ಬೆಂಗಳೂರು: ಭಾರತ ದೇಶದ 70ಕ್ಕು ಹೆಚ್ಚು ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಉತ್ತಮ ಆಡಳಿತ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಹೊರತು ಸಫಲರಾಗಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಹಾಗೂ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ ವಿಷಾದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಕೊರೊನಾ 19ರ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು “ವಿಚಾರ ಕಲರವ” ಕಾರ್ಯಕ್ರಮದ ಮೊದಲ ಉಪನ್ಯಾಸ ಮಾಲಿಕೆಯ “ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ” ಎಂಬ ವಿಚಾರವನ್ನು ಮಂಡಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಉಪನ್ಯಾಸ ನೀಡಿದ ಅವರು, ಸಂವಿಧಾನ ರಚನೆ ಸಂದರ್ಭದಲ್ಲಿನ ಕೆಲ ಲೋಪಗಳು ಇಂದಿನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನದ ಮೂರು ಅಂಗಳಲ್ಲಿಯೂ ನೂನ್ಯತೆಗಳಿರುವುದರಿಂದ ಉತ್ತಮ ಆಡಳಿತ ಎಷ್ಟರ ಮಟ್ಟಿಗೆ ನಿರೀಕ್ಷಿಸಲು ಸಾಧ್ಯವಾಗುತ್ತದೆ, ಸಂವಿಧಾನ ರಚನೆ ಸಂದರ್ಭದಲ್ಲಿನ ಹಿರಿಯರು ಜನಪ್ರತಿನಿಧಿಗಳಾಗಲು ವಿದ್ಯಾರ್ಹತೆಯನ್ನು ನಿರಾಕರಿಸಿದ್ದರ ಪರಿಣಾಮ ದೇಶವನ್ನು ಆಡಳಿತ ನಡೆಸುವವರು ಯಾರಾಗುತ್ತಿದ್ದಾರೆಂದು ಬೇರೆ ಹೇಳಬೇಕಿಲ್ಲ ಎಂದರು.
ಎಲೆಕ್ಷನ್ ವಾಚ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಕಳೆದ ಚುನಾವಣೆಗೆ ಹೋಲಿಸಿದರೆ ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಜನಪ್ರತಿನಿಧಿಗಳಾದ ಪ್ರಮಾಣ ಶೇ 7.2ರಷ್ಟು ಹೆಚ್ಚಳವಾಗಿದೆ. ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಯಾವ ರೀತಿ ಆಡಳಿತ ಮಾಡಲು ಸಾಧ್ಯ? ಸಭೆಯಲ್ಲಿ ಯಾವುದೇ ಗಂಭೀರವಾದ ವಿಚಾರಗಳಾಗಲಿ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಅನೇಕ ಮಸೂದೆಗಳು ಸರಿಯಾಗಿ ಚರ್ಚೆಗಳಿಗೆ ಒಳಪಡದೇ ಪಾಸ್ ಆಗುತ್ತಿರುವುದು ಸದ್ಯದ ಬೇಜವಾಬ್ದಾರಿ ಆಡಳಿತಕ್ಕೆ ಕೈಗನ್ನಡಿ. ಈ ಸಂಬಂಧ 2005ರಲ್ಲಿ ಶೇಕಡ 25ರಷ್ಟು ಹಾಗೂ 2007ರಲ್ಲಿ ಶೇಕಡ 32ರಷ್ಟು ಮಸೂದೆಗಳು ಚರ್ಚೆಗೆ ಒಳಪಡದೆ ಕಾನೂನುಗಳನ್ನು ಮಾಡಿರುವುದನ್ನು ಕೆಲವು ಸಂಸ್ಥೆಗಳು ವರದಿ ಮಾಡಿರುವುದನ್ನು ನಾವು ಗಮನಿಸಬೇಕಾಗಿದೆ. ವೈಜ್ಞಾನಿಕವಾಗಿ ಚರ್ಚೆಗೆ ಒಳಪಡಿಸಿದ ಕಾನೂನನ್ನು ನೇರವಾಗಿ ಜನಸಾಮಾನ್ಯನ ಮೇಲೆ ಪ್ರಯೋಗ ಮಾಡುವುದು ಎಷ್ಟು ಸಮಂಜಸ.ಉತ್ತಮ ವ್ಯಕ್ತಿತ್ವ ಇಲ್ಲದೇ ಇರುವ ವ್ಯಕ್ತಿಗಳಿಂದ ಉತ್ತಮ ಆಡಳಿತ ನಿರೀಕ್ಷಿಸುವುದೇ ತಪ್ಪು ಎಂಬಂತಾಗಿದೆ ಎಂದು ನುಡಿದರು.
