ಮೈಸೂರು: ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮ ಕೇವಲ ಜನಸಾಮಾನ್ಯರಿಗೆ ಮಾತ್ರನಾ? ಇದು ಮುಖ್ಯಮಂತ್ರಿ ಪುತ್ರನಿಗೆ ಅನ್ವಯವಾಗುವುದಿಲ್ಲವೆ ಎಂಬ ಸಂಶಯ ಕಾಡತೊಡಗಿದೆ.
ಲಾಕ್ ಡೌನ್ ಮಾತ್ರವಲ್ಲದೆ ದೇಗುಲದ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಅದನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿ ದೇವಾಲಯಗಳ ದರ್ಶನಕ್ಕೂ ನಿರ್ಬಂಧ ಹೇರಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಲ್ಲದೆ, ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿರುವುದೆಷ್ಟು ಸರಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಬಿ.ವೈ.ವಿಜಯೇಂದ್ರ ಅವರು ಪತ್ನಿ ಸಹಿತ ದೇವಾಲಯಕ್ಕೆ ಭೇಟಿ ನೀಡಿರುವುದು ಕೋವಿಡ್ ನಿಯಮದ ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಮಂಗಳವಾರ ಪತ್ನಿ ಸಹಿತ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರು ಬರಮಾಡಿಕೊಂಡು ದೇಗುಲದ ಬಾಗಿಲು ತೆರೆದು ದೇವಾಲಯದೊಳಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಸುಮಾರು ಅರ್ಧಗಂಟೆಗಳ ಕಾಲ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಗೈದ ದಂಪತಿ ಬಳಿಕ ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆ ನಂತರ ನದಿಗೆ ಬಾಗಿನ ಅರ್ಪಿಸಿದ್ದಾರೆ. ಸುಮಾರು ಎಂಟು ಮಂದಿ ಗನ್ ಮ್ಯಾನ್‌ಗಳೊಂದಿಗೆ ಆಗಮಿಸಿದ ವಿಜಯೇಂದ್ರ ದಂಪತಿ ಬಳಿ ಸಾರ್ವಜನಿಕರು ಸುಳಿಯದಂತೆ ನೋಡಿಕೊಳ್ಳಲಾಯಿತಲ್ಲದೆ, ಮಾಧ್ಯಮದವರಿಗೆ ಚಿತ್ರೀಕರಣ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.
ಕಾನೂನು ಜಾರಿ ಮಾಡುವವರೇ ಕಾನೂನು ಪಾಲನೆ ಮಾಡದೆ ಹೋದರೆ ಲಾಕ್ ಡೌನ್ ಮಾಡಬೇಕಾದ ಅಗತ್ಯವೇನಿತ್ತು? ಕಳೆದ ಒಂದು ತಿಂಗಳಿನಿಂದ ಪುರೋಹಿತರು ಹೊರತುಪಡಿಸಿ ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡದೆ ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋಗುತ್ತಿದ್ದರು. ಆದರೆ ಲಾಕ್ ಡೌನ್ ಹೇರಿರುವ ಕಾಲದಲ್ಲಿ ದೇವರ ದರ್ಶನ ಮಾಡುವ ಜರೂರು ಏನಿತ್ತು ಎಂದು ಜನ ಕೇಳುತ್ತಿದ್ದಾರೆ.