ಮೈಸೂರು: ಕೊರೊನಾ ಮಹಾಮಾರಿ ಎಗ್ಗಿಲ್ಲದಂತೆ ಎಲ್ಲೆಡೆ ಆವರಿಸುತ್ತಿದೆ. ಈ ಕುರಿತಂತೆ ಆಲ್ ಇಂಡಿಯ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ರಾಜ್ಯ ಸಮಿತಿ ಹದಗೆಟ್ಟ ಆರೋಗ್ಯ ವ್ಯವಸ್ಥೆ: ಕಾರಣವೇನು? ಎಂಬ ವಿಷಯದ ಕುರಿತು ರಾಜ್ಯಮಟ್ಟದ ವೆಬಿನಾರ್ ನಡೆಸಿದ್ದು ಅದರಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಅದರ ಸಂಕ್ಷಿಪ್ತ ರೂಪ ಇಲ್ಲಿದೆ.
ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರ ಪ್ರಕಾರ ತಜ್ಞರು ನೀಡಿದ ಎಲ್ಲಾ ಎಚ್ಚರಿಕೆಗಳ ಕಡೆಗಣನೆ, ಕೇಂದ್ರ ಸರ್ಕಾರದ ತಪ್ಪು ನೀತಿಗಳು, ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ ಮತ್ತು ಮೂಲಭೂತ ಆರೋಗ್ಯ ಸೌಕರ್ಯಗಳ ಕೊರತೆ ಇವುಗಳೇ ಇಂದು ನಾವು ದೇಶದಲ್ಲೆಡೆ ಕಾಣುತ್ತಿರುವ ಹದಗೆಟ್ಟ ಆರೋಗ್ಯ ವ್ಯವಸ್ಥೆಗೆ ಮೂಲ ಕಾರಣಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2021ರ ಮಾರ್ಚ್ ವೇಳೆಗೆ ಕೋವಿಡ್ ಎರಡನೇ ಅಲೆಯು ದೇಶದಲ್ಲಿ ತೀವ್ರವಾಗಿ ಕಾಡಲಿದೆ ಎಂಬ ತಜ್ಞರ ಸಮಿತಿಯ ಎಲ್ಲ ಎಚ್ಚರಿಕೆಯನ್ನು ಕಡೆಗಣಿಸಿದ ಪರಿಣಾಮ ಇಂದು ಜನರು ಬೆಲೆ ತೆರಬೇಕಾಗಿದೆ ಸರ್ಕಾರ ಈ ಕುರಿತು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ತಲ್ಲೀನವಾಗಿತ್ತು. ಜನದಟ್ಟಣೆಗಳನ್ನು ತಪ್ಪಿಸುವ ಬದಲು ತಾನೇ ಮುಂದೆ ನಿಂತು ಚುನಾವಣಾ ರಾ ಲಿಗಳನ್ನು ನಡೆಸಿತು ಮತ್ತು ಕುಂಭಮೇಳದAತಹ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ ತಾನೆ ಹಣ ಬಿಡುಗಡೆ ಮಾಡಿ ಅವಕಾಶ ಮಾಡಿಕೊಟ್ಟಿತು. ಅಲ್ಲಿಂದ ಸೋಂಕು ಇಡೀ ದೇಶವ್ಯಾಪಿ ಪಸರಿಸಿದೆ. ಕಳೆದ ವರ್ಷ ಶೇ.70 ರಷ್ಟು ಭಾಗ ನಗರವಾಸಿಗಳನ್ನು ಶೇ.30ರಷ್ಟು ಹಳ್ಳಿಗರನ್ನು ಕಾಡಿದ ಈ ಸೋಂಕು, ಇಂದು ಶೇ.35 ನಗರವಾಸಿಗಳನ್ನು ಶೇ.65ರಷ್ಟು ಹಳ್ಳಿಗಳನ್ನು ಕಾಡುತ್ತಿದೆ. ಇಂದು ದೇಶದಲ್ಲಿ ಕೇವಲ 2.6 ಕೋಟಿ ಜನರಿಗೆ ಮಾತ್ರ 2 ಡೋಸ್ ಮತ್ತು 11 ಕೋಟಿ ಜನರಿಗೆ 1 ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ಗಾಗಿ ಇನ್ನೂ 80 ಕೋಟಿ ಜನ ಕಾಯುತ್ತಿದ್ದಾರೆ. ನಮ್ಮ ದೇಶದಲ್ಲಿರುವ 2 ಉತ್ಪಾದನಾ ಕಂಪನಿಗಳು ತಿಂಗಳಿಗೆ ಕೇವಲ 10 ಕೋಟಿ ಡೋಸ್ ವ್ಯಾಕ್ಸಿನ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಉಳಿದಿರುವ ಇನ್ನೂ 80 ಕೋಟಿ ಜನರಿಗೆ ಎರಡು ಡೋಸ್ ವ್ಯಾಕ್ಸಿನ್ ನೀಡಲು ಇನ್ನೂ ಬರೋಬ್ಬರಿ 16 ತಿಂಗಳು ಕಾಯಬೇಕಿದೆ. ಎಂದಿದ್ದಾರೆ.
ಎಐಡಿವೈಓ ನ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ ದೇಶದ ಪ್ರತೀ ಹಳ್ಳಿಗೊಂದು ಆರೋಗ್ಯ ಕೇಂದ್ರ ನಗರದ ಪ್ರತಿ ವಾರ್ಡ್ಗೊಂದು ಆರೋಗ್ಯ ಘಟಕ ಬೇಕೆಂಬ ಘೋಷಣೆಯೊಂದಿಗೆ ನಮ್ಮ ಹೋರಾಟವನ್ನು ಕಟ್ಟಬೇಕು ಎಂದರು. ಈ ವೇಬಿನರ್ನಲ್ಲಿ ಪಾಲ್ಗೊಂಡಿರುವ ನೂರಾರು ಸಂಖ್ಯೆಯ ಯುವಕರು ರಾಜ್ಯದ ಜನತೆಯನ್ನು ಇಂತಹ ಹೋರಾಟಕ್ಕೆ ಸಜ್ಜುಗೊಳಿಸಲು ಸಿದ್ಧರಾಗಬೇಕು. ಅದಕ್ಕಾಗಿ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ವೈಚಾರಿಕ ತಳಹದಿಯಲ್ಲಿ ನಮ್ಮ ಹೋರಾಟವನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಎಐಡಿವೈಓ ನ ರಾಜ್ಯಾಧ್ಯಕ್ಷರಾದ ಎಂ.ಉಮಾದೇವಿ ಅವರು ಮಾತನಾಡಿ “ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಬೇಕು. ಕೇವಲ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಿದರೆ ಸಾಲದು, ಅವುಗಳನ್ನು ಜನರಿಗೆ ತಲುಪಿಸುವ ಮತ್ತು ಎಲ್ಲ ಅರ್ಹತೆ ಹೊಂದಿದ್ದು ಉದ್ಯೋಗಕ್ಕಾಗಿ ಕಾಯುತ್ತಿರುವ ತಜ್ಞ ವೈದ್ಯರನ್ನೂ, ಶುಶ್ರೂಷಕರನ್ನೂ ಮತ್ತು ಇನ್ನಿತರ ತಂತ್ರಜ್ಞರನ್ನು ಖಾಯಂ ಆಗಿ ನೇಮಿಸಬೇಕು. ಇದಕ್ಕಾಗಿ ನಾವು ಇದೇ ತಿಂಗಳ 23ರಂದು ಆನ್ಲೈನ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿ ಮತ್ತು ಜನಗಳ ಜೀವ ಉಳಿಸಿ! ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ. ಬಜೆಟ್ನಲ್ಲಿ ಆರೋಗ್ಯಕ್ಕಾಗಿ ಮೀಸಲಿಡುವ ಹಣವನ್ನು ಹೆಚ್ಚಿಸಿ. ಕೋವಿಡ್ ನಿರ್ವಹಣೆಗಾಗಿ ಎಲ್ಲ ಸಮುದಾಯ ಭವನಗಳನ್ನು ಆಸ್ಪತ್ರೆಗಳನ್ನಾಗಿ ಮಾರ್ಪಡಿಸಿ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಿ. ಆಕ್ಸಿಜನ್ ಬೆಡ್ಗಳು ಮತ್ತು ಐಸಿಯುಗಳ ಸಂಖ್ಯೆ ಹೆಚ್ಚಿಸಿ. ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಿ ಎಂಬ ಹಕ್ಕೊತ್ತಾಯಗಳಿಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಜನತೆ ಈ ಪ್ರತಿಭಟನೆಯನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.