ಗುಂಡ್ಲುಪೇಟೆ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಬಾಬು ಜಗಜೀವನ ರಾಂ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಪುರಸಭಾ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ 115ನೇ ವರ್ಷದ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಜೀವಿತದ ಅವಧಿಯಲ್ಲಿ ಸಮಾಜ ಹಾಗೂ ದೇಶಕ್ಕೆ ಅಪಾರ ಕೊಡುಗೆ ನೀಡುವ ಜೊತೆಗೆ ಜಾತಿ ಪದ್ದತಿ ಯನ್ನು ಸುಧಾರಣೆಗೆ ತರಲು ಅವಿರತ ಪ್ರಯತ್ನ ಮಾಡಿದರು ಎಂದರು.

ಡಾ.ಬಾಬು ಜಗಜೀವನ ರಾಂ ಬಾಲ್ಯದ ವಿಧ್ಯಾರ್ಥಿ ಜೀವನದಲ್ಲಿ ಶಾಲೆಯಲ್ಲಿ ಸಮಬಾಳು, ಸಮತತ್ವ ಎಂಬುದನ್ನು ಸಮಾಜಕ್ಕೆ ತೋರಿಸಿಕೊಡುವ ಮೂಲಕ ಪ್ರತಿಭೆ ತೋರಿಸಿಕೊಟ್ಟವರು. ಉಪ್ಪಿನ ಸತ್ಯಾಗ್ರಹ, ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಉಗ್ರ ಹೋರಾಟ ನಡೆಸಿದ್ದರು. ಇಂದಿನ ಯುವ ಸಮುದಾಯ ಇವರ ಕಾರ್ಯ ಕ್ಷಮತೆ, ಅಡಳಿತ ವೈಖರಿ, ಆದರ್ಶ-ಚಿಂತನೆ, ಹೋರಾಟ ಮನೋಭಾವವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅರ್ಥಿಕವಾಗಿ ಮುಂದೆ ಬರಬೇಕು. ಜನಾಂಗದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾದ್ಯ ಇದನ್ನು ಮನಗಂಡು ಎಲ್ಲರೂ ಕಡ್ಡಾಯವಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.

ಮುಖ್ಯ ಭಾಷಣಕಾರ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಸಂಪನ್ಮೂಲ ವ್ಯಕ್ತಿ ಹಂಗಳ ಮಣಿಕಂಠ ಮಾತನಾಡಿ, ಅಸ್ಪೃಶ್ಯತೆ ಸಮಾಜದ ಕಳಂಕವಾಗಿದ್ದು, ಕಷ್ಟ ಪಟ್ಟು ದುಡಿದರೆ ನಿಮ್ಮ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದ ಬಾಬೂಜೀ ಯುವಕರಾಗಿದ್ಧಾಗಲೇ ಸ್ವತಂತ್ರ ಹೋರಾಟಕ್ಕೆ ಧುಮುಕಿದವರು. ಹರಿಜನರು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಅವರನ್ನು ಮೇಲೆತ್ತುವ ಕೆಲಸ ಮಾಡುವ ಮಾಡುವ ಮೂಲಕ ದಲಿತರ ಅಭಿವೃದ್ಧಿಗೆ ಶ್ರಮಿಸಿದ್ಧಾರೆ ಎಂದರು.

ನವ ಭಾರತ ನಿರ್ಮಾಣದಲ್ಲಿ ಬಾಬೂಜೀ ಕೊಡುಗೆ ಅಪಾರವಾಗಿದ್ದು, ನಾಲ್ಕು ದಶಕ ಕೇಂದ್ರ ಮಂತ್ರಿಯಾಗಿ ಅಪ್ರತಿಮ ರಾಜಕಾರಣಿಯಾಗಿದ್ದರು. ಹಸಿರು ಕ್ರಾಂತಿ, ಏರ್ ಇಂಡಿಯಾ, ದೂರವಾಣಿ ಕೇಂದ್ರ, ಅಂಚೆ ತಂತಿಯನ್ನು ದೇಶಾದ್ಯಂತ ಜಾರಿಗೆ ತಂದು, ಕಾರ್ಮಿಕರು, ಸೈನಿಕರು, ರೈತರ ಹಿತ ರಕ್ಷಣೆ ಸಾರಿದರು ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಪಿ.ಗಿರೀಶ್ ಮಾತನಾಡಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಸಾರಿದವರು ಬಾಬು ಜಗಜೀವನ ರಾಂ. ಆದ್ದರಿಂದ ಅವರ ತತ್ವ ಸಿದ್ದಾಂತಗಳನ್ನು ಮುಂದಿನ ಪೀಳಿಗೆಗು ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ತಹಶಿಲ್ದಾರ್ ಸಿ.ಜಿ.ರವಿಶಂಕರ್ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಸ್ವತಂತ್ರ ಹೋರಾಟಗಾರಲ್ಲಿ ಮುಂಚೂಣಿಯ ನಾಯಕರು. ಜಾತಿ ವ್ಯವಸ್ಥೆ ತೊಡೆಯಲು ಮುಂದಾದವರು. ಆಹಾರದ ಸಮಸ್ಯೆ ಆಗುತ್ತಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡಿದ್ದಾರೆ. ಜೊತೆಗೆ ಕೇಂದ್ರ ಮಂತ್ರಿಯಾಗಿಯು ಅನೇಕ ಸೇವೆ ಸುಧಾರಣೆ ತಂದಿದ್ದಾರೆ. ಆದ್ದರಿಂದ ಬಾಬೂಜೀ ಆದರ್ಶ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.

ಮೆರವಣಿಗೆ: ಇದಕ್ಕು ಮೊದಲು ವಿವಿಧ ಕಲಾ ತಂಡಗಳೊಂದಿಗೆ ಡಾ.ಬಾಬು ಜಗಜೀಬನರಾಂ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಪುರಸಭಾ ಸದಸ್ಯರಾದ ಅಣ್ಣಯ್ಯಸ್ವಾಮಿ, ಶಶಿಧರ್ ಪಿ.ದೀಪು, ನಾಗೇಶ್, ರಂಗಸ್ವಾಮಿ, ಸಾಜಿದಾ ಬೇಗಂ, ಮಹದೇವಮ್ಮ, ರಾಜಗೋಪಾಲ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್ ರಾಜ್, ತಾಪಂ ಇಓ ಶ್ರೀಕಂಠರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಹೆಚ್.ಎನ್.ನಂಜುಂಡೇಗೌಡ, ಸಿಡಿಪಿಓ ಚಲುವರಾಜು, ಸಿದ್ದಯ್ಯ, ಅಗತಗೌಡನಹಗಲ್ಳಿ ಬಸವರಾಜು, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಬ್ರಹ್ಮಾನಂದ, ಮಹದೇವಯ್ಯ, ಸಿದ್ದರಾಜು ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ವರದಿ: ಬಸವರಾಜು ಎಸ್.ಹಂಗಳ