ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ
ದ್ವಾದಶಿಯ ಎರಡನೇ ಶುಕ್ರವಾರದಂದು
ನಾರೀಯರ ನಿವಾಸಕೆ ನಾರಾಯಣಿ ಬಂದು
ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು;
ನವಜಲ ನವಮಣ್ಣು ನವಬುವ್ವ ನವಾಮೃತ
ನವನೈವೇದ್ಯ ನವದುರ್ಗೆ ನವಶಕ್ತಿ
ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ
ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ ನವಸ್ತೋತ್ರ
ಪೂಜೆಯನ್ನು ಸ್ವೀಕರಿಸಿ; ನಂಬಿದ ಭಕ್ತರಿಗೆಲ್ಲ
ನವರತ್ನ ನವಧಾನ್ಯ ನವಸಂತಾನ ನವಸಿರಿ
ನವಸಂಪದ ಧನಕನಕ ಭಾಗ್ಯದ ವರನೀಡಿ
ಹರಸೊ ಮಹಾದೇವಿಯ ನವಶಕ್ತಿ ವೈಭವದ
ಆಚರಣೆ, ವರಮಹಾಲಕ್ಷ್ಮಿವ್ರತ ಪೂಜಾಫಲ!
ಈ ಶುಭಲಾಭದ ಸದಾಚಾರ ದಿನದಂದು
ಅಭಿಜಿನ್ ಮುಹೂರ್ತದಲ್ಲೆದ್ದು ಮಿಂದು
ಯೋಗ್ಯತಾನುಸಾರ ಪೂಜಾಸಾಮಗ್ರಿ ಕೊಂಡುತಂದು
ಸರ್ವಮಂಗಳೆ ಸುಮಂಗಲಿಯರ ಕರೆತಂದು
ತ್ರಿಕರಣ ಶುದ್ಧಿಯಿಂ ಕುಂಕುಮಾರಿಶಿನ ಸಿಂಧು
ಪೂಜಾ ಆರತಿ ಮಹಾ ಮಂಗಳಾರತಿ ಮಾಡಿ
ವಸ್ತ್ರಬಳೆ ಫಲಪುಷ್ಪ ತಾಂಬೂಲ ಕಾಣಿಕೆ ನೀಡಿ
ತೀರ್ಥಪ್ರಸಾದ ಅನ್ನಚಿನ್ನ ದಾನಧರ್ಮ ಮಾಡಿ
ತನುಮನ ಸಂತೈಸಿ ಬಂಧುಮಿತ್ರರ ಓಲೈಸಿ
ಕರುಳಕುಡಿಗೆ ಹಾರೈಸಿ ಹಿರಿಯರಾಸೆ ಪೂರೈಸಿ
ದೋಷತೊಳೆವ ಪಾಪಕಳೆವ ದ್ವೇಷಮರೆವ ಶ್ರೀ ಮನ್ನಾರಾಯಣಮಹಾಲಕ್ಷ್ಮಿ ಏಕದಿನವ್ರತವನ್ನು
ಪರಿಪೂರ್ಣವಾಗಿ ಸಂಪನ್ನಗೊಳಿಸಲಾಗುತ್ತದೆ!
– *ಕುಮಾರಕವಿ ಬಿ.ಎನ್.ನಟರಾಜ*
