ಚಾಮರಾಜನಗರ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇಂದು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಪ್ರದೀಪ್ ರವರ ಜೊತೆ ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೂ ಖುದ್ದಾಗಿ ಭೇಟಿ ಪರಿಶೀಲಿಸಿದರು. ಆಸ್ಪತ್ರೆಯ ಆವರಣದ ಸ್ವಚ್ಚತೆ, ಎಲ್ಲಾ ವಾರ್ಡ್, ಶೌಚಾಲಯ ಹಾಗೂ ಹೊರಾಂಗಣದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ರೋಗಿಗಳಿಗೆ ಉತ್ತಮವಾದ ಔಷಧ ಹಾಗೂ ಪೌಷ್ಠಿಕ ಆಹಾರವನ್ನು ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ನೈರ್ಮಲ್ಯ ನಿರ್ವಹಣೆಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಆಸ್ಪತ್ರೆಯ ಆವರಣದಲ್ಲಿ ಅನಾವಶ್ಯಕವಾಗಿ ರೋಗಿಗಳನ್ನು ಹೊರತುಪಡಿಸಿ ಹೆಚ್ಚು ಜನಸಂದಣಿ ಆಗಬಾರದು. ಹೆಚ್ಚು ಜನರಿಂದ ಇತರೆ ರೋಗಿಗಳಿಗೆ ಉಂಟಾಗುವ ಅನಾನುಕೂಲವನ್ನು ತಪ್ಪಿಸಬೇಕು ಎಂದರು.
ಆಸ್ಪತ್ರೆಯ ಆವರಣದಲ್ಲಿರುವ ಸಖಿ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದ ಸಿಬ್ಬಂದಿ ಮತ್ತು ಸಮಾಲೋಚಕರ ಕಾರ್ಯವೈಖರಿ ಬಗ್ಗೆ ಪರಿಶೀಲಿಸಲಾಯಿತು. ದೌರ್ಜನ್ಯಕ್ಕೆ ಒಳಗಾಗಿ ಬರುವ ಸಂತ್ರಸ್ಥರೊಂದಿಗೆ ಸೂಕ್ತ ರೀತಿಯ ಸಮಾಲೋಚನೆ ನಡೆಸಿ, ವೈದ್ಯಕೀಯ ಚಿಕಿತ್ಸೆಯೊಂದಿಗೆ ತುರ್ತು ಕಾನೂನು ನೆರವು ಒದಗಿಸಲು ಮತ್ತು ಅವರ ಪುನರ್ವಸತಿಗೆ ಯಾವುದೇ ರೀತಿಯ ವಿಳಂಬ ಮಾಡದೇ ಸಹಕರಿಸಲು ನ್ಯಾಯಾಧೀಶರು ಸೂಚಿಸಿದರು.
ಮಾನವೀಯತೆ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗುವ ಮಹಿಳೆಯರಿಗೆ, ಗರ್ಭಿಣಿಯರಿಗೆ ಉತ್ತಮವಾದ ಪರಿಸರದ ವಾತಾವರಣ ಕಲ್ಪಿಸಿ, ವೈದ್ಯಕೀಯ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ಸಾರ್ವಜನಿಕರಿಗೆ ಕಾನೂನಿನ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ತಿಳಿಸುವಂತೆ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.
