“ಎರಡು ಜೀವ- ಒಂದೇ ಭಾವ” ಎಂದು ಕಾವ್ಯಾನಂದಮಯವಾಗಿ ತರುಣ-ತರುಣಿಯರು ಪುಳಕಿತ ಭಾವದಲ್ಲಿ ಪ್ರೀತಿ ಪ್ರೇಮ ಎಂಬ ಭಾವನಾತ್ಮಕ ಸಂಬಂಧಗಳಲ್ಲಿ ವ್ಯಾಲೆಂಟೈನ್ಸ್ ಡೇ ಫೆಬ್ರುವರಿ 14 ಪ್ರತಿವರ್ಷ ಎಷ್ಟೋ ಮಂದಿ ಯುವಕರು ಯುವತಿಯರು ಪರಸ್ಪರ ಪ್ರೇಮ ನಿವೇದಿಸಿಕೊಳ್ಳಲೆಂದೇ ಹಪಾಹಪಿಸುತ್ತಾರೆ.

ಅದು ಸರಿ ವ್ಯಾಲಂಟೈನ್ ಗೂ ಮತ್ತು ಪ್ರೇಮಿಗಳಿಗೂ ಏನು ಸಂಬಂಧ? ರೋಮನ್ ನಾಗರಿಕತೆಯಲ್ಲಿ ಯುವಕ ಯುವತಿಯರನ್ನು ನವವಿವಾಹಿತರನ್ನು ಜೈಲುಪಾಲು ಮಾಡುತ್ತಿದ್ದಾಗ ಆ ಪ್ರೇಮಿಗಳನ್ನು ಒಂದು ಮಾಡುತ್ತಿದ್ದ ಸಂತ ವ್ಯಾಲೆಂಟೀನ್ ಗೆ ಗೌರವ ಸಮರ್ಪಕವಾಗಿ ಫೆಬ್ರುವರಿ ಹದಿನಾಲ್ಕರಂದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವ್ಯಾಲೆಂಟೈನ್ಸ್ ಡೇ ಎಂದು ಕರೆದರು. ಈ ವ್ಯಾಲಂಟೈನ್ಸ್ ಡೇಗೂ ಅದನ್ನು ಪ್ರೇಮಿಗಳ ದಿನವೆಂದು ಆಚರಿಸುವವರಿಗೂ ಮತ್ತು ನಮ್ಮ ಭಾರತೀಯ ಸಂಸ್ಕೃತಿಗೂ ಯಾವುದೇ ರೀತಿಯ ಸಂಬಂಧವಿಲ್ಲ .

ಆದರೂ ಹವ್ಯಾಸ ಬಲವಾಗಿ ಪ್ರೇಮಿಗಳ ದಿನಾಚರಣೆಯೆಂದು ಅಡ್ಡ ಹೆಸರಿಟ್ಟು ಅದನ್ನು ಇಡೀ ವಿಶ್ವವೇ ಉತ್ಸಾಹಭರಿತ ಕನಸುಗಳ ರೆಕ್ಕೆ ಕಟ್ಟಿಕೊಂಡು ಹಾರುತ್ತಿರುವ ಯುವ ಜನಾಂಗ ಪ್ರೇಮ ನಿವೇದನೆಯಲ್ಲಿ ತೊಡಗಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡರು. ಎಷ್ಟೋ ಮಂದಿ ಯುವಕರಿಗೆ ಪ್ರೇಮ ನಿವೇದನೆ ಆದರೆ, ಇನ್ನೂ ಒಂದಷ್ಟು ಮಂದಿಗೆ ಅದು ವೇದನೆಯಲ್ಲಿ ಅಂತ್ಯವಾಗುತ್ತದೆ.

ನಿಜವಾದ ಪ್ರೀತಿ ಪ್ರೇಮ ಅದರ ಅರ್ಥ ಆಳವೂ ಇಂದಿಗೂ ಅರಿಯಲಾಗದ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಆದರೂ “ನನ್ನ ಜೀವ ನೀನು- ನಿನ್ನ ಹೃದಯದ ಬಡಿತ ನಾನು” ಎಂದು ಕಲ್ಪನಾ ಲೋಕದ ವಿಹಾರಿಗಳಾಗಿ ಪರಸ್ಪರ ತನು ಮನ ಧನಗಳನ್ನು ಅರ್ಪಿಸಿಕೊಂಡು ತಾಜ್ ಮಹಲನ್ನು ಮನದೊಳಗೆ ಕಟ್ಟಿಕೊಳ್ಳುತ್ತಾರೆ. ಈ ಪೈಕಿ ಎಷ್ಟು ಶೇಕಡಾವಾರು ಮಂದಿಯ ಪ್ರೀತಿ ಪ್ರೇಮ ಯಶಸ್ಸನ್ನು ಕಂಡಿದೆಯೋ ಗೊತ್ತಿಲ್ಲ. ಗೆಲುವು ಕಂಡರೆ ಅದು ನಿಜವಾಗಿ ಸಂತೋಷವೇ.

ಆದರೆ ಇಲ್ಲೊಂದು ಸತ್ವ ಪರೀಕ್ಷೆ ಎದುರಾಯಿತು ಎಷ್ಟು ಕೋಟಿ ಖರ್ಚು ಮಾಡಿ ಏರ್ಪಡಿಸಿದ್ದ ಮದುವೆಗಳು, ಎಷ್ಟು ಪ್ರೇಮ ನಿಶ್ಚಿತಾರ್ಥಗಳು, ಒಡವೆ ವೈಡೂರ್ಯಗಳು, ಬಂಧು ಬಳಗಗಳಿಗೆ ಆಹ್ವಾನ ಪತ್ರಗಳು ಕನಸು ಕಂಡಿದ್ದ ನವದಂಪತಿಗಳ ಕಣ್ಣಲ್ಲಿ ಉತ್ಸಾಹ ತಮ್ಮ ಮದುವೆಯ ಆಚರಣೆಯ ಸಂಭ್ರಮವು ಆಡಂಬರಗಳು ಎಲ್ಲವೂ ಸುಳ್ಳಾಯಿತು, ಅಗೋಚರವಾದ ಕರೋನ ಎಂಬ ಮಹಾಮಾರಿಯಿಂದ. ಫೆಬ್ರವರಿ 14, 2020 ರಂದು ನಿಶ್ಚಿತಾರ್ಥ ಮಾಡಿಕೊಂಡು ಮಾರ್ಚ್ ತಿಂಗಳಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಮದುವೆಗೆಂದು ಮುಂದಾಗಿದ್ದವರೆಲ್ಲರೂ ಮನೆಯಲ್ಲಿಯೇ ಮದುವೆಯನ್ನ ಮಾಡುವಂತಹ ಪರಿಸ್ಥಿತಿ ಬಂದೊದಗಿತು. ಸಾವಿರಾರು ಜನರು ಸೇರಬೇಕಿದ್ದ ಮದುವೆಗಳಲ್ಲಿ ಕೇವಲ ಮುಖ್ಯ ವಾದಂತಹ ಸಂಬಂಧಿಕರು ಸೇರಿಕೊಂಡು ಮನೆಗಳಲ್ಲಿಯೇ ಸರಳ ವಿವಾಹಗಳು ಜರುಗಿದವು. ನಿಜವಾದ ಪ್ರೀತಿ ಪ್ರೇಮಕ್ಕೆ ಹೊಸ ಆಯಾಮವನ್ನು ಪ್ರಕೃತಿಯೇ ನೀಡಿತು.

‘ನೀನೆ ನನ್ನ ಇಂದ್ರ ಚಂದ್ರ’ ಎಂದುಕೊಂಡಿದ್ದ ಇಬ್ಬರು ಪ್ರೇಮಿಗಳು ಮಾಸ್ಕ್ ಹಾಕಿಕೊ, ಸಾಮಾಜಿಕ ಅಂತರ ಕಾಪಾಡಿಕೊ ಎಂದು ಪರಸ್ಪರ ದೂರದಲ್ಲಿಯೇ ನಿಂತುಕೊಳ್ಳುವ ಸನ್ನಿವೇಶ ನಿರ್ಮಾಣವಾಯಿತು. ಇಲ್ಲಿ ಯಾವ ಪ್ರಮಾಣವೂ ಯಾವ ಕಾವ್ಯಾತ್ಮಕವಾದ ಭಾವನೆಗಳು ಕೆಲಸಕ್ಕೆ ಬರಲಿಲ್ಲ. ಯಾಕೆಂದರೆ ಯಾರಿಗೂ ಕೂಡ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ ಕರೋನ ಮಹಾಮಾರಿ ಬಂದು ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗುತ್ತದೆ ಎಂದು.
ಎಷ್ಟೋ ಜನರ ನಿಶ್ಚಯವಾಗಿದ್ದ ಮದುವೆಗಳು ಮುಂದಿನ ವರ್ಷ ಕ್ಕೆ ಮುಂದೂಡಿದರು. ವ್ಯಾಲೆಂಟೈನ್ ಗಳು ಕ್ವಾರಂಟೀನ್ ಗಳಾಗಿ ಪರಿವರ್ತನೆಯಾದವು ಮದುವೆಯಾದ ನವ ದಂಪತಿಗಳು ಅವರವರ ಮನೆಯಲ್ಲಿಯೇ ಕಳಿಯಬೇಕಾದ ಪ್ರಸಂಗ ಎದುರಾಯಿತು. ಶೇಕಡಾ 30% ರಷ್ಟು ಪ್ರೇಮಿಗಳು ನವ ವಿವಾಹಿತರು ತಮ್ಮ ಹೊಸ ವೈವಾಹಿಕ ಜೀವನವು ನಡೆಸಲಾಗದೆ, ಡೇಟಿಂಗ್ ಆ್ಯಪ್ ಗಳ ಮೊರೆ ಹೋಗಿದ್ದು ಉಂಟು ತಮ್ಮ ನಿಜಜೀವನದಲ್ಲಿ ಆಸಕ್ತಿ ಕಡಿಮೆಯಾಗಿದ್ದು ಉಂಟು ಎಂದು ಡೌನ್ ಡೇಟರ್ ಸಮೀಕ್ಷೆಯು ವರದಿ ನೀಡಿದೆ. ಕಷ್ಟಪಟ್ಟು ಗಿಫ್ಟ್ ಅಂಗಡಿಗಳಲ್ಲಿ ನಿಂತು ಗ್ರೀಟಿಂಗ್ಸ್ ಗಳನ್ನು ತೆಗೆದುಕೊಂಡು ಪ್ರಪೋಸ್ ಮಾಡಿದ್ದು ಎಲ್ಲವೂ ಕೂಡ ಸುಳ್ಳಾಗಿದ್ದೂ ಉಂಟು. ನಿಜ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ದೂರದಲ್ಲೇ ಇದ್ದು ಕ್ವಾರಂಟೈನ್ ಆಗಿದ್ದ ವ್ಯಾಲೆಂಟಿನ್ ಗಳು ತಮ್ಮ ಪ್ರೀತಿಯ ಮಹತ್ವ ಮತ್ತು ನಿಷ್ಠೆ ಎಷ್ಟರ ಮಟ್ಟದ್ದಾಗಿದೆ ಎಂಬ ಪರೀಕ್ಷೆಯೊಳಗೆ ಬಹುತೇಕ ಮಂದಿ ಹಿನ್ನೆಡೆ ಅನುಭವಿಸಿದ್ದನ್ನು ನಾವು ನೋಡಬಹುದು. ಇಡೀ ಪ್ರಪಂಚವು ವರ್ಚುಯಲ್ ಪ್ರೇಮ ನಿವೇದನೆ ಎಂಗೇಜ್ಮೆಂಟ್ ಎಲ್ಲವೂ ವೀಡಿಯೋ ಕಾಲ್ ಮೂಲಕವೇ ನಡೆಯುವಾಗ ಸಂಬಂಧಗಳು ಮೊಬೈಲ್ ಮತ್ತು ಲ್ಯಾಪ್ ಟಾಪ್ ವಿಡಿಯೋ ಕಾಲ್ ನಲ್ಲಿ ಆರಂಭವಾಗಿ ಅಂತ್ಯ ಕಂಡಿದ್ದಾವೆ.

ಇವತ್ತು ಪ್ರೀತಿ ಪ್ರೇಮ ಎಂಬುದು ಬೆಳಿಗ್ಗೆ ಅರಳಿ ಸಂಜೆ ಬಾಡಿ ಹೋಗುವ ಸ್ಥಿತಿಗೆ ತಲುಪಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಇವತ್ತು ನೀನಿಲ್ಲದಿದ್ದರೆ ಮತ್ತೊಬ್ಬರು ಎಂಬ ಮೊಂಡುತನದಲ್ಲಿ ಪ್ರೇಮಿಗಳು ಎನಿಸಿಕೊಂಡವರು ಎಕ್ಸ್ ಚೇಂಜ್ ಆಫರ್ ಗಳಾಗಿ ಬದಲಾಗುತ್ತಿರುವುದು ಕೂಡ ಸಮಾಜದ ಸ್ವಾಸ್ಥ್ಯಕ್ಕೆ ಕಂಟಕವಾಗಬಹುದು.

ಪ್ರೀತಿ ಪ್ರೇಮ ಓಕೆ, ಇದರಲ್ಲಿ ಬಿಸಿನೆಸ್ ಯಾಕೆ ? ಒಬ್ಬರನ್ನು ನೀವು ನಿಜವಾಗಿಯೂ ಹಚ್ಚಿಕೊಂಡಿದ್ದೀರಾ, ಅವ್ರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ ಎಂದಾದರೆ ವ್ಯಾಲೆಂಟೈನ್ಸ್ ದಿನಕ್ಕಾಗಿ ಕಾದು ಕುಳಿತು ಪ್ರೇಮನಿವೇದನೆ ಮಾಡುವುದಕ್ಕಾಗಿ ಸಾವಿರಾರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅವರಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಪ್ರತಿವರ್ಷದ ವ್ಯಾಲೆಂಟೈನ್ ದಿನಕ್ಕೆ ಕಾಯಬೇಕಿಲ್ಲ. ಯಾವತ್ತು ನಿಮ್ಮ ನಿಜವಾದ ಪ್ರೀತಿಗೆ ಹಸಿರು ನಿಶಾನೆ ದೊರಕುವುದೋ, ಅವತ್ತೇ ನಿಮ್ಮ ಪಾಲಿಗೆ ವ್ಯಾಲೆಂಟೈನ್ಸ್ ಡೇ. ಯಾವತ್ತು ಇಬ್ಬರ ಪ್ರೇಮ ಪ್ರಕರಣ ಇಬ್ಬರಲ್ಲಿಯೇ ನಿಲ್ಲದೆ, ಅವರಿಬ್ಬರ ಮನೆಯ ಆಚಾರ ವಿಚಾರಗಳು- ಕುಟುಂಬವು ಒಂದಾಗುತ್ತದೋ ಅಂದೇ ನಿಮ್ಮ ನಿಜವಾದ ಪ್ರೇಮಿಗಳ ದಿನ.

ಯೌವ್ವನದಲ್ಲಿಯೇ ಪ್ರೀತಿ ಪ್ರೇಮ ಎಂಬ ಹಾರುವ ಮೋಡದಲ್ಲಿ ತೇಲಿಕೊಂಡು ಹೋದ ಮೇಲೂ ಧರೆಯ ಮೇಲೆ ಎರಡೂ ಜೀವಿಗಳು ಒಂದಾಗುವ ಮೂಲಕ ವರ್ಷಧಾರೆಯ ಸುರಿಸಿ ಸಮಾಜಕ್ಕೆ ಒಳ್ಳೆಯ ಪೈರನ್ನು ಹೊತ್ತು ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮುಂದಿನ ಸಂಸಾರಿಗಳಾಗಿ ಬದಲಾಗುವ ಪ್ರೇಮಿಗಳೇ! ನಿಮ್ಮ ಪ್ರೀತಿ ಪರಿಶುದ್ಧವಾಗಿರಲಿ, ನಂಬಿಕೆ ವಿಶ್ವಾಸ ಎಂದು ಬಲಿಯದೆ ಬಲಿಷ್ಠವಾಗಿರಲಿ. ನಂಬಿದಜೀವ ನೊಂದುಕೊಳ್ಳದ ಹಾಗೆ ನಡೆನುಡಿಯಿರಲಿ.

ಇಬ್ಬರ ಪ್ರೀತಿ ಪ್ರೇಮದಲ್ಲಿ ಸಮಾಜ ಸಂಬಂಧಗಳು ಹಾಳಾಗದಿರಲಿ, ಅವರ ಪ್ರೀತಿ ಅಮರವಾಗಿರಲಿ ಮಾದರಿಯಾಗಲಿ. ಕೊನೆಯದಾಗಿ ವಿಶೇಷ ಸೂಚನೆ ಪ್ರೀತಿಸುವ ಸೋಗಿನಲ್ಲಿ ಈ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ವಿರೂಪ ಮಾಡಬೇಡಿ. ನಿಮ್ಮ ಪ್ರೇಮ ನಿವೇದನೆ ಒಪ್ಪಲಿಲ್ಲವೆಂದು ಅವಳನ್ನು ಅಥವಾ ಅವನ ಬದುಕನ್ನು ಹಾಳು ಮಾಡುವ ಸಾಹಸಕ್ಕೆ ಇಳಿಯಬೇಡಿ ಮತ್ತು ನಿಮ್ಮ ಅಮೂಲ್ಯವಾದ ಜೀವನವನ್ನು ಅಂತ್ಯಗೊಳಿಸಿಕೊಳ್ಳುವ ಮೂರ್ಖತನಕ್ಕೂ ಕೈಹಾಕಬೇಡಿ. ಕುತೂಹಲಕ್ಕಾಗಿ ಪ್ರಯತ್ನಕ್ಕೆಂದು ಪ್ರೀತಿ! ಪ್ರೇಮ !ಪ್ರಣಯ ಆಟವನ್ನು ಯಾರ ಬಳಿಯು ಆಡಲು ಹೋಗಬೇಡಿ. ಯಾಕೆಂದರೆ ಇತ್ಯಾದಿ ಇದು ಜೀವನ ನೆನಪಿರಲಿ.

ಪುರುಷೋತ್ತಮ್ ಅಗ್ನಿ .ಎಸ್, ಮೈಸೂರು

By admin