ಗುಂಡ್ಲುಪೇಟೆ: ಪ್ರತಿಯೊಂದು ಜೀವಕುಲಕ್ಕು ನೀರು ಅತ್ಯಮೂಲ್ಯವಾಗಿರುವ ಕಾರಣ ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದೆ ಎಂದು ಮಾತೃವಂದನಾ ಜಿಲ್ಲಾ ಯೋಜನಾಧಿಕಾರಿ ಶಿವಸ್ವಾಮಿ ತಿಳಿಸಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದ 1ನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ನೀರನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಕಾರಣದಿಂದ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಅರಿತು ಅಂತರ್ಜಲ ವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಗತ್ತಿನಲ್ಲಿ ಕುಡಿಯುವ ನೀರಿನ ಅರ್ಧದಷ್ಟು ಪ್ರಮಾಣದ ಮೂಲ ಅಂತರ್ಜಲ. ಅಂತರ್ಜಲದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಅಂತರ್ಜಲ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಾಗಾಗಿ ನೀರಿನ ಅಭಾವ, ಕಲುಷಿತಗೊಳಿಸುವಿಕೆ, ಹವಾಮಾನದ ಮೇಲಿನ ಪರಿಣಾಮ ಹೀಗೆ ಒಟ್ಟಾರೆಯಾಗಿ ನೀರಿನ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.
ನೀರು ಖರ್ಚು ಮಾಡಿದರೆ ವಾಪಸ್ ಪಡೆಯಲು ಸಾಧ್ಯವಿಲ್ಲದ ಕಾರಣ ಜನರು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ನಿಮ್ಮ ಮನೆ ಅಕ್ಕಪಕ್ಕದವರು ಅನವಶ್ಯಕತವಾಗಿ ನೀರನ್ನು ವ್ಯರ್ಥ ಮಾಡುತ್ತಿದ್ದರೂ ಸಹ ಅವರಿಗೆ ತಿಳುವಳಿಗೆ ನೀಡುವ ಮೂಲಕ ಮಿತ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಬ್ಬಳ್ಳಿ ಪಿಡಿಓ ಉಷಾರಾಣಿ, ಆರೋಗ್ಯ ಇಲಾಖೆ ಹಿರಿಯ ಶುಶ್ರೂಷಕಿ ಲತಾ, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ರುದ್ರವ್ವ, ರಾಷ್ಟ್ರೀಯ ಪೆÇೀಷಣ್ ಆಭಿಯಾನದ ತಾಲೂಕು ಸಂಯೋಜಕ ಆರ್.ಸಂತೋಷ್ ಕುಮಾರ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