ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಇವರು ಶ್ರೀಗಣೇಶನಿಂದ ರಾಜಕುಮಾರ ಶ್ರೀರಾಮಚಂದ್ರನ ಜೀವನ ಚರಿತ್ರೆ. ಬರೆ[ಸಿ]ದ ಮಹಾನ್ಗ್ರಂಥವೆ ರಾಮಾಯಣ! ದೇವೇಂದ್ರನ ಅಮರಾವತಿ-ಸ್ವರ್ಗಲೋಕ ಓದುಗರ ಕಣ್ಮುಂದೆ ಕಾಣುವಂತೆ ಕೋಸಲದೇಶದ ರಾಜಧಾನಿ ಅಯೋಧ್ಯೆಯನ್ನು ಬಣ್ಣಿಸಿದ್ದಾರೆ. ದಶರಥ ಮಹಾರಾಜನಿಗೆ ಮೂವರು ಪತ್ನಿಯರು ಮತ್ತು ಓರ್ವ ಹೆಣ್ಣುಮಗಳೂ ೪ ಗಂಡುಮಕ್ಕಳೂ ಸೇರಿ ಒಟ್ಟು ಐವರು ಮಕ್ಕಳು. ರಾಣಿಯರಾದ ಕೌಸಲ್ಯಾಗೆ ಶಾಂತಾ ಏಕೈಕ ಹೆಣ್ಣುಮಗಳು ಮತ್ತು ರಘುರಾಮ, ಕೈಕೇಯಿಗೆ ಭರತ, ಸುಮಿತ್ರಾಗೆ ಲಕ್ಷ್ಮಣ-ಶತ್ರುಘ್ನ. ಮೂವರು ರಾಣಿಯರು ದೈವಾಂಶ ವರ ಪ್ರಸಾದ ಪಾಯಸ ಕುಡಿದು ಪಡೆದ ಮಕ್ಕಳ ಜನ್ಮರಹಸ್ಯ ಮತ್ತು ಸೋದರರ ಜೇಷ್ಠತೆಯ ಅನುಕ್ರಮವನ್ನು ಬರೆದಿರುವ ವಾಲ್ಮೀಕಿಯು ಓದುಗರನ್ನು ತ್ರೇತಾಯುಗದ ಕಾಲಘಟ್ಟಕ್ಕೆ ಕರೆದೊಯ್ಯುತ್ತಾರೆ.
ಎಲ್ಲಕ್ಕು ಮಿಗಿಲಾಗಿ ಆಗಿನ ಕಾಲಕ್ಕೆ ಚಕ್ರವರ್ತಿಗಳಲ್ಲಿದ್ದ ರಸಿಕತೆಯ ಸತ್ವವನ್ನು ಮತ್ತು ಬಹುಪತ್ನಿತ್ವದ ತತ್ವವನ್ನು ಸುಂದರವಾಗಿ ಸುಲಲಿತವಾಗಿ ವರ್ಣಿಸಿದ್ದಾರೆ! ಇಂಥ ಸಹಜ-ವಾಸ್ತವ ವರ್ಣನೆಯ ಶಕ್ತಿ ವಾಲ್ಮೀಕಿ ಮಹರ್ಷಿಗೆ ಮಾತ್ರವೆ ಇತ್ತು! ರಘುಕುಲ ತಿಲಕರಲ್ಲಿ ಜೇಷ್ಠನೂ ಶ್ರೇಷ್ಠನೂಆದ ಶ್ರೀರಾಮಚಂದ್ರನು ಮಿಥಿಲಾ ನಗರದಲ್ಲಿ ಭೂದೇವಿಯ ಸುತೆಯೂ ಜನಕರಾಜನ ದತ್ತುಪುತ್ರಿಯೂ ಆದ ಜಾನಕಿಯ ಸ್ವಯಂವರ ಸಂದರ್ಭ ಶಿವಧನುಸ್ಸನ್ನು ಕಟ್ಟಿ ವಿಜೇತನಾಗಿ ಸೀತೆಯನ್ನು ವಿವಾಹವಾಗಿ ’ಸೀತಾರಾಮ’ ಆಗುತ್ತಾನೆ.
ಸೀತಾರಾಮ ಕಲ್ಯಾಣದ ಪ್ರತಿಯೊಂದು ಸನ್ನಿವೇಶ-ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಶೃಂಗಾರಮಯವಾಗಿ ಬರೆಯಲಾಗಿದೆ. ಭರತನಿಗೆ ಪಟ್ಟಕಟ್ಟುವ ಕೈಕೇಯಿ ಆಸೆಯನ್ನು ಈಡೇರಿಸೆ ಎಂದೋ ನೀಡಿದ್ದ ವಚನದ ದುರ್-ಉಪಯೋಗಪಡಿಸಿಕೊಳ್ಳುವ ಸಂದರ್ಭವನ್ನುಅಸಾಧುವೆಂದು ಪ್ರತಿಪಾದಿಸುವಂತೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವಂತೆ ಸಮಾಜಕ್ಕೆ ಸಂದೇಶ ಸಾರುವಂತೆ ಮಾರ್ಗದರ್ಶನ ಮಾಡಿಸಿದ್ದಾರೆ ಮಹಾಕವಿ ವಾಲ್ಮೀಕಿ. ಶ್ರಿ ರಾಮನು ತಂದೆಯ ಆಜ್ಞೆಯಂತೆ ೧೪ವರ್ಷ ವನವಾಸಕ್ಕೆ ಪತ್ನಿ ಮತ್ತು ತಮ್ಮನ ಜತೆಗೆ ಹೊರಡುವನು. ಕಾಡಿನ ಕುಟೀರದಲ್ಲಿದ್ದ ಸಂದರ್ಭದಲ್ಲಿ ಕಾಮಾ ತುರಾಣಾಂ ನಭಯಂ ನಲಜ್ಜಾಃ? ತನ್ನನ್ನು ಮೋಹಿಸಲು ಬಂದ ಶೂರ್ಪನಖಿಗೆ ಲಕ್ಷ್ಮಣನಿಂದ ನಿರಾಶೆ-ಅವಮಾನ ಪಡಿಸಿ ಓಡಿಸಿದ ಕಾರಣಕ್ಕೆ ಪ್ರತ್ಯಕ್ಷವಾದ ಚಿನ್ನದ ಮಾಯಾಜಿಂಕೆ ಕಂಡ ಜಾನಕಿ ಅದನ್ನು ತಂದುಕೊಡುವಂತೆ ಒತ್ತಾಯಿಸಿದಾದ ಹೊನ್ನಜಿಂಕೆಯ ಬೆನ್ನತ್ತಿದಾಗ ಲಂಕೇಶ್ವರನು ಸೀತೆಯನ್ನು ಅಪಹರಿಸುವನು.
ಈ ಸಂದರ್ಭದ ಕ್ರೋಧ ಹೆಣ್ಣಿನಹಠ ಗಂಡಿನಛಟ ಸೇಡು ಶತ್ರುತ್ವ ಅತಿಯಾದಾಗ ದೊಡ್ಡ ದುರಂತವೆ ಜರುಗುತ್ತದೆ. ರಾಜ್ಯ- ಸಾಮ್ರಾಜ್ಯ ಅಕ್ಷೋಹಿಣಿ ಸೇನೆ ಎಲ್ಲವೂ ಸರ್ವನಾಶವಾಗುತ್ತದೆ ಎಂಬುದನ್ನು ಧೀರ್ಘವಾಗಿ ಬಣ್ಣಿಸಿದ್ದಾರೆ. ಜಠಾಯುವಿನಿಂದ ಸುದ್ದಿ ತಿಳಿದ ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಕಿಷ್ಕಿಂಧೆ ರಾಜ್ಯ ತಲುಪುವರು. ವೀರ ಹನುಮಂತನ ಧೀರ ಸುಗ್ರೀವನ ಪರಿಚಯವಾಗಿ ಶೂರ ವಾಲಿಯನ್ನು ಮರೆಯಲ್ಲಿ ನಿಂತು ಕೊಂದು, ವಾನರಸೇನೆ ನಿರ್ಮಿತ ರಾಮಸೇತುವೆ ಸಹಾಯದಿಂದ ದಶಕಂಠ ರಾವಣಾಸುರ ಕುಂಭಕರ್ಣನನ್ನು ವಧಿಸಿ ವಿಭೀಷಣನಿಗೆ ಪಟ್ಟಕಟ್ಟಿದ ನಂತರ ಲಕ್ಷ್ಮಣ-ಆಂಜನೇಯ-ಸೀತಾಸಮೇತ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಕ್ತನಾಗಿ ವಿಜಯೋತ್ಸವ ಆಚರಿಸುತ್ತಾನೆ. ಇವೆಲ್ಲ ಸಂದರ್ಭದ ಶಿಷ್ಟರಿಗೆರಕ್ಷೆ ದುಷ್ಟರಿಗೆಶಿಕ್ಷೆ ಒಗ್ಗಟ್ಟಿನಬಲ ಸ್ನೇಹ ವಿಶ್ವಾಸ ಬಂಧುತ್ವ ಹೇಗಿರಬೇಕು ಅವುಗಳ ಶಕ್ತಿಯೆಷ್ಟು ಉಪಯೋಗವೇನು ಎಂಬುದನ್ನು ತಿಳಿಹೇಳುವಂತೆ ಬರೆದಿದ್ದಾರೆ. ಒಂದು ಸಾಮ್ರಾಜ್ಯದ ಉದ್ಧಾರ ಅಥವ ಸರ್ವನಾಶ ಎರಡಕ್ಕೂ ಹೆಣ್ಣು ಕಾರಣ ಆಗಬಹುದು ಎಂಬುದನ್ನು ಎಳೆಎಳೆಯಾಗಿ ಚಿತ್ರಿಸಿದ್ದಾರೆ. ಆ..ದ..ರೆ…
ಶ್ರೀರಾಮಪಟ್ಟಾಭಿಷೇಕ ಮಹೋತ್ಸವಕ್ಕೆ ಇತಿಶ್ರೀಶುಭಂ ಹಾಡಿಮುಗಿಸಿದ್ದ ವಾಲ್ಮೀಕಿಗೆ ಉತ್ತರಕಾಂಡದ ’ಶೇಷರಾಮಾಯಣ ಅಥವ ಉತ್ತರರಾಮಾಯಣ’ ಮುಂದುವರೆಸುವ ಅನಿವಾರ್ಯ ಸಂದರ್ಭ ಒದಗುತ್ತದೆ! ರಾವಣ ಸಂಹಾರ ನಂತರ ಅಶೋಕ ವನದಲ್ಲಿದ್ದ ಜಾನಕಿಯನ್ನು ಅಯೋಧ್ಯೆಗೆ ಕರೆತರುವಮುನ್ನ ದೇವಾಧಿದೇವತೆಗಳ ಸಾಕ್ಷಿಯಾಗಿ ಋಷಿಮುನಿಗಳ ಸಮ್ಮುಖದಲ್ಲಿ ಶ್ರೀರಾಮನೆದುರೇ ಜರುಗಿದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸೀತೆಯು ಪರಮಪಾವನೆ ಎಂದು ನಿರ್ಧರಿಸಿದ ಸನ್ನಿವೇಶವನ್ನು ವಾಲ್ಮೀಕಿಯು ಅಧಿಕಾರವಾಣಿಯಿಂದ ಪುಷ್ಟೀಕರಿಸುತ್ತಾರೆ. ಪರಿ ಶುದ್ಧಗೊಂಡ ಜಾನಕಿಯು ಮಹಾರಾಣಿಯಾಗಿ ಅರಮನೆಯಲ್ಲಿ ಕುಟುಂಬದವರೊಡನೆ ಸಂತಸದೆ ಇರುವಾಗ; ಆಕಸ್ಮಿಕವಾಗಿ ಪ್ರಜೆಯೊಬ್ಬ ಆಡಿದ ವ್ಯಂಗ್ಯ ಮಾತಿನಿಂದಾಗಿ ನೊಂದ ಶ್ರೀರಾಮನು ಅನಿರೀಕ್ಷಿತವಾಗಿ ಲಕ್ಷ್ಮಣನ ಮೂಲಕ ಜಾನಕಿಯನ್ನು ಕಾನನಕ್ಕೆ ಬಿಟ್ಟು ಬರುವಂತೆ ಆಜ್ಞಾಪಿಸಿದ ರಾಮನು ಕಣ್ಣೀರಿಡುತ್ತ ಏಕಾಂತದಲ್ಲಿ ಕೊರಗಿ ಕೃಶನಾಗುವ ವಿರಹದ ಬೇಗೆಯಲ್ಲಿ ಬೆಂದು ಬಸವಳಿದ ಸಂದರ್ಭವನ್ನು ಹೀಗೆ ವರ್ಣಿಸುತ್ತಾರೆ: ಕ್ಷುಲ್ಲಕಕಾರಣಕ್ಕೆ ಚಕ್ರವರ್ತಿಯು ಧರ್ಮಪತ್ನಿಯನ್ನು ಕಳೆದುಕೊಂಡು ನಿಸ್ಸಹಾಯಕ ನಿರ್ಲಿಪ್ತನಾಗಿ ನಿದ್ರಾಹಾರ ತೊರೆದು ಶೋಕ ಸಾಗರದಲ್ಲಿ ಮುಳುಗುವುದು ಎನಿತುಸರಿ? ಆಳುವದೊರೆ ತಂದೆಇದ್ದಂತೆ ಅರಿತೋ ಅರಿಯದೆಯೋ ತಪ್ಪು ಮಾಡಿದವನಿಗೆ ಮನವರಿಕೆ ಮಾಡಿಕೊಟ್ಟು ಅವನ ಸಣ್ಣ ಮಾತನ್ನು ಗೌಣ ಆಗಿಸಬಹುದಿತ್ತು? ತುಂಬು ಗರ್ಭಿಣಿ ಭೌತಿಕ-ಬೌದ್ಧಿಕ ಗಂಭೀರ ಸ್ಥಿತಿಯಲ್ಲಿರುವಾಗ ವಿನಾಕಾರಣ? ಅರಣ್ಯದಲ್ಲಿ ಅನಾಥೆ ಆಗಿಸಿದ್ದು ಅದೆಷ್ಟು ನ್ಯಾಯ?ಧರ್ಮ? ಎಂಬುದು ಮೂರು ಲೋಕವೂ ಪ್ರಶ್ನಿಸುವಂಥ ತ್ರಿಮೂರ್ತಿಗಳೂ ಆಶ್ಚರ್ಯಪಡುವಂಥ ಟ್ರ್ಯಾಜಿಡಿ ಸಂದರ್ಭವನ್ನು ಅತ್ಯಂತ ದಾರುಣ ಸ್ಥಿತಿ ಎಂದು ಸ್ವಯಂ ವಾಲ್ಮೀಕಿಯು ಮನನೊಂದ ಪದಗಳಿಂದ ವರ್ಣಿಸಿ ಓದುಗರು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದಾರೆ! ಮಹಾಕವಿ ವಾಲ್ಮೀಕಿಗೆ ಸರಿಸಾಟಿ ಬೇರಾರಿಲ್ಲ, ರಾಮಾಯಣ ಮಹಾಕಾವ್ಯಕ್ಕೆ ಸರಿಗಟ್ಟುವ ಮತ್ತೊಂದು ಕಾವ್ಯವಿಲ್ಲ?!
ಸಾಮ್ರಾಟನಸತಿ, ಧರಣಿದೇವಿಪುತ್ರಿಯು ದುಸ್ಥಿತಿಯಲ್ಲಿದ್ದಾಗ ವಾಲ್ಮೀಕಿಯ ಆಶ್ರಯ ದೊರಕುವ ದೃಶ್ಯವನ್ನು ಮನಕಲಕುವಂತೆ ಬರೆದಿದ್ದಾರೆ. ಕಾಲಕ್ರಮೇಣ ಲವ-ಕುಶ ಅವಳಿ ಪುತ್ರರತ್ನರಿಗೆ ಜನ್ಮ ನೀಡಿದ್ದನ್ನು ತಮ್ಮ ಶಿಷ್ಯರಾಗಿ ಸಕಲ ವಿದ್ಯಾ ಪಾರಂಗತರಾಗಿ ರಾಮಾಯಣ ಕಥಾ ಸಾರಾಂಶವನ್ನು ಕೇಳುಗರು ತಲೆತೂಗುವಂತೆ ಹಾಡಿಹೊಗಳುವ ಅದಮ್ಯ ಶಕ್ತಿವಂತರಾದುದನ್ನು ಅಯೋಧ್ಯಾನಗರದ ಜನಸ್ತೋಮಕ್ಕೆ, ಅರಮನೆಯ ಶ್ರೀರಾಮನ ಕುಟುಂಬಕ್ಕೆ ಸೀತಾರಾಮರ ಕಥೆಯನ್ನು ಪ್ರಸ್ತುತಪಡಿಸಿ ಆಶ್ಚರ್ಯ ಚಕಿತರನ್ನಾಗಿಸಿದ್ದನ್ನು ಅಪ್ರತಿಮ ಅಮೂಲ್ಯ ಪದ ಪುಂಜಗಳಿಂದ ಪುಂಕಾನುಪುಂಕವಾಗಿ ಬಣ್ಣಿಸಿದ್ದಾರೆ. ಬಹುಮಾನ ಪಡೆದು ಮಹರ್ಷಿ ಕುಟೀರಕ್ಕೆ ಹಿಂದಿರುಗಿ ಸೀತಾಮಾತೆಗೆ ನಡೆದ ಘಟನೆಯನ್ನು ವಿವರಿಸಿದ ತನ್ನ ಮಕ್ಕಳಿಗೆ ’ಶ್ರೀರಾಮಚಂದ್ರನೆ ನಿಮ್ಮತಂದೆ’ ಎಂಬ ಸತ್ಯವನ್ನು ಹೇಳಲಾರದ/ಹೇಳದೇಇರಲಾರದ ಅಸಹನಾ ಸಂದರ್ಭದಲ್ಲಿ ಸೀತೆಯು ಅನುಭವಿಸುವ ಮೂಕಯಾತನೆ, ವಿಧಿಯಾಟದ ಸು-ದುಃಖದ [ಆನಂದ]ಬಾಷ್ಪ ಮುಂತಾದುವನ್ನು ವಾಲ್ಮೀಕಿಯು ಭಾವನಾತ್ಮಕವಾಗಿ, ಅಸಾಮಾನ್ಯವಾಗಿ ತನುತಟ್ಟುವಂತೆ ಮನಮುಟ್ಟುವಂತೆ ಕರುಳುಚುರುಕ್ ಎನ್ನುವಂತೆ ವರ್ಣಿಸಿ ಎಂಥ ಕಲ್ಲುಮನಸ್ಸಿನವರೂ ಗಳಗಳನೆ ಅಳುವಂತೆ ಮಾಡಿದ್ದಾರೆ.
ಶ್ರೀರಾಮನ ’ಅಶ್ವಮೇಧಯಾಗ’ ಪ್ರಾರಂಭ, ಎಳೆಯ ಮಕ್ಕಳು ಕುದುರೆಯನ್ನು ಕಟ್ಟಿಹಾಕುವುದು, ಲಕ್ಶ್ಮಣನಾದಿಯಾಗಿ ಸೋದರರು ಯುದ್ಧದಲ್ಲಿ ಸೋತು ಕಡೆಗೆ ಪ್ರಜ್ಞೆತಪ್ಪುವ ಶೋಚನೀಯ ಸ್ಥಿತಿ! ಅಂತಿಮವಾಗಿ ಸ್ವಯಂ ಶ್ರೀರಾಮಚಂದ್ರ ಚಕ್ರವರ್ತಿಯೇ ಆಗಮಿಸಿ ಲವ-ಕುಶ ರೊಡನೆ ಅಧ್ಬುತ ವಾಗ್ಯುದ್ಧ ನಡೆಸಿದ ನಂತರ ಇನ್ನೇನು ತಂದೆ-ಮಕ್ಕಳ ಅವಸಾನದ ಕಟ್ಟಕಡೆಯ ಸಂದರ್ಭ ಒದಗಿಬರುವ ವೇಳೆಯಲ್ಲಿ ಜಾನಕಿ ಆಗಮಿಸಿ ತಂದೆ-ಮಕ್ಕಳನ್ನು ಪರಸ್ಪರ ಪರಿಚಯಿಸುತ್ತಾಳೆ. ನಂತರ ತನ್ನ ಜನನಿಯಾದ ಧರಣಿಯೊಡಲು ಸೇರಿಕೊಳ್ಳುವ ದುರಂತ… ದುರಾದೃಷ್ಟವಂತ ಶ್ರೀರಾಮನು ವ್ಯಥೆಯಿಂದ ದುಃಖಿಸುತ್ತ ಕಣೀರಧಾರೆಯ ಕೋಡಿಹರಿಸುವ ದೃಷ್ಟಾಂತ.. ಓ..