯಮಗಳನ್ನು ಹೇಳುತ್ತಾರೆ.
ಒಟ್ಟಾರೆಯಾಗಿ ನಿಮಿಷಾಂಬನಗರ ಹತ್ತನೇ ಕ್ರಾಸ್ ನಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಆದರೆ ವಾರ್ಡ್ ನಂ.59 ನಗರ ಪಾಲಿಕೆ ಸದಸ್ಯರಾದ ಸುನಂದಾ ಪಾಲನೇತ್ರ ಅವರು ಈ ರಸ್ತೆಯ ಬಗ್ಗೆ ಎಷ್ಟೇ ದೂರು ಕೊಟ್ಟರೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಪಘಾತ ತಡೆಯಲು ರಸ್ತೆ ಉಬ್ಬು ಹಾಕುವಂತೆ ಕ್ರಮ ಕೈಗೊಳ್ಳಬೇಕು, ಪ್ರತಿನಿತ್ಯ ಕಸ ವಿಲೇವಾರಿ ಮಾಡುವಂತೆ ಪೌರಕಾರ್ಮಿಕರನ್ನು ಕಳುಹಿಸಿಕೊಡಬೇಕು ಮತ್ತು ಚರಂಡಿಯಲ್ಲಿ ಯಾವುದೇ ರೀತಿಯಾದಂತಹ ಮಲಮೂತ್ರ ವಿಸರ್ಜನೆ ಆಗದಂತೆ ಅಪ್ಪಿತಪ್ಪಿಯೂ ಕೊಳಚೆ ನೀರು ಬಂದಾಗ ಅದು ಅಲ್ಲಿ ಹರಿಯದಂತೆ ತಕ್ಷಣ ಪರ್ಯಾಯ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ನೋಡಿಕೊಂಡು ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭ ಮಾಡಬೇಕು. ಸ್ವಚ್ಛ ನಿಮಿಷಾಂಬ ನಗರವನ್ನು ಮಾಡಿದರೆ ಮಾತ್ರ ಸ್ವಚ್ಛ ಮೈಸೂರು ಆಗುವುದಕ್ಕೆ ಸಾಧ್ಯ.