ಚಾಮರಾಜನಗರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಇಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಭಾಗೀರಥಿ, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಕೃಷ್ಣಪ್ರಸಾದ್ ಹಾಗೂ ಸಂಸ್ಥೆಯ ನರ್ಸಿಂಗ್ ಅಧೀಕ್ಷಕರಾದ ಡಾ. ಗೀತಾ ಅವರೊಂದಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೂ ಖುದ್ದು ಭೇಟಿ ನೀಡಿ ವೀಕ್ಷಿಸಿದರು.
ಆಸ್ಪತ್ರೆಯ ಆವರಣ, ಎಲ್ಲಾ ವಾರ್ಡ್‌ಗಳು ಹಾಗೂ ಹೊರಾಂಗಣದ ಸ್ವಚ್ಚತೆ ಬಗ್ಗೆ ವಿಶೇಷವಾಗಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸಾ ಸೌಲಭ್ಯಗಳು ಮತ್ತು ಹೊರರೋಗಿಗಳಿಗೆ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ರೋಗಿಗಳಿಗೆ ವಿತರಿಸಲಾಗುವ ಊಟವನ್ನೂ ಸಹ ಪರಿಶೀಲಿಸಿದರು.
ರೋಗಿಗಳಿಗೆ ಔಷಧ ಹಾಗೂ ಪೌಷ್ಠಿಕ ಆಹಾರವನ್ನು ಸಮರ್ಪಕವಾಗಿ ನೀಡುವಂತೆ ಸೂಚಿಸಿದರು. ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳಿಂದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ತುರ್ತು ಚಿಕಿತ್ಸೆಗಾಗಿ ರೋಗಿಗಳು ಬಂದಾಗ ದಾಖಲಾತಿಗಾಗಿ ಒತ್ತಾಯ ಮಾಡದೇ ಮೊದಲು ಚಿಕಿತ್ಸೆಗೆ ಪ್ರಾಧನ್ಯತೆ ನೀಡಬೇಕು. ತದ ನಂತರ ನೋಂದಣಿ ಇನ್ನಿತರ ಪ್ರಕ್ರಿಯೆ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಹಾಗೂ ಹಿರಿಯ ನಾಗರಿಕರು ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಾಗ ಮಾನವೀಯತೆಯಿಂದ ಶೀಘ್ರವಾಗಿ ಸ್ಪಂದಿಸಬೇಕು. ಆಸ್ಪತ್ರೆಗೆ ಬರುವ ರೋಗಿ ಹಾಗೂ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಿ ಕರ್ತವ್ಯ ನಿರ್ವಹಿಸಬೇಕೆಂದು ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಉತ್ತಮ ಪರಿಸರದ ವಾತಾವರಣ ಕಲ್ಪಿಸಬೇಕು. ರೋಗಿಗಳಿಗೆ ಹಾಗೂ ಚಿಕಿತ್ಸೆ ಪಡೆಯಲು ಬರುವ ಯಾವುದೇ ಸಾರ್ವಜನಿಕರಿಗೆ ಕಾನೂನಿನ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.