ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಹೊರಭಾಗದಲ್ಲಿರುವ ಕುಶಾಲನಗರ ರಸ್ತೆಯ ಲಕ್ಷ್ಮಣೇಗೌಡ ಕೊಪ್ಪಲಿನ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವವರೆಗೆ ಅಲ್ಲಿನ ಗ್ರಾಮಸ್ಥರು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಕಳೆದ 50 ವರ್ಷಗಳಿಂದ ಈ ಭಾಗದಲ್ಲಿ ಜನರು ಜೀವನ ಸಾಗಿಸುತ್ತಿದ್ದು ಬೆಟ್ಟದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶ ಇದಾಗಿದೆ. ನಾವು ಮತದಾನವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ, ಆದರೆ ಆಯ್ಕೆಯಾದ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಲವಾರು ಬಾರಿ ಮನವಿ ಮಾಡಿದರೂ ಯಾರೂ ಇತ್ತ ಗಮನ ಹರಿಸಿಲ್ಲ ಆದ್ದರಿಂದ ಗ್ರಾಮಸ್ಥರೆಲ್ಲ ಒಟ್ಟುಗೂಡಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮದ ಮುಖಂಡ ಆರ್.ವೆಂಕಟೇಶ್ ತಿಳಿಸಿದರು.

ಸ್ಥಳೀಯ ಪಂಚಾಯಿತಿ ವತಿಯಿಂದ ನಾಗರಿಕರಿಗೆ ಕನಿಷ್ಠ ಪಕ್ಷ ಕುಡಿಯುವ ನೀರು, ವಿದ್ಯುತ್, ಚರಂಡಿ ಮುಂತಾದ ಸೌಲಭ್ಯಗಳನ್ನು ಒದಗಿಸಿದರೆ ಮಹಿಳೆಯರಿಗೆ ವೃದ್ಧರಿಗೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ರಂಗೇಗೌಡ, ರಾಮು, ಸಂತೋಷ್, ಅಂಜಲಿ, ನಾರಾಯಣ್, ಚಂದ್ರ, ಕಮಲಮ್ಮ, ಬೇಬಿ, ಅನುರಾಧಾ, ಸಾಕಮ್ಮ, ಸುರೇಶ್, ವೆಂಕಟರಾಮು ಇದ್ದರು.

ಮಾಗಳಿ ರಾಮೇಗೌಡ ವರದಿಗಾರರು

By admin