
ಚಾಮರಾಜನಗರ: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಬಜೆಟ್ ನಲ್ಲಿ 100 ಕೋಟಿ ರೂ.ಮೀಸಲಿಡಬೇಕು ಎಂದು ಆಗ್ರಹಿಸಿ
ತಾಲೂಕು ಉಪ್ಪಾರಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ನಮ್ಮ ಉಪ್ಪಾರ ಸಮಾಜವು ಸುಮಾರು ೪೦ ಲಕ್ಷ ಜನ ಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿ ಸುಮಾರು ೨೨೪ ವಿಧಾನ ಸಭಾ ಕ್ಷೇತ್ರದಲ್ಲಿ ೧೦೦ ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತ್ತು ೨೮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ೧೫ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಉಪ್ಪಾರರೇ ನಿರ್ಣಾಯಕರಾಗಿದ್ದಾರೆ. ಕಳೆದ ೭೫ ವರ್ಷಗಳಿಂದ ಸರಕಾರ ಉಪ್ಪಾರ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತ ಬರಲಾಗಿದೆ, ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಸ್ಥಾಪಿಸಿ ೫೦ ಕೋಟಿ ರೂ. ಮೀಸಲಿಡಲಾಗಿದೆ. ಆದರೆ
ಅಭಿವೃದ್ಧಿ ಮಾತ್ರ ಶೂನ್ಯ. ರಾಜ್ಯಸರಕಾರ ಈ ಸಾಲಿನಲ್ಲಿ ಮಂಡಿಸುವ ಬಜೆಟ್ ನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ಮೀಸಲಿಡಬೇಕು, ಜೊತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಾಲೂಕು ಉಪ್ಪಾರಸಂಘದ ಅಧ್ಯಕ್ಷ ಪಿ.ಲಿಂಗರಾಜು, ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಆರ್.ಮಹದೇವಶೆಟ್ಟಿ, ನಿರ್ದೇಶಕ ರಾಚಶೆಟ್ಟಿ, ಕೆಂಪನಪುರಮಹದೇವಶೆಟ್ಟಿ, ಸರಗೂರುಮೋಳೆ ರಾಜು, ವಕೀಲ ಲೋಕೇಶ್ ಒತ್ತಾಯಿಸಿದ್ದಾರೆ.
