ಗುಂಡ್ಲುಪೇಟೆ: ಮಹಿಂದ್ರಾ ವ್ಯಾನ್ ಮತ್ತು ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತಗ್ಗಲೂರು ಗೇಟ್ ಬಳಿ ನಡೆದಿದೆ.

ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಬೈಕ್ ಸವಾರ ಸಿದ್ದಮಲ್ಲಪ್ಪ(48) ಹಾಗೂ ವ್ಯಾನಿನಲ್ಲಿದ್ದ ತಮಿಳುನಾಡಿನ ಅಮ್ಮಕ್ಕಮ್ಮ(62) ಮೃತ ದುರ್ದೈವಿಗಳು‌.

ಸಿದ್ದಮಲ್ಲಪ್ಪ ಹಾಗೂ ಮಂತ್ರಿ ನಾಗಪ್ಪ ಎಂಬುವರು ಬೆಟ್ಟದಮಾದಳ್ಳಿಯತ್ತ ತೆರಳಲು ಬೈಕ್ ತಿರುಗಿಸಿದ ವೇಳೆ ಮೈಸೂರಿನಲ್ಲಿ ಮದುವೆ ಸಮಾರಂಭ ಮುಗಿಸಿಕೊಂಡು ಊಟಿಯತ್ತ ತೆರಳುತ್ತಿದ್ದ ವ್ಯಾನ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಸಿದ್ದಮಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಮಂತ್ರಿ ನಾಗಪ್ಪ ಎಂಬುವವರ ಕಾಲು ತುಂಡಾಗಿದೆ.

ವಾಹನ ಡಿಕ್ಕಿಯಾದ ರಭಸಕ್ಕೆ ವ್ಯಾನ್ ಪಲ್ಟಿಯಾಗಿ ಸೇತುವೆಗೂ ಅಪ್ಪಳಿಸಿದ್ದು, ವ್ಯಾನಿನಲ್ಲಿದ್ದ ಅಮ್ಮಕ್ಕಮ್ಮ ಸ್ಥಳದಲ್ಲೇ ಅಸುನೀಗಿದ್ದಾರೆ. ಚಾಲಕ ಸೇರಿದಂತೆ 4 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಬೇಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳಿದ್ದು, ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಬಸವರಾಜು ಎಸ್ ಹಂಗಳ

By admin