ಮೈಸೂರು: ಹೊಸವರ್ಷ ಆಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 31ರ ರಾತ್ರಿ 10ರಿಂದ ಜನವರಿ 1ರ ಬೆಳಿಗ್ಗೆ 5 ಗಂಟೆವರೆಗೆ ಮೈಸೂರು ನಗರದತ್ತ ಬರುವ ಅದರಲ್ಲೂ ಅರಮನೆ ಸುತ್ತಮುತ್ತ ಸಂಚರಿಸುವ ಸಾರ್ವಜನಿಕರ ವಾಹನಗಳಿಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ.

ಅಂಬಾವಿಲಾಸ ಅರಮನೆಯ ಸುತ್ತಲಿನ ರಸ್ತೆಗಳಾದ ಬಿ.ಎನ್ ರಸ್ತೆ (ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ ಎರಡೂ ಕಡೆಗಳಲ್ಲಿ) ಪುರಂದರ ರಸ್ತೆ (ಬಿ.ರಾಚಯ್ಯ ವೃತ್ತದಿಂದ ಕುಸ್ತಿ ಅಖಾಡ ವರೆಗೆ) ಹಳೆ ಸಯ್ಯಾಜಿರಾವ್ ರಸ್ತೆ (ಬಿ.ರಾಚಯ್ಯ ವೃತ್ತದಿಂದ ಕೃಷ್ೞರಾಜ ಒಡೆಯರ್ ವೃತ್ತದವರೆಗೆ ಎರಡೂ ಕಡೆಗಳಲ್ಲಿಯೂ) ಆಲ್ಬರ್ಟ್ ವಿಕ್ಟರ್ ರಸ್ತೆ (ಜಯಚಾಮರಾಜೇಂದ್ರ ವೃತ್ತದಿಂದ ಕೃಷ್ಣರಾಜ ಒಡೆಯರ್ ವೃತ್ತದವರೆಗೆ ಎರಡೂ ಕಡೆಗಳಲ್ಲಿ) ಈ ಸ್ಥಳಗಳಲ್ಲಿ ಗ್ರಾಮಾಂತರ ಸಾರಿಗೆ ಬಸ್‌ಗಳು, ನಗರ ಸಾರಿಗೆ ಬಸ್‌ಗಳು,  ಭದ್ರತಾ ಶಿಷ್ಟಾಚಾರ ಇರುವ ವಾಹನಗಳು ಹಾಗೂ ಅಗತ್ಯ,ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.

ಅರಮನೆಯ ಸುತ್ತಲಿನ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ. ಹಿನಕಲ್ ಬಳಿಯ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮೇಲು ಸೇತುವೆಯಲ್ಲಿ (ಗ್ರೇಡ್ ಸಪರೇಟರ್) ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಹಾಗೂ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷ್ನರ್ ತಿಳಿಸಿದ್ದಾರೆ

By admin