ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಸಚಿವ ಉಮೇಶ್ ವಿ.ಕತ್ತಿ ಅವರು ತಾಲೂಕಿನ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಸರಗೂರು: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿರುವ ಹಿನ್ನೆಲೆ ಇದರ ಮುನ್ನೆಚ್ಚರಿಕೆ ಕ್ರಮವಹಿಸಿ ಈ ಬಾರಿ ಯಾವುದೇ ಬೆಂಕಿ ಅನಾಹುತ ನಡೆಯದಂತೆ ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಡನ್ನು ರಕ್ಷಿಸಲು ಹೆಚ್ಚು ಶ್ರಮಿಸಿ ಬೆಂಕಿ ತಗುಲದಂತೆ ಎಚ್ಚರವಹಿಸುತ್ತಾರೋ ಆ ವಲಯಕ್ಕೆ ಪ್ರೋತ್ಸಾಹವಾಗಿ ಬಹುಮಾನ ಕೊಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಅರಣ್ಯ ಮತ್ತು ಪರಿಸರ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವ ಉಮೇಶ್ ವಿ.ಕತ್ತಿ ತಿಳಿಸಿದರು.


ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು ಬಳಿಕ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸ್ಥಳೀಯ ಮನವಿಗಳನ್ನು ಆಲಿಸಿದರು.


ನುಗು ಅರಣ್ಯ ವಲಯ ಭಾಗಕ್ಕೂ 15 ಕಿ.ಮೀ. ನಷ್ಟು ಬ್ಯಾರಿಗೇಟ್ ನಿರ್ಮಾಣವಾಗಬೇಕು ಎಂಬ ಮನವಿ ಇದೆ. ಈಗಾಗಲೇ ೫ಕಿ.ಮೀ ಬ್ಯಾರೀಗೆಟ್ ನಿರ್ಮಾಣವಾಗಿದೆ. ಉಳಿದ ಭಾಗವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಆ ಮೂಲಕ ಕಾಡು ಪ್ರಾಣಿಗಳ ರಕ್ಷಣೆಯಿಂದ ಜನರನ್ನು ಕಾಪಾಡಲು ಕ್ರಮ ವಹಿಸಲಾಗುವುದು ಎಂದರು.


ಬಂಡೀಪುರ ಅರಣ್ಯವನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಈಗಾಗಲೇ ಸುಮಾರು ೧೭೬ ಕಿಮೀ ನಷ್ಟು ಬ್ಯಾರಿಗೇಟ್ಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ೫೦% ನಿರ್ಮಿಸಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿದ್ದರಿಂದ ಈ ಬಾರಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿತ್ತು. ಅದರಂತೆ ಇಲಾಖೆ ಯಾವ ರೀತಿ ಕ್ರಮವಹಿಸಿದೆ ಎಂಬುದರ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.


