ಕೊರೊನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವಕೀಲ ವಿ. ಶಂಕರಪ್ಪ ಅವರ ಮನೆಯಲ್ಲಿಯೇ ವಾಕ್ ಮಾಡುವ ಮೂಲಕ ಊಹೆಗೂ ನಿಲುಕದ ದಾಖಲೆ ನಿರ್ಮಿಸಿ ಗಮನಸೆಳೆದಿದ್ದಾರೆ.
ಅವರು 7 ದಿನಗಳಲ್ಲಿ 14 x 15 ಅಡಿ ಹಾಲ್ ನಲ್ಲಿ ಬರೋಬ್ಬರಿ 127 ಕಿ.ಮೀ. ದೂರ ವಾಕ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಹೊರಗೆ ಬರುವಂತಿಲ್ಲ. ಮನೆಯಲ್ಲಿ ವ್ಯಾಯಾಮ ಮಾಡದೇ ಪರೋಕ್ಷವಾಗಿ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುವ ರೀತಿ ದೇಹವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮನಸಿದ್ದರೆ ಮಾರ್ಗ ಎಂಬುದಕ್ಕೆ ಹಿರಿಯ ವಕೀಲ ವಿ. ಶಂಕರಪ್ಪ ಅವರು ಮನೆಯ ಹಾಲ್ ನಲ್ಲೇ ದಿನಕ್ಕೆ 20 ಕಿ.ಮೀ. ವಾಕ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಈ ರೀತಿಯ ಸಾಹಸ ಮಾಡಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹುಡುಕಿದರೆ, ಯಾರೂ ಮಾಡಿಲ್ಲ. ಇದೊಂದು ದಾಖಲೆ ಅಂತಲೇ ಹೇಳಲಾಗುತ್ತಿದೆ. ಕೊರೊನಾ ಸೋಂಕಿಗೆ ಒಳಗಾದ ಶಂಕರಪ್ಪ ಅವರಿಗೆ ನಡಿಗೆಯ ಅಗತ್ಯತೆ ಯಾಕೆ ಬಿತ್ತು. ಅದರಿಂದ ಆದ ಅನುಕೂಲಗಳ ಬಗ್ಗೆ ಅವರು ವಿವರಿಸಿದ್ದಾರೆ.
ಶಂಕರಪ್ಪ ಅವರು ಸದ್ಯ ಸಿದ್ದಾಪುರದಲ್ಲಿ ನೆಲೆಸಿದ್ದು ಅವರ ಮನೆಯ ಹಾಲ್ ನ ವಿಸ್ತೀರ್ಣ ಕೇವಲ 14 x 15 ಅಡಿ ಕೊರೊನಾ ಲಾಕ್ ಡೌನ್ ಹಾಗೂ ಸೋಂಕಿನ ಭಯದಿಂದ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಧೀಶರಾದ ವಿ. ಗೋಪಾಲಗೌಡ, ವಕೀಲರಾದ ಬಾಬು ಅವರು ಮನೆಯಲ್ಲೇ ವಾಕ್ ಮಾಡುವಂತೆ ಸಲಹೆ ನೀಡಿದರು.
ಹೀಗಾಗಿ ಅವರು ಮನೆಯಲ್ಲಿಯೇ ವಾಕ್ ಮಾಡಲು ಆರಂಭಿಸಿದ್ದು, ಬೆಳಗ್ಗೆ ಒಂದೂವರೆ ತಾಸು, ಮಧ್ಯಾಹ್ನ ಒಂದು ಗಂಟೆ, ಸಂಜೆ ಒಂದೂವರೆ ಗಂಟೆ ಕಾಲ ಮನೆಯಲ್ಲಿ ವಾಕ್ ಮಾಡುತ್ತಿದ್ದಾರೆ. ದಿನಕ್ಕೆ ಎಷ್ಟು ಡೆಯುತ್ತೇನೆ ಎಂಬ ಅರಿವು ಅವರಿಗೆ ಇರಲಿಲ್ಲ. ಅವರ ಮಕ್ಕಳು ಕೊಟ್ಟ ಸಲಹೆಯಿಂದ ಆಪ್ ಮೂಲಕ ದಿನದ ವಾಕ್ ವಿವರ ಆಪ್ ನಲ್ಲಿ ದಾಖಲಿಸಲು ನೋಂದಣಿ ಮಾಡಿದರು. ಆ ನಂತರ ಗೊತ್ತಾಗಿದ್ದು ಅವರು ಕಳೆದ ಏಳು ದಿನದಲ್ಲಿ ಮನೆಯೊಳಗೆ 127 ಕಿ.ಮೀ. ವಾಕ್ ಮಾಡಿರುವುದು. ಬರೋಬ್ಬರಿ 1,92,436 ಹೆಜ್ಜೆ, 448 Heart pts, 17,166 ಕ್ಯಾಲೋರೀಸ್ ಬರ್ನ್ ಮಾಡಲಾಗಿದ್ದು, 1,903 ನಿಮಿಷದಲ್ಲಿ 127.11 ಕಿ. ಮೀ. ದೂರ ಮಿಸಿದ್ದಾರಂತೆ.
ಕೊರೊನಾ ಸೋಂಕಿನ ಮೊದಲ ಅಲೆಗೆ ಕೊರೊನಾ ಸೋಂಕಿಗೆ ಒಳಗಾದ ಅವರು, ಕೊರೊನಾದಿಂದ ಜೀವ ಉಳಿಸಿಕೊಂಡಿದ್ದು ನನಗೊಂದು ಪುನರ್ಜನ್ಮ ಎನ್ನುತ್ತಾರೆ. ಆರೋಗ್ಯ ಸುಧಾರಣೆಗೆ ವೈದ್ಯರೊಬ್ಬರು ದಿನ ನಿತ್ಯ ನಡೆಯಬೇಕು ಎಂದು ಸಲಹೆ ಮಾಡಿದ್ದರು. ಹೀಗಾಗಿ ಅಂದಿನಿಂದ ದಿನ ಬಿಡದಂತೆ ವಾಕ್ ಮಾಡುತ್ತಿದ್ದೇನೆ. ಹೀಗಾಗಿ ಪುಟ್ಟ ಹಾಲ್ ನಲ್ಲಿಯೇ ದಿನಕ್ಕೆ 20 ಕಿ.ಮೀ. ವಾಕ್ ಮಾಡುತ್ತಿದ್ದೇನೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಂದವರಗೆ ಅವರು ಕೊಡುವ ಪುಟ್ಟ ಸಲಹೆ ಏನೆಂದರೆ ತಪ್ಪದೇ ವಾಕ್ ಮಾಡಿ. ಎಷ್ಟು ನಡೆಯುತ್ತೀರೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು. ಬೇರೆ ಕಾಯಿಲೆಗಳಿಂದ ದೂರ ಉಳಿಯಲು ನಡಿಗೆ ಅಗತ್ಯ. ಲಾಕ್ ಡೌನ್ ಇದೆ. ಜಾಗ ಇಲ್ಲ ಅಂತ ಮನೆಯಲ್ಲಿ ಕೂತರೆ ಕಾಯಿಲೆಗಳನ್ನು ಮೈಮೇಲೆ ಆಹ್ವಾನಿಸಿಕೊಂಡಂತೆ ಎಂದು ಕಿವಿಮಾತು ಹೇಳಿದ್ದಾರೆ.