ಬೆಂಗಳೂರು: ಬೈಕ್ ಅಪಘಾತದಿಂದ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಸಂಚಾರಿ ವಿಜಯ್ ಅವರು ನಿಧರಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಅಪಘಾತದಿಂದ ವಿಜಯ್ ಸ್ಥಿತಿ ಗಂಭೀರವಾಗಿತ್ತು ಹೀಗಾಗಿ ಮೆದುಳು ನಿಷ್ಕ್ರೀಯಗೊಂಡಿರುವ ಕಾರಣ ಅವರು ಬದುಕುಳಿಯುವುದು ಕಷ್ಟವಾಗಿರುವುದರಿಂದ ಅವರ ಅಂಗಾಂಗವನ್ನು ದಾನ ಮಾಡಲು ಕುಟುಂಬ ವರ್ಗ ತೀರ್ಮಾನಿಸಿತ್ತು. ಹೀಗಾಗಿ ಮಾಧ್ಯಮದ ಮುಂದೆ ಮಾತನಾಡಿದ ಸಹೋದರ ಸಿದ್ದೇಶ್ ಅವರು ಸಹೋದರ ವಿಜಯ್ ಸದಾ ಸಮಾಜಕ್ಕಾಗಿ ದುಡಿಯುತ್ತಿದ್ದ ಹಾಗಾಗಿ ಆತನಿಂದ ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ನೆರೆ ಸಂದರ್ಭವಿರಲಿ, ಕೊರೊನಾ ಕಾಲದಲ್ಲಿಯಾಗಲೀ ವಿಜಯ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದನು. ಆತ ತಾನು ರಾಷ್ಟ್ರ, ರಾಜ್ಯ ಹೀಗೆ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದರೂ ಅದೆಲ್ಲವನ್ನು ಬದಿಗಿಟ್ಟು ತನ್ನ ಕೈಲಾದ ಸಹಾಯವನ್ನು ಸಮಾಜಕ್ಕೆ ಮಾಡುತ್ತಿದ್ದನು. ಸಮಾಜಕ್ಕಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಶ್ರಮಿಸುತ್ತಿದ್ದನು. ಹೀಗಾಗಿ ಕೊನೆಗಾಲದಲ್ಲಿ ಸಮಾಜಕ್ಕೆ ಒಳಿತು ಮಾಡುವ ಮೂಲಕ ಆತನ ಆತ್ಮಕ್ಕೆ ಶಾಂತಿ ನೀಡುವ ಕಾರ್ಯ ಮಾಡುತ್ತಿರುವುದಾಗಿ ಕಂಬನಿ ಮಿಡಿದಿದ್ದರು.
ಇನ್ನೊಂದೆಡೆ ನ್ಯೂರೋ ಸರ್ಜನ್ ಡಾ. ಅರುಣ್ ನಾಯಕ್ ಮಾತನಾಡಿ ಕಳೆದ ಮೂವತ್ತಾರು ಗಂಟೆಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರು ಆಸ್ಪತ್ರೆಗೆ ದಾಖಲಾಗುವ ವೇಳೆ ಗಂಭೀರ ಪರಿಸ್ಥಿತಿಯಲ್ಲಿದ್ದರು. ಪ್ರಜ್ಞೆ ಇರಲಿಲ್ಲ. ಆದರೆ ಉಸಿರಾಡುತ್ತಿದ್ದರು. ಹಾಗಾಗಿ ತಕ್ಷಣ ಸಿಟಿ ಸ್ಕ್ಯಾನ್ ಮಾಡಿ ಮಾಡಿ ಪರೀಕ್ಷೆ ಮಾಡಿದಾಗ ಮೆದುಳಿನ ಬಲಭಾಗಕ್ಕೆ ಪೆಟ್ಟಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಅದನ್ನು ಆಪರೇಷನ್ ಮೂಲಕ ತೆಗೆಯಲಾಗಿದೆ. ಜತೆ ಮೆದುಳಿನ ಊತಕ್ಕೂ ಚಿಕಿತ್ಸೆ ನೀಡಲಾಗಿದೆ. ಆದರೆ ಯಾವುದೇ ರೀತಿಯ ಚಿಕಿತ್ಸೆ ಸ್ಪಂದಿಸುತ್ತಿಲ್ಲ. ಇನ್ನು ಶಸ್ತ್ರಚಿಕಿತ್ಸೆ ಮಾಡಿದ ನಂತರ ಸೋಮವಾರ ಬೆಳಿಗ್ಗೆ 5 ಗಂಟೆಗೆ ಬ್ರೈನ್ ಸ್ಟ್ರೋಕ್ ಆಗಿದೆ ಹೀಗಾಗಿ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ವೈದ್ಯರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.
ಇನ್ನು ಘಟನೆ ಬಗ್ಗೆ ಹೇಳಬೇಕಾದರೆ, ಶನಿವಾರ ರಾತ್ರಿ ಸಂಚಾರಿ ವಿಜಯ್ ಗೆಳೆಯ ನವೀನ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಜೆಪಿ ನಗರ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ನ ಹಿಂಬದಿ ಕುಳಿತಿದ್ದ ವಿಜಯ್ ಅವರು ನೆಲಕ್ಕುರುಳಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿತು. ಈ ಘಟನೆ ನಡೆಯಲು ಮಳೆ ಜೋರಾಗಿ ಬರುತ್ತಿದ್ದದ್ದೇ ಕಾರಣ ಎಂದು ಹೇಳಲಾಗುತ್ತಿದೆ.
2011ರಲ್ಲಿ ತೆರೆ ಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ಸಂಚಾರಿ ವಿಜಯ್ ಅವರು, ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಟ ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ಸಿನಿಮಾ ಆಕ್ಟ್ 1978 ಮೊದಲಾದ ಕನ್ನಡ ಚಿತ್ತಗಳಲ್ಲದೆ, ತಮಿಳು ಚಿತ್ರದಲ್ಲಿಯೂ ನಟಿಸಿದ್ದರು.
ಇದೀಗ ನಟ ಸುದೀಪ್ ಅವರು ತಮ್ಮ ಟ್ವೀಟ್ ಮೂಲಕ ವಿಜಯ್ ಅವರು ನಿಧನರಾಗಿರುವುದನ್ನು ಖಚಿತಪಡಿಸಿದ್ದರು. ಈ ವಿಚಾರ ಹೊರ ಬರುತ್ತಿದ್ದಂತೆಯೇ ನಾಡಿನ ಗಣ್ಯರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.