ಎಂಥಾ ಕ್ಲೈಮ್ಯಾಕ್ಸ್, ಎಲ್ಲವನ್ನು ಮನ ಕಲಕುವಂತೆ ಅವಿಸ್ಮರಣೀಯವಾಗಿಸಿ ಅಜರಾಮರವಾಗಿಸಿ ಚಿರಂಜೀವವಾಗಿಸಿ ವರ್ಣಿಸಿದ ಏಕೈಕ ಕವಿ ವಾಲ್ಮೀಕಿ!! ಇಡೀ ರಾಮಾಯಣದ ಪ್ರತಿಯೊಂದು ಘಟನೆ, ಪ್ರತಿಯೊಂದು ಪಾತ್ರ, ಪ್ರತಿಯೊಂದು ಸಂದರ್ಭವನ್ನು ರಮಣೀಯ, ರೌದ್ರ ಶೃಂಗಾರ ಮುಂತಾದ ನವರಸಭರಿತ ಪದ ಗಳಿಂದರಚಿಸಿ ಹೊಸಹೊಸ ವಾಕ್ಯಗಳನ್ನು ಅವ್ಯಾಹತವಾಗಿ ಅನಂತವಾಗಿ ಅಮೋಘವಾಗಿ ಸಾದರಪಡಿಸಿ ಸ್ವಯಂ ಅನುಭವಿಸುತ್ತ ಬರೆಯಲು ಜಗತ್ತಿನ ಬೇರಾವ ಕವಿಯಿಂದಲೂ ಸಾಧ್ಯವಿಲ್ಲ?! ಮತ್ತೊಮ್ಮೆ ಮತ್ತೊಬ್ಬ ವಾಲ್ಮೀಕಿಯ ಜನನ ಖಂಡಿತ ಅಸಾಧ್ಯ?! ಇಷ್ಟು ದೊಡ್ಡ ಇತಿಹಾಸವನ್ನು ೭ಕಾಂಡಗಳ, ೨೪೦೦೦ಶ್ಲೋಕಗಳ ೪೮೨೦೦೦ಪದಗಳ ಮೂಲಕ ಸವಿವರವಾಗಿ ಸಚಿತ್ರವಾಗಿ ಬರೆದು ವಿರಮಿಸಿದ್ದಾರೆ! ಆಚಂದ್ರಾರ್ಕ ಏಕಮೇವ ಅಮರಕಾವ್ಯ ’ರಾಮಾಯಣ’! ಮತ್ತು ಅಜರಾಮರರಾಗಿ ಬದುಕಿರುವ ಏಕಮೇವಾದ್ವಿತೀಯ ಕವಿ ’ವಾಲ್ಮೀಕಿ’!
ಕ್ರಿ.ಶ.೧೩೨೧ರಿಂದ ಇದುವರೆಗೆ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಮೂಲ ’ವಾಲ್ಮೀಕಿ ರಾಮಾಯಣ’ ಗ್ರಂಥದ ಆಧಾರದಿಂದ/ ಪ್ರೇರಣೆಯಿಂದ ಜಗತ್ತಿನಾದ್ಯಂತ ೧೨೩ ಭಾಷೆಗಳಲ್ಲಿ ೧೨೬೦ ಲೇಖಕರು ಬರೆದು ಪ್ರಕಟಿಸಿರುವ ಒಟ್ಟು ಕೃತಿಗಳ [ಪ್ರತಿಗಳ]ಸಂಖ್ಯೆ ೪೨೨ ಕೋಟಿ. ಡಿಸೆಂಬರ್ ೨೦೧೦ಕ್ಕೆ ಅನ್ವಯವಾದಂತೆ ಓದುಗರ ಸಂಖ್ಯೆ ೨೨೫ಕೋಟಿ. ಒಟ್ಟು ಶ್ರೀರಾಮಮಂದಿರಗಳ ಸಂಖ್ಯೆ ೫.೧೭ ಕೋಟಿ, ವಾಲ್ಮೀಕಿಯ ಶಿಲೆ/ಗೋಪುರ/ಮೂರ್ತಿ/ದೇವಾಲಯದ ಸಂಖ್ಯೆ ೨೯,೦೦೦.
