ಮಡಿಕೇರಿ: ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಣ ತೊಡಬೇಕು. ಆ ದಿಸೆಯಲ್ಲಿ ಪ್ರತಿ ಗ್ರಾಮವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಶ್ರಮಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ಕೋವಿಡ್ 19 ನಿಯಂತ್ರಣ ಸಂಬಂಧ ರಾಷ್ಟ್ರದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಯವರು, ಬೃಹತ್ ನಗರಗಳ ಆಯುಕ್ತರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು.
ಮುಖ್ಯಮಂತ್ರಿಯವರು, ಜಿಲ್ಲಾ ಉಸ್ತುವಾರಿ ಸಚಿವರು, ರಾಷ್ಟ್ರದ ಗೃಹ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಆಯ್ದ ಜಿಲ್ಲೆಗಳ ಮಹಾನಗರ ಪಾಲಿಕೆ ಆಯುಕ್ತರು, ಹಲವು ಜಿಲ್ಲೆಗಳ ಜಿಲ್ಲಾಧಿಕಾರಿ ಅವರ ಜೊತೆ ವಿಡಿಯೊ ಸಂವಾದಲ್ಲಿ ಪಾಲ್ಗೊಂಡು ಪ್ರಧಾನಿ ಅವರು ಮಾತನಾಡಿದರು.


ಕೋವಿಡ್ 19 ನಿಯಂತ್ರಣ ಸಂಬಂಧ ಪ್ರತಿ ಜಿಲ್ಲೆಗಳಲ್ಲಿಯೂ ಸವಾಲಿನಿಂದ ಎದುರಿಸಬೇಕು. ಕೋರನಾ ವೈರಸ್‌ನ್ನು ನಿಯಂತ್ರಿಸುವಲ್ಲಿ ಜಿಲ್ಲಾಧಿಕಾರಿ ಅವರು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ಕೈಗೊಳ್ಳಬೇಕು. ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ಮಾಡಿದರು.
ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಬೇಕು. ಕಂಟೈನ್‌ಮೆಂಟ್ ವಲಯಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಚಾಚುತಪ್ಪದೆ ಪಾಲಿಸಬೇಕು. ಕೋವಿಡ್ 19 ನ್ನು ನಿಯಂತ್ರಿಸಲು ಎಲ್ಲರೂ ಪಣತೊಡಬೇಕು. ಗ್ರಾಮಿಣ ಮತ್ತು ದುರ್ಗಮ ಪ್ರದೇಶದಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರ ವಹಿಸಬೇಕು. ರಾಷ್ಟ್ರವು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಕೊರೊನಾ ವೈರಸ್‌ನ್ನು ತೊಲಗಿಸುವ ವಿಶ್ವಾಸವಿದೆ. ಅ ದಿಸೆಯಲ್ಲಿ ಕೋವಿಡ್ 19ನ್ನು ಗಂಭೀರವಾಗಿ ಪರಿಗಣಿಸಿ ಸವಾಲು ಎದುರಿಸಲು ಶ್ರಮಿಸಬೇಕಿದೆ ಎಂದರು.
ಕೋವಿಡ್ ನಿಯಂತ್ರಣ ಸಂಬಂಧ ಕೆಲವು ಜಿಲ್ಲೆಗಳು ಸ್ಥಳೀಯವಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯವಾಗಿವೆ. ತಮ್ಮ ಹೊಸ ವಿಚಾರಗಳಿಂದ ಕೋವಿಡ್ ಪ್ರಕರಣಗಳು ಕಡಮೆಯಾಗಿದ್ದಲ್ಲಿ ಸರ್ಕಾರ ಮತ್ತು ಇತರೆ ಜಿಲ್ಲೆಗಳಿಗೂ ನೀವು ಕೈಗೊಂಡ  ಕ್ರಮಗಳ ಬಗ್ಗೆ ಮಾಹಿತಿ ನೀಡಿ ಕೋವಿಡ್ ನಿಯಂತ್ರಿಸಲು ಕೈ ಜೋಡಿಸುವಂತೆ ಪ್ರಧಾನಮಂತ್ರಿ ಅವರು ಸಲಹೆ ಮಾಡಿದರು.
ಕೊರೊನಾ ಮುಕ್ತ ಗ್ರಾಮಕ್ಕೆ ಸಂಕಲ್ಪಿಸುವುದರ ಜೊತೆಗೆ ಲಸಿಕಾ ಅಭಿಯಾನ ಚುರುಕುಗೊಳಿಸಲು ನಿರ್ದೇಶನ ನೀಡಿದರು. ಕೋವಿಡ್ ಕುರಿತು ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕು ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಎರಡನೇ ಕೋವಿಡ್ 19 ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಶ್ರಮಿಸಬೇಕು, ಕೋವಿಡ್ ೧೯ ಆತಂಕವನ್ನು ಸಾರ್ವಜನಿಕರಲ್ಲಿ ಕಡಿಮೆ ಮಾಡಬೇಕು. ಗೃಹ ಸಂಪರ್ಕ ತಡೆಯಲ್ಲಿರುವವರು ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಪ್ರತಿಯೊಬ್ಬರಲ್ಲಿ ನಿರಂತರವಾಗಿ ಇರಬೇಕು ಎಂದು ಸಲಹೆ ಮಾಡಿದರು.
ವಿಡಿಯೊ ಸಂವಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದಿಂದ ಕೋವಿಡ್ ೧೯ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದರು.

By admin