ಚಾಮರಾಜನಗರ: ಸಸ್ಯ ಸಂಕುಲ, ಪ್ರಾಣಿ-ಪಕ್ಷಿಗಳಿಗೆ ನೀರು ಎಷ್ಟು ಮುಖ್ಯವೂ ಹಾಗೆಯೇ ಜನರಿಗೆ ಜಲ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದು ಅಷ್ಟೇ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನದ ಪ್ರಯುಕ್ತ ಜಲಜೀವನ್ ಮಿಷನ್ ಯೋಜನೆಯ ಸರಣಿ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚಾಮರಾಜನಗರ ತಾಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ವಿಶ್ವ ಜಲ ದಿನ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿರಬೇಕು. ಹನಿ ಹನಿ ನೀರು ಎಷ್ಟು ಅಮೂಲ್ಯ ಎನ್ನುವುದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತಿರಬೇಕು. ತಂತ್ರಜ್ಞಾನ ಹಾಗೂ ನಾಗರಿಕತೆ ಬೆಳೆದಂತೆಲ್ಲ ಮಳೆ ಕಡಿಮೆಯಾಗಿ ನೀರಿನ ಅಭಾವ ಉಂಟಾಗುತ್ತಿದೆ. ನೀರನ್ನು ಮಿತವಾಗಿ ಬಳಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ದೇಶದಲ್ಲಿ ಜನಸಂಖ್ಯೆ ಏರಿಕೆಯಿಂದಾಗಿ ಅರಣ್ಯಗಳು ನಗರ, ಪಟ್ಟಣಗಳಾಗಿ ಬದಲಾಗುತ್ತಿರುವುದರಿಂದ ನೀರಿನ ಕೊರತೆ ಎದುರಾಗಿದೆ. ಶಾಲಾ ಕಾಲೇಜು ಹಂತದಲ್ಲಿಯೇ ಜಲ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ನೀರು ಪೋಲಾಗುವುದನ್ನು ತಪ್ಪಿಸಬೇಕು. ನೀರಿನ ಮಿತವ್ಯಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು ಎಂದು ಎಂ. ಶ್ರೀಧರ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ದುರ್ಬಳಕೆಯಾಗುತ್ತಿದೆ. ರೈತರು ಬೆಳೆಯುವ ಕಬ್ಬು ಹಾಗೂ ಭತ್ತಕ್ಕೆ ಹೆಚ್ಚಿನ ನೀರು ಬೇಕಾಗಿರುವುದರಿಂದ ರೈತರು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ನೀರನ್ನು ಸಂರಕ್ಷಿಸಬೇಕು. ಜನಸಂಖ್ಯೆ ಹೆಚ್ಚಾದಂತೆ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಈಗಾಗಲೇ ನೀರಿನ ಅಭಾವ ಉಂಟಾಗಿದ್ದು ನೀರಿನ ಮಿತವ್ಯಯದ ಅರಿವು ಪ್ರತಿಯೊಬ್ಬರಿಗೂ ಅಗತ್ಯ ಎಂದು ತಿಳಿಸಿದರು.
ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್ ಇನ್ನಿತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.