ಪ್ರಕಟಗೊಂಡ ರಾಮಾಯಣಗಳಲ್ಲಿ ಕೆಲವು ಉದಾಹರಣೆ:-
ಕುವೆಂಪು ವಿರಚಿತ ’ರಾಮಾಯಣ ದರ್ಶನಂ’೧೯೫೪[ಕನ್ನಡ+೧೨ಭಾಷೆಗಳಲ್ಲಿ-ಜ್ಞಾನಪೀಠ ಪುರಸ್ಕೃತ]
ತುಳಸೀದಾಸ ವಿರಚಿತ ’ತುಲಸೀ ರಾಮಾಯಣ್’ ೧೫೬೨ [ಸಂಸ್ಕೃತ+೨೧ ಭಾಷೆಗಳಲ್ಲಿ ಲಭ್ಯ]
ಆರ್.ಕೆ.ನಾರಾಯಣ್ – ದಿ ರಾಮಾಯಣ್ [೧೯೭೨]
ಪೋಲಂಕಿ ರಾಮಮೂರ್ತಿ – ಸೀತಾಯಣ ೧೯೭೭[ಕನ್ನಡ+ಇಂಗ್ಲಿಷ್]
ಆನಂದನೀಲಕಂಠನ್ – ಅಸುರ [೧೯೮೧]
ಪಿ.ಎಸ್.ಸುಂದರಂ – ಕಂಬರಾಮಾಯಣ [೧೯೯೨]
ಅಶೋಕ್ ಕೆ.ಬ್ಯಾಂಕರ್ – ಸೀಜ಼್ ಆಫ಼್ ಮಿಥಿಲಾ [೨೦೦೪]
ಸಂಹಿತಾ ಅರ್ಣಿ – ಸೀತಾ’ಸ್ ರಾಮಾಯಣ್ [೨೦೧೨]
ಜೋನ್ ರಫ಼್ಗಾರ್ಡನ್- ರಾಮ್ [೨೦೨೦/ಇಂಗ್ಲಿಷ್/ಫ಼್ರೆಂಚ್]
ವಾಲ್ಮೀಕಿ ಬಗ್ಗೆ ತಯಾರಿಸಿದ ಚಲನಚಿತ್ರಗಳು:-
೧. ಜಿ.ವಿ.ಸಾಣೆಯವರ – ವಾಲ್ಮೀಕಿ [೧೯೨೧]
೨. ಸುರೇಂದ್ರನಾರಾಯಣರವರ – ರತ್ನಾಕರ [೧೯೨೨]
೩. ಎಲ್ಲಿಸ್ ಡಂಗನ್ರವರ – ವಾಲ್ಮೀಕಿ [೧೯೪೬]
೪. ಭಾಲ್ಜಿ ಪೆಂಢಾರ್ಕರ್ರವರ – ವಾಲ್ಮೀಕಿ [೧೯೪೬]
೫. ಸುಂದರರಾವ್ ನಾಡಕರ್ಣಿಯವರ – ವಾಲ್ಮೀಕಿ [೧೯೪೬]
೬. ಸಿ.ಎಸ್.ಆರ್.ರಾವ್ರವರ – ವಾಲ್ಮೀಕಿ [೧೯೬೩/ಕನ್ನಡ-ಡಾ||ರಾಜ್]
೭. ಸಿ.ಎಸ್.ಆರ್.ರಾವ್ರವರ – ವಾಲ್ಮೀಕಿ [೧೯೬೪/ತೆಲುಗು-ಎನ್.ಟಿ.ಆರ್.]
೮. ಅರವಿಂದ್ಭಟ್ರವರ – ಸಂತ ವಾಲ್ಮೀಕಿ [೧೯೯೧]
ಕುಮಾರಕವಿ ಬಿ.ಎನ್.ನಟರಾಜ್(೯೦೩೬೯೭೬೪೭೧)
ಬೆಂಗಳೂರು-೫೬೦೦೭೨