ಕಾರ್ಯಾಂಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶಾಸಕಾಂಗದ ಕೈವಾಡವಿಲ್ಲದೇ ಒಬ್ಬ ಅಧಿಕಾರಿ ನೇಮಕವಾಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಪಬ್ಲಿಕ್ ಸರ್ವಿಸ್ ಕಮಿಷನ್ ನ ಮುಖ್ಯಸ್ಥರ ಬಗ್ಗೆ ಎಷ್ಟೆಷ್ಟು ಅಪರಾಧ ಪ್ರಕರಣಗಳು ದಾಖಲಿವೆ, ಹಾಗೆಯೆ ಕೆಲ ಸದಸ್ಯರ ಮೇಲಿನ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದನ್ನು ಗಮನಿಸಿದರೆ ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನಿಸುತ್ತಿದೆ ಎಂದರು. ನ್ಯಾಯಾಂಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಸಕಾಂಗ, ಕಾಯಾಂಗದ ಮೇಲೆ ಜನರ ವಿಶ್ವಾಸವಿಟ್ಟಿಲ್ಲ. ಆದರೆ ಇನ್ನೂ ಸ್ವಲ್ಪ ನ್ಯಾಯಾಂಗದ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಆದರೆ ನ್ಯಾಯಾಂಗದಲ್ಲಿಯೂ ಕೆಲ ದೋಷಗಳಿವೆ. ಕೆಲವೊಂದು ಪ್ರಕರಣಗಳು 40-50 ವರ್ಷಗಳ ವರೆಗೆ ಇತ್ಯರ್ಥ ಕಾಣದೇ ಮುಂದುವರೆಸುತ್ತಾ ಸಾಗಿದರೆ ಕಕ್ಷಿದಾರರ ಗತಿಏನು? ನಮ್ಮಲ್ಲಿ ಹಂತಹಂತವಾಗಿ ಕೋರ್ಟ್ ಗಳನ್ನು ನಿರ್ಮಿಸಿದ್ದಾರೆ. ಅವುಗಳು ವಿಳಂಬಕ್ಕೆ ಕಾರಣವಾಗುತ್ತಿವೆ ಹೊರತು ತ್ವರಿತ ನ್ಯಾಯ ನಿರ್ಣಯಕ್ಕೆ ಸಾಧ್ಯವಾಗುವುದಿಲ್ಲ,
ಮೂರು ಅಂಗಗಳಲ್ಲಿ ಪ್ರಾಮಾಣಿಕತೆ ಹುಡುಕುವುದು ಕಷ್ಟಸಾಧ್ಯ. ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ದುರಾಸೆ, ದುರಾಸೆಗೆ ಸಮಾಜದ ಕಾರಣ, ಮೊದಲು ಪ್ರಾಮಾಣಿಕರನ್ನು ಮಾತ್ರ ಗೌರವಿಸುತ್ತಿದ್ದರು. ಆದರೆ ಈಗ ಭ್ರಷ್ಟರನ್ನು, ವಂಚಿಸಿದುಡ್ಡು ಮಾಡಿದವರನ್ನು ಮಾತ್ರ ಗೌರವಿಸುವ ಧೋರಣೆಗಳು ಬೆಳೆದುಬಿಟ್ಟಿದೆ, ಈ ಕಾರಣದಿಂದಲೇ ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಪದೇ ಪದೇ ಹೇಳುತ್ತಿದ್ದೇನೆ.ಭ್ರಷ್ಟಾಚಾರವು ಇಂದು ನಿನ್ನೆಯದಲ್ಲ, ಸುಮಾರು ವರ್ಷಗಳಿಂದಲೂ ಬಂದಿರುವಂತಹದು, ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.
ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಎರಡು ಮೌಲ್ಯಗಳನ್ನು ತಿಳಿಸಿಕೊಡಬೇಕು ಹಾಗೆಯೇ ಅದೇ ರೀತಿ ಬೆಳೆಯುವಂತೆ ನೋಡಿಕೊಳ್ಳಬೇಕು ತೃಪ್ತಿ ಹಾಗೂ ಮಾನವೀಯತೆ ಅವೇ ಎರಡು ಗುಣಗಳು. ಇವುಗಳನ್ನು ರೂಢಿಸಿಕೊಂಡರೆ ದುರಾಸೆ ಮೂಡುವುದಿಲ್ಲ, ಇದ್ದುದರಲ್ಲಿಯೇ ತೃಪ್ತಿಪಡುವ ಗುಣ ಹಾಗೂ ಮಾನವೀಯತೆಯಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.