ಚಾಮರಾಜನಗರ: ಭಾರತೀಯ ಶಿಲ್ಪಕಲೆಗೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಶಿಲ್ಪಕಲೆಯ ತವರೂರು. ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪಕಲಾ ಸೌಂದರ್ಯ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರ ಪ್ರೇರಣೆಯಿಂದ ನಿರ್ಮಿತವಾಗಿ ಇಂದಿಗೂ ಸಹ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಕರ್ನಾಟಕದ ಶಿಲ್ಪಕಲೆಯ ಮೂಲಕ ಭಾರತವನ್ನು ಪ್ರತಿನಿಧಿಸಿದ ವಿಶ್ವಕರ್ಮರ ಕುಶಲಕಲೆ ವಿಶ್ವದೆಲ್ಲೆಡೆ ಪ್ರಸಿದ್ದಿ ಪಡೆದಿದೆ ಎಂದರು.

ವಿಶ್ವಕರ್ಮರ ಕರಕುಶಲ ಕಲೆ, ಕುಲಕಸುಬು ಇಂದು ಅದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ವಿಶ್ವಕರ್ಮ ಸಮುದಾಯ ಸರ್ಕಾರದಿಂದ ದೊರೆಯುವ ಸಾಲಸೌಲಭ್ಯಗಳನ್ನು ಪಡೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕಲಾ ಸಂಸ್ಕೃತಿಗೆ ಜೀವ ತುಂಬಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಅದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಕುಶಲ ಕಲೆಗಳು ಪ್ರತಿ ಗ್ರಾಮಗಳು, ಮನೆಮನೆಯಲ್ಲೂ ಇವೆ. ಮಹಿಳೆಯರ ಅಭರಣಗಳೂ ಸಹ ವಿಶ್ವಕರ್ಮರ ಕೊಡುಗೆಗಳಾಗಿವೆ. ವಿಶ್ವಕರ್ಮದ ಸಮುದಾಯ ಸಂಘಟನೆಯಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ಮಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಸ್ಥಪತಿ ಡಾ. ಎನ್. ನಂಜುಂಡಸ್ವಾಮಿ ಅವರು ಮಾತನಾಡಿ ಭಾರತೀಯ ಶಿಲ್ಪಕಲೆಗೆ ವಿಶ್ವಮಾನ್ಯತೆ ತಂದುಕೊಟ್ಟವರು ವಿಶ್ವಕರ್ಮರು. ಶಿಲ್ಪಕಲೆಯ ಕಲ್ಪತರು ಕರ್ನಾಟಕವಾಗಿದೆ.  ದೇಶದ ಸಂಸ್ಕೃತಿ, ನಾಗರಿಕತೆಯನ್ನು ಅರಿಯುವುದು. ಅಲ್ಲಿ ದೊರೆಯುವ ಕುರುಹುಗಳಿಂದ ಮಾತ್ರ. ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರ ಶಿಲ್ಪಕಲೆಯಲ್ಲಿ ಸಂಗೀತ, ಸಾಹಿತ್ಯದ ಪ್ರಭಾವವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರು ಎಲ್ಲಾ ಸಮುದಾಯಗಳನ್ನು ಅದರ್ಶವಾಗಿಟ್ಟುಕೊಂಡ ಕಾಯಕಯೋಗಿಯಾಗಿದ್ದರು. ವಿಶ್ವಕರ್ಮರ ಕೊಡುಗೆ ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದರು.

ನಗರಸಭೆ ಸದಸ್ಯರಾದ ವನಜಾಕ್ಷಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್‌ಕುಮಾರ್, ಕರ್ನಾಟಕ ಜಾನಪದ ಅಕಾಡಮಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ಮುಖಂಡರಾದ ಮಧುಆಚಾರ್, ಸೋಮಣ್ಣಾಚಾರ್, ಕುಮಾರ್, ಶ್ರೀನಿವಾಸಪ್ರಸಾದ್, ಶಂಭುಲಿಂಗಸ್ವಾಮಿ, ಬಂಡಳ್ಳಿ ಶ್ರೀನಿವಾಸ್, ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ಉಮೇಶ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಆರಂಭದಲ್ಲಿ ನಗರದ ದೇವಕುಮಾರ್ ಮತ್ತು ತಂಡದವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.