ಚಾಮರಾಜನಗರ: ಅರಣ್ಯ ಇಲಾಖೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಬಂಡೀಪುರ ರಿಸೆಪ್ಸನ್ ಕೇಂದ್ರದಲ್ಲಿ ಅರಣ್ಯ ಭೂಮಿ ರಕ್ಷಣೆ ಮತ್ತು ನ್ಯಾಯಾಲಯದ ತೀರ್ಪುಗಳ ಕುರಿತ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಎ.ಎಂ. ಅಣ್ಣಯ್ಯ ಅವರು ಮಾತನಾಡಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ರ ಸೆಕ್ಷನ್ ೬೪ಎ ಮೂಲಕ ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸುವಿಕೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೬ ಹಾಗೂ ಅರಣ್ಯ ಭೂಮಿಯ ವಿಷಯ ಕುರಿತು ನ್ಯಾಯಾಲಯ ನೀಡಿರುವ ತೀರ್ಪುಗಳ ಸಂಬಂಧ ಸವಿಸ್ತಾರವಾಗಿ ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ರಮೇಶ್‌ಕುಮಾರ್ ಅವರು ಬಂಡೀಪುರ ಭೂಮಿಯ ವಿವರಗಳು, ಪ್ರಸ್ತುತ ಅರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯಗಳ ಕುರಿತು ಪಿಪಿಟಿ ಮೂಲಕ ಪರಿಣಾಮಕಾರಿಯಾಗಿ ವಿವರಿಸಿದರು.


ಅರಣ್ಯ ಭೂಮಿ ಸಮಸ್ಯೆಗಳು, ಅತಿಕ್ರಮಣ ಮತ್ತು ಇತರ ಸಮಸ್ಯೆಗಳ ಕುರಿತು ಇರುವ ನ್ಯಾಯಾಲಯದ ತೀರ್ಪುಗಳ ಬಗ್ಗೆ ಕಾರ್ಯಗಾರದಲ್ಲಿ ಅಧಿಕಾರಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಾಯಿತು. ಎ.ಎಂ. ಅಣ್ಣಯ್ಯ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ, ಬಂಡೀಪುರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ರಮೇಶ್ ಕುಮಾರ್ ಅವರು ಸಂವಾದದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯ ವಹಿಸಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ೧೧೬ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕ್ಷೇತ್ರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರಶ್ನೋತ್ತರ ಅವಧಿ ಎರಡು ಗಂಟೆಗಳ ಕಾಲ ನಡೆದಿದ್ದು, ಒಳ್ಳೆಯ ಪ್ರಾಯೋಗಿಕ ಸಂವಹನ ಕಾರ್ಯಕ್ರಮ ಉಪಯುಕ್ತ ಎನಿಸಿದೆ. ಡಾ. ಪಿ. ರಮೇಶ್‌ಕುಮಾರ್ ಹಾಗೂ ಅವರ ತಂಡ ವಾಚನ ಸಾಮಗ್ರಿಗಳು, ಆಡಿಯೋ ದೃಶ್ಯ ಸಾಧನಗಳು ಸೇರಿದಂತೆ ಇನ್ನಿತರ ಉತ್ತಮ ವ್ಯವಸ್ಥೆಯ ಮೂಲಕ ಕಾರ್ಯಾಗಾರವನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು.