ಬೆಂಗಳೂರು: ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ ಪ್ರತಿಭಾವಂತ ನಟನೆಂಬ ಖ್ಯಾತಿಗೆ ಪಾತ್ರರಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಬಾಳಿನ ಪಯಣ ಮುಗಿಸಿ ಕರ್ಮಭೂಮಿಯಿಂದ ಮತ್ತೆ ಜನ್ಮ ಭೂಮಿಯತ್ತ ತೆರಳಿ ಹುಟ್ಟೂರಿನ ಗೆಳೆಯನ ತೋಟದಲ್ಲಿ ಚಿರನಿದ್ದೆಗೆ ಜಾರಿದ್ದಾರೆ.
ಬೆಂಗಳೂರಿನಿಂದ ವಿಜಯ್ ಅವರ ಪಾರ್ಥೀವ ಶರೀರ ಹೊತ್ತ ಅಂಬ್ಯುಲೆನ್ಸ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ತಲುಪುತ್ತಿದ್ದಂತೆಯೇ ಕುಟುಂಬಸ್ಥರು, ಗ್ರಾಮಸ‍್ಥರ ದುಃಖದ ಕಟ್ಟೆಯೊಡೆದಿದ್ದು, ಅಂತಿಮ ದರ್ಶನಕ್ಕಾಗಿ ಊರಿಗೆ ಊರೇ ಆಗಮಿಸಿತ್ತು. ಕೊನೆಯ ಬಾರಿಗೆ ಮುಖ ನೋಡುವ ಸಲುವಾಗಿ ಜನ ಹಾತೊರೆಯುತ್ತಿದ್ದ ದೃಶ್ಯ ಕಂಡು ಬಂತು. ನಂತರ ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಪಾರ್ಥಿವ ಶರೀರವನ್ನು ಸಮಾಧಿಯೊಳಗೆ ಇರಿಸಿ ಸಂಚಾರಿ ವಿಜಯ್ ಅವರ ಸಹೋದರರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಅಂತ್ಯಕ್ರಿಯೆಯನ್ನು ಬಿಲ್ವಪತ್ರೆ, ಭಸ್ಮ ಬಳಸಿ ಮಾಡಲಾಯಿತು. ಇದಕ್ಕೂ ಮೊದಲು ರಾಜ್ಯ ಸರ್ಕಾರದ ವತಿಯಿಂದ ಸಮಾಧಿ ಸ್ಥಳದಲ್ಲಿ ಮೂರು ಸುತ್ತು ಕುಶಾಲತೋಫು ಸಿಡಿಸಿ ಸರ್ಕಾರಿ ಗೌರವ ನೀಡಲಾಯಿತು. ಕೋವಿಡ್ ನಿಯಮ ಜಾರಿಯಲ್ಲಿದ್ದ ಕಾರಣ ಸಮಾಧಿ ಸ್ಥಳದಲ್ಲಿ ಸ್ಥಳೀಯ ಸ್ನೇಹಿತರು ಮತ್ತು ಬಂಧು ಮಿತ್ರರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಪಂಚನಹಳ್ಳಿಯಂತಹ ಗ್ರಾಮದಿಂದ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮತ್ತು ಬದುಕು ಕಟ್ಟಿಕೊಂಡಿದ್ದ ನಟ ಸಂಚಾರಿ ವಿಜಯ್ ಚಿತ್ರರಂಗದಲ್ಲಿ ಏನಾದರೂ ಸಾಧಿಸ ಬೇಕೆಂಬ ತುಡಿತ ಹೊಂದಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿದ್ದು, ಬಾರದ ಲೋಕಕ್ಕೆ ಎದ್ದು ಹೋಗಿದ್ದಾರೆ. ಇನ್ನು ವಿಜಯ್ ಬರೀ ನೆನಪಷ್ಟೆ..