ಇದೇ ವೇಳೆ ನುಗು ಭಾಗದ ಕಾಡಂಚಿನ ರೈತರು ಸಚಿವರನ್ನು ಭೇಟಿ ಮಾಡಿ, ಕಾಡಂಚಿನ ಭಾಗಗಳಲ್ಲಿ ಕಾಡುಪ್ರಾಣಿಗಳ ಆವಳಿ ಹೆಚ್ಚಾಗಿದ್ದು, ರೈತರು ಸಾಕಷ್ಟು ಪ್ರಮಾಣದ ಬೆಳೆ ನಷ್ಟವನ್ನು ಹೊಂದುತ್ತಿದ್ದಾರೆ. ನಮಗೆ ನೀಡುತ್ತಿರುವ ಪರಿಹಾರ ಸಾಕಗುತ್ತಿಲ್ಲ ಅಲ್ಲದೇ ಪರಿಹಾರವು ಸಹ ತಡವಾಗಿ ಬರುತಿದೆ. ಆದ್ದರಿಂದ ಬೆಳೆ ನಷ್ಟವಾದರೆ ಪ್ರಸ್ತುತ ಮಾರುಕಟ್ಟೆಯ ಬೆಲೆಯಂತೆ ನಮಗೆ ನಷ್ಟವನ್ನು ಕಟ್ಟಿಕೊಡಬೇಕು. ಅಲ್ಲದೇ ನುಗು ಭಾಗದಲ್ಲಿ ಕಾಡಾನೆಗಳ ಆವಳಿಯನ್ನು ತಪ್ಪಿಸಲು ಹೆಚ್ಚುವರಿಯಾಗಿ ಬ್ಯಾರಿಗೇಟ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಅಕ್ರಮ ಕಟ್ಟಡಗಳ ನಿರ್ಮಾಣವಾಗಿದೆ : ಅರಣ್ಯದೊಳಗೆ ಅಕ್ರಮವೂ ಸಕ್ರಮವೊ ಗೊತ್ತಿಲ್ಲ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗಿವೆ ಎಂದಯ ಸ್ಥಳೀಯರು ಆರೋಪಿಸಿದರು. ಇಲ್ಲಿರುವ ಕಟ್ಟಡಗಳ ಪೈಕಿ ಮಾಜಿ ಸಚಿವರ ಕಟ್ಟಡವು ಇದೆ ಎಂಬ ಮಾಹಿತಿ ಇದೆ. ಪ್ರತಿನಿತ್ಯ ೧೦-೧೫ ವಾಹನಗಳು ಅರಣ್ಯದೊಳಗೆ ಹೋಗುತ್ತಿವೆ. ಇದರಿಂದ ಪ್ರಾಣಿಗಳಿಗೂ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ಕ್ರಮವಹಿಸಿ ಅಕ್ರಮ ಕಟ್ಟಡವನ್ನು ತೆರವು ಮಾಡುವಂತೆ ಸ್ಥಳಿಯರು ಸಚಿವರಲ್ಲಿ ಮನವಿ ಮಾಡಿದರು.


ನುಗು ವ್ಯಾಪ್ತಿಯಲ್ಲಿ ಸಫಾರಿ ಆರಂಭಿಸಲು ಮನವಿ: ಅರಣ್ಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ನುಗು ಭಾಗದಲ್ಲಿ ಸಫಾರಿಯನ್ನು ಆರಂಭಿಸಬೇಕು ಎಂಬ ಮನವಿಯನ್ನು ಮಾಡಿದರು. ಈಗಾಗಲೇ ಅರಣ್ಯ ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ನುಗುವಿನಲ್ಲಿ ಸಫಾರಿ ಆರಂಭವಾದರೆ ಸುತ್ತಲಿನ ಗ್ರಾಮಗಳು ಆರ್ಥಿಕವಾಗಿ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣ ಮಹೇಶ್ ಮನವಿ ಸಲ್ಲಿಸಿದರು.
ಮನವಿ ಆಲಿಸಿದ ಬಳಿಕ ಮಾತನಾಡಿದ ಸಚಿವರು, ಸಫಾರಿ ವಿಚಾರವಾಗಿ ಬೋಟಿಂಗ್ ಮಾಡಲು ಸಾಧ್ಯವಿಲ್ಲ ಸಫಾರಿ ಆರಂಭಿಸುವ ಬಗ್ಗೆ ಯೋಜನೆ ರೂಪಿಸುತ್ತೇವೆ. ಇನ್ನೂ ಅಕ್ರಮ ಕಟ್ಟಡಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸುವುದಾಗಿ ತಿಳಿಸಿದರು.


ಸ್ಥಳದಲ್ಲಿ ಮೈಸೂರು ಸಿಎಫ್ ಮಾಲತಿಪ್ರಿಯಾ, ಬಂಡೀಪುರ ಸಿಎಫ್ ರಮೇಶ್ ಕುಮಾರ್, ಎಸಿಎಫ್‌ಗಳಾದ ರವಿಕುಮಾರ್, ನವೀನ್, ವಲಯ ಅರಣ್ಯಾಧಿಕಾರಿಗಳಾದ ಗೀತಾ ನಾಯಕ್, ಮಂಜುನಾಥ್, ಪಿಎಸ್‌ಐ ಶ್ರವಣದಾಸ್ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಚಾರ್, ಲೋಕೇಶ್, ಎಆರ್‌ಎಫ್‌ಒ ಲಕ್ಷಣ, ಸ್ಥಳೀಯ ರೈತರು ಮುಂತಾದವರು ಹಾಜರಿದ್ದರು.