ಮಂಡ್ಯ: ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಮಾಡುತ್ತಿದ್ದವರ ಮೇಲೆ ಕಾನೂನು ಕ್ರಮ ಕೈಗೊಂಡಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ಕೋವಿಡ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಆಡಳಿತವು ಅದ್ಧೂರಿ ಮದುವೆಗಳಿಗೆ ನಿರ್ಬಂಧ ಹೇರಿದ್ದು, ಅದನ್ನು ಉಲ್ಲಂಘಿಸಿ ನೂರಾರು ಜನರನ್ನು ಸೇರಿಸಿ ಮದುವೆ ನಡೆಸುತ್ತಿದ್ದದ್ದರಿಂದ ಪೊಲೀಸರು ನವದಂಪತಿ ಹಾಗೂ ಪೋಷಕರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ, ಹರಿರಾಯನಹಳ್ಳಿ, ನಂದಿಪುರ ಮತ್ತು ಮುರುಕನಹಳ್ಳಿ ಗ್ರಾಮಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಸೇರಿಸಿಕೊಂಡು ಮದುವೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆಯ ನೌಕರರು ದಾಳಿ ನಡೆಸು ನಾಲ್ಕು ಜೋಡಿ ವಧು-ವರರು ಹಾಗೂ ಪೋಷಕರನ್ನು ವಶಕ್ಕೆ ಪಡೆದು ವಿವಾಹ ಕಾರ್ಯ ನಡೆಸುತ್ತಿದ್ದ ಪುರೋಹಿತರಿಗೆ ಪೊಲೀಸರು ದಂಢ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು, ತರಾತುರಿಯಲ್ಲಿ ಅನುಮತಿ ಪಡೆಯದೇ ವಿವಾಹ ಕಾರ್ಯವನ್ನು ನಡೆಸುತ್ತಿದ್ದ ಸ್ಥಳಗಳ ಮೇಲೆ ಏಕಾಏಕಿ ಪೋಲಿಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ವಿವಾಹಗಳಲ್ಲಿ ಕಾನೂನು ಬಾಹಿರವಾಗಿ ನೂರಾರು ಜನರು ಜಮಾಯಿಸಿರುವುದಲದೆ, ನೂರಾರು ಜನರಿಗೆ ಅಡಿಗೆ ಮಾಡಿರುವುದು, ಮನೆಯ ಮುಂಭಾಗದಲ್ಲಿ ಶಾಮಿಯಾನ ಹಾಕಿರುವುದನ್ನು ಚಿತ್ರೀಕರಣ ಮಾಡಿಕೊಂಡು ಪುರೋಹಿತರಿಗೆ ಸ್ಥಳದಲ್ಲಿಯೇ ದಂಢ ವಿಧಿಸಿ ಎಚ್ಚರಿಸಿದರೆ ವಧು-ವರರು ಹಾಗೂ ಎರಡು ಕಡೆಯ ಪೋಷಕರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಮಧ್ಯಾಹ್ನದವರೆಗೂ ಠಾಣೆಯಲ್ಲಿಯೇ ಕೂರಿಸಿಕೊಂಡು ಪ್ರಕರಣ ದಾಖಲಿಸಿ ಠಾಣಾ ಜಾಮೀನು ಪಡೆದುಕೊಂಡು ಬಿಡುಗಡೆ ಮಾಡಿ ಎಚ್ಚರಿಕೆ ನೀಡಿ ಕಳುಹಿಸಲಾಗಿರುವುದಾಗಿ ಹೇಳಿದರು.

ಕೆ.ಆರ್.ಪೇಟೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದ್ದು ಕೆ.ಆರ್.ಪೇಟೆ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದು ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ತಾಲೂಕಿನಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಅನುಮತಿ ಪಡೆಯದೇ ನೂರಾರು ಜನರನ್ನು ಸೇರಿಸಿಕೊಂಡು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದುವೆ, ನಿಶ್ಚಿತಾರ್ಥ, ನಾಮಕರಣ, ಗೃಹಪ್ರವೇಶ, ಕೋವಿಡ್ ಸೋಂಕಿನಿಂದ ನಿಧನರಾಧ ವ್ಯಕ್ತಿಗಳ ತಿಥಿ ಕಾರ್ಯವನ್ನು ಮಾಡುವ ಮೂಲಕ ಕಾನೂನನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

 

